ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಗದ್ದುಗೆ ಹಿಡಿಯಲು ಕೈ–ಕಮಲ ಪೈಪೋಟಿ

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಗರಿಗೆದರಿದ ರಾಜಕೀಯ
Last Updated 10 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಎರಡನೇ ಬಾರಿಗೆ ರಾಜ್ಯ ಸರ್ಕಾರ ಪರಿಷ್ಕೃತಗೊಳಿಸಿ ಪ್ರಕಟಿಸಿದ ಬೆನ್ನಲ್ಲೇ, ಅಧಿಕಾರ ಹಿಡಿಯಲು ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಾಳೆಯಗಳಲ್ಲಿ ತೆರೆಮರೆಯಲ್ಲಿ ರಾಜಕೀಯ ತಂತ್ರಗಾರಿಕೆ ಶುರುವಾಗಿದೆ.

ಈ ಹಿಂದೆ ಎಸ್‌ಸಿ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ ಇದೀಗ ಸಾಮಾನ್ಯ ವರ್ಗಕ್ಕೆ ಮೀಸಲಾಗಿ ಬದಲಾಗಿದೆ. ಉಪಾಧ್ಯಕ್ಷ ಸ್ಥಾನ ಬಿಸಿಎಂ ಎ ವರ್ಗಕ್ಕೆ ಕಾಯಂ ಆಗಿದೆ.

2013ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೈಪೋಟಿ ನೀಡಿದ್ದ ಜೆಡಿಎಸ್‌ ಕಳೆದ ಚುನಾವಣೆಯ ಹೊತ್ತಿಗೆ ಎರಡಂಕಿಗೆ ಇಳಿದು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರ, 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಹೊರಹೊಮ್ಮಿದ ಬಿಜೆಪಿಯ ಅಚ್ಚರಿಯ ಫಲಿತಾಂಶ ಕೇಸರಿ ಪಾಳೆಯಕ್ಕೆ ನೀರು ಎರೆಯಿತು.

ಸ್ಥಳೀಯ ಶಾಸಕ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ರಾಜಕೀಯ ತಂತ್ರಗಾರಿಕೆ ಎದುರು ಸೋತು, ಹತಾಶೆಗೊಂಡಿದ್ದ ಕಾಂಗ್ರೆಸಿಗರು, ನಗರಸಭೆಗೆ ಕಳೆದ ಫೆಬ್ರುವರಿಯಲ್ಲಿ ನಡೆದ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟದಲ್ಲಿ 31 ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಗೆದ್ದು ಬೀಗಿದರೆ, ಬಿಜೆಪಿಗರು ಒಂಬತ್ತು ವಾರ್ಡ್‌ಗಳಲ್ಲಿ ಗೆಲುವಿನ ನಗೆ ಬೀರಿದ್ದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಬಲ ಎದುರಾಳಿಯಾಗಿದ್ದ ಜೆಡಿಎಸ್‌ ಕಳೆದ ಚುನಾವಣೆಯಲ್ಲಿ ಕೇವಲ ಎರಡೇ ಸ್ಥಾನಕ್ಕೆ ಸೀಮಿತವಾಗುವ ಮೂಲಕ ಮೂಲೆಗುಂಪಾಯಿತು. ನಾಲ್ಕು ವಾರ್ಡ್‌ಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ. ಸದ್ಯ, ನಗರಸಭೆ ಚುಕ್ಕಾಣಿ ಹಿಡಿಯಲು ಕೈ ಮತ್ತು ಕಮಲ ಪಾಳೆಯಗಳಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ ಎನ್ನುತ್ತವೆ ಮೂಲಗಳು.

ನಗರಸಭೆಯಲ್ಲಿ ಕೇಸರಿ ಪತಾಕೆ ಹಾರಿಸುವ ಕನಸಿನಲ್ಲಿದ್ದ ಬಿಜೆಪಿ ಪಾಳೆಯಕ್ಕೆ ನಗರದ ಮತದಾರ ತಣ್ಣೀರು ಎರಚಿ ಕಾಂಗ್ರೆಸ್‌ಗೆ ಬಹುಮತ ನೀಡಿದರೂ ಸುಧಾಕರ್ ಅವರ ತಂತ್ರಗಾರಿಕೆ ಮೇಲೆ ನಂಬಿಕೆ ಇಟ್ಟಿರುವ ಕೇಸರಿ ಪಾಳೆಯದವರು ಅಧಿಕಾರ ಹಿಡಿಯುವ ಆಸೆ ಜೀವಂತವಾಗಿಟ್ಟುಕೊಂಡಿದ್ದಾರೆ.

ಈ ಹಿಂದೆ ನಗರಸಭೆಯಲ್ಲಿ ಜೆಡಿಎಸ್ ಶಕ್ತಿಗುಂದಿಸುವ ಉಪಾಯ ಮಾಡಿ, ಸುಧಾಕರ್ ಅವರು 2017ರಲ್ಲಿ ಜೆಡಿಎಸ್‌ನ ಆರು ಸದಸ್ಯರನ್ನು ಅನಾಮತ್ತಾಗಿ ಕಾಂಗ್ರೆಸ್‌ ಪಾಳೆಯದ ತೆಕ್ಕೆಗೆ ತೆಗೆದುಕೊಂಡು, ಜೆಡಿಎಸ್‌ ಸಂಖ್ಯಾಬಲ ಮೂರಕ್ಕೆ ಕುಸಿಯುವಂತೆ ಮಾಡಿದ್ದರು. ಉಪ ಚುನಾವಣೆ ಹೊಸ್ತಿಲಲ್ಲಿ ನಡೆದ ಪಕ್ಷಾಂತರ ಪರ್ವ ಕೂಡ ಜೆಡಿಎಸ್‌ ಬಲಹೀನಗೊಳಿಸಿದ್ದರು.

ಆದ್ದರಿಂದ, ಇದೀಗ ಬಿಜೆಪಿಯವರು 9 ಸ್ಥಾನಗಳನ್ನು ಗೆದ್ದರೂ ಜೆಡಿಎಸ್‌ನವರು, ಪಕ್ಷೇತರರನ್ನು ಸೆಳೆದು ಮತ್ತು ಶಾಸಕರು, ಸಂಸದರ ಮತಗಳ ಆಧಾರದಲ್ಲಿ ಅಧಿಕಾರದ ಕನಸು ಕಾಣುತ್ತಿದ್ದಾರೆ. ಕೈ ಪಾಳೆಯ ಸೇರಬೇಕಾದ ಅಧಿಕಾರ ಕಸಿಯುವ ಹುನ್ನಾರ ಜೋರಾಗಿಯೇ ನಡೆದಿವೆ ಎನ್ನಲಾಗಿದೆ.

ಪ್ರಸ್ತುತ ಉಭಯ ಬಣಗಳಲ್ಲಿ ರಾಜಕೀಯ ಗರಿಗೆದರಿದರೂ ಯಾರೆಲ್ಲ ಅಧ್ಯಕ್ಷರ ಗಾದೆಗೆ ಪೈಪೋಟಿ ನಡೆಸುತ್ತಿದ್ದಾರೆ ಎನ್ನುವ ಗುಟ್ಟು ಮಾತ್ರ ಯಾರೊಬ್ಬರೂ ಬಿಟ್ಟು ಕೊಡುತ್ತಿಲ್ಲ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಎರಡು ಕಡೆಗಳಲ್ಲಿ ಅನೇಕರು ಆಕಾಂಕ್ಷಿಗಳಾಗಿ, ತಮ್ಮ ನಾಯಕರ ಮೂಲಕ ಗದ್ದುಗೆ ಏರುವ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ರಾಜಕೀಯ ಕುತೂಹಲಕ್ಕೆ ಶೀಘ್ರದಲ್ಲಿಯೇ ಉತ್ತರ ದೊರೆಯಲಿದೆ.

ನಗರಸಭೆಯಲ್ಲಿ ಪಕ್ಷಗಳ ಬಲಾಬಲ
ಪಕ್ಷ; ಸ್ಥಾನ
ಕಾಂಗ್ರೆಸ್‌; 16
ಜೆಡಿಎಸ್; 2
ಬಿಜೆಪಿ; 9
ಪಕ್ಷೇತರರು; 4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT