ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಎಸ್‌ಪಿ ಕಚೇರಿ ಎದುರು ಕಾನ್‌ಸ್ಟೆಬಲ್‌ಗಳ ಪ್ರತಿಭಟನೆ

ಕಪ್ಪು ಹಣ ದುರ್ಬಳಕೆ ಆರೋಪದ ಮೇಲೆ ಅಮಾನತಾಗಿದ್ದ ಸಿಬ್ಬಂದಿ; ಎಸ್‌ಪಿ ವಿರುದ್ಧ ಅಸಮಾಧಾನ
Published 11 ಮೇ 2024, 14:14 IST
Last Updated 11 ಮೇ 2024, 14:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಾರತಮ್ಯ ಮಾಡುತ್ತಿದ್ದಾರೆ. ನಮ್ಮ ವಿರುದ್ಧದ ಇಲಾಖಾ ವಿಚಾರಣೆಯನ್ನು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರೂ ಸ್ಪಂದಿಸಿಲ್ಲ’ ಎಂದು ದೂರಿ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಕಾನ್‌ಸ್ಟೆಬಲ್ ಅಶೋಕ್ ಮತ್ತು ಚೇಳೂರು ಠಾಣೆ ಕಾನ್‌ಸ್ಟೆಬಲ್ ನರಸಿಂಹಮೂರ್ತಿ ಕುಟುಂಬ ಸಮೇತ ಶನಿವಾರ ನಗರ ಹೊರವಲಯದ ಜಿಲ್ಲಾ ಪೊಲೀಸ್ ಕಚೇರಿ ಎದುರು ಪ್ರತಿಭಟಿಸಿದರು.

ಮಕ್ಕಳು, ‍ಪತ್ನಿಯ ಜತೆ ಬಂದ ಕಾನ್‌ಸ್ಟೆಬಲ್‌ಗಳು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಕಚೇರಿ ಪ್ರವೇಶ ದ್ವಾರದಲ್ಲಿಯೇ ಕುಳಿತರು.  

ಕಪ್ಪು ಹಣ ವರ್ಗಾವಣೆ ಜಾಲದಿಂದ ವಶಕ್ಕೆ ಪಡೆದ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ್ ಹಾಗೂ ಕಾನ್‌ಸ್ಟೆಬಲ್‌ಗಳಾದ ನರಸಿಂಹಮೂರ್ತಿ, ಅಶೋಕ್ ಅವರನ್ನು 2023ರ ಆಗಸ್ಟ್‌ನಲ್ಲಿ ಕೆಲಸದಿಂದ ಅಮಾನತುಗೊಳಿಸಲಾಗಿತ್ತು. ನಂತರ  ಅಮಾನತು ವಾಪಸ್ ಪಡೆದು ಕೆಲಸಕ್ಕೆ ನಿಯೋಜಿಸಲಾಗಿತ್ತು. ಸಿಬ್ಬಂದಿ ಮೇಲೆ ಇಲಾಖಾ ವಿಚಾರಣೆ ನಡೆದಿತ್ತು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಠಾಣೆಯಲ್ಲಿ  ಇಬ್ಬರು ಕಾನ್‌ಸ್ಟೆಬಲ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಪ್ರಕರಣ ಸಹ ದಾಖಲಾಗಿದೆ. 

‘ಈ ಪ್ರಕರಣದಲ್ಲಿ ನಮ್ಮದು ತಪ್ಪಿಲ್ಲ. ಕೆಲವು ಅಧಿಕಾರಿಗಳು ತಪ್ಪು ಮಾಡಿದ್ದಾರೆ. ವಿಚಾರಣೆ ವೇಳೆ ನಮ್ಮ ಅಹವಾಲು ಕೇಳಿಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿದ್ದೇವೆ. ತಾರತಮ್ಯ ಮಾಡಲಾಗುತ್ತಿದೆ. ವಿಚಾರಣೆಯನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿ ಎಂದು ಹಲವು ಬಾರಿ ಮನವಿ ಮಾಡಿದರೂ ಎಸ್‌ಪಿ ಸ್ಪಂದಿಸುತ್ತಿಲ್ಲ. ನಮಗೆ ನ್ಯಾಯ ದೊರೆಯಬೇಕು’ ಎಂದು ಅಶೋಕ್ ಮತ್ತು ನರಸಿಂಹಮೂರ್ತಿ ತಿಳಿಸಿದರು.

‘ನಮಗೆ ಅಧಿಕಾರಿಗಳು ಮೋಸ ಮಾಡುತ್ತಿದ್ದಾರೆ. ವಿಚಾರಣೆ ಸರಿಯಾಗಿ ನಡೆಸಿಲ್ಲ. ಕೆಳಹಂತದ ಸಿಬ್ಬಂದಿ ಎಂದು ಕೇವಲವಾಗಿ ನೋಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ.ಖಾಸಿಂ, ಡಿವೈಎಸ್‌ಪಿ ಶಿವಕುಮಾರ್ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. 

‘ನಿಮ್ಮ ಅಹವಾಲು ಏನಿದೆ ಎನ್ನುವುದನ್ನು ಲಿಖಿತವಾಗಿ ನೀಡಿ. ವಿಚಾರಣೆಗೆ ಕರೆದಾಗ ನೀವು ಬಂದಿಲ್ಲ. ಈಗಲೂ ಸಮಯ ಬೇಕು ಎಂದು ಕೇಳಿದ್ದೀರ ಅದಕ್ಕೆ ಸಂಬಂಧಿಸಿದಂತೆ ಮನವಿ ಕೊಡಿ’ ಎಂದು ಆರ್‌.ಐ.ಖಾಸಿಂ ಅವರು ಸಿಬ್ಬಂದಿಗೆ ತಿಳಿಸಿದರು. 

‘ವಿಚಾರಣಾಧಿಕಾರಿ ಕರೆದಾಗ ನೀವು ಬರಬೇಕು. ನಿಮ್ಮ ಅಹವಾಲು ಹೇಳಬೇಕು. ಆದರೆ ವಿಚಾರಣೆಗೆ ಕರೆದರೂ ಬರುತ್ತಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ನೀವು ಒಂದು ಸಂದೇಶವನ್ನು ಹರಿಬಿಟ್ಟಿದ್ದಿರಿ. ಇದು ಕಾನೂನು ಬಾಹಿರ ಎಂದು ನಾನು ಹೇಳಿದ್ದೆ. ನಿಮಗೆ ಗೊತ್ತಾಗದಿದ್ದರೆ ನೇರವಾಗಿ ನನ್ನ ಬಳಿ ಬನ್ನಿ ಎಂದೂ ಹೇಳಿದ್ದೆ’ ಎಂದರು.

ಕಾನ್‌ಸ್ಟೆಬಲ್‌ಗಳ ಜೊತೆ ಮಾತುಕತೆ ನಡೆಸಿದ ಎಎಸ್‌ಪಿ ಆರ್.ಐ.ಖಾಸಿಂ ಮತ್ತು ಡಿವೈಎಸ್‌ಪಿ ಶಿವಕುಮಾರ್
ಕಾನ್‌ಸ್ಟೆಬಲ್‌ಗಳ ಜೊತೆ ಮಾತುಕತೆ ನಡೆಸಿದ ಎಎಸ್‌ಪಿ ಆರ್.ಐ.ಖಾಸಿಂ ಮತ್ತು ಡಿವೈಎಸ್‌ಪಿ ಶಿವಕುಮಾರ್
ಡಿ.ಎಲ್.ನಾಗೇಶ್
ಡಿ.ಎಲ್.ನಾಗೇಶ್

ಅಮಾನತು ಪ್ರಕರಣದ ಹಿನ್ನೆಲೆ: ಮೈಸೂರಿನ ತ್ರಿವೇಣಿ ಅವರನ್ನು ಸಂಪರ್ಕಿಸಿದ ಶ್ರೀಕಾಂತ್ ರೆಡ್ಡಿ ಮತ್ತಿತರರು ತಮ್ಮ ಬಳಿ ರಾಜಕಾರಣಿಯೊಬ್ಬರ ₹2 ಸಾವಿರ ಮುಖಬೆಲೆಯ ನೋಟುಗಳು ಇವೆ. ಈ ನೋಟುಗಳನ್ನು ಪಡೆದು ₹500 ನೋಟುಗಳನ್ನು ನೀಡಿದರೆ ನಿಮಗೆ ಹೆಚ್ಚು ಹಣ ನೀಡುತ್ತೇವೆ ಎಂದು ಕಳೆದ ವರ್ಷ ನಂಬಿಸಿದ್ದರು. ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ (ಗಡಿದಂ) ಬಳಿ ಈ ಹಣ ಬದಲಾವಣೆಗೆ ಮುಂದಾಗಿದ್ದರು. ಈ ಬಗ್ಗೆ ಬಾಗೇಪಲ್ಲಿ ಠಾಣೆ ಸಿಬ್ಬಂದಿಯಾಗಿದ್ದ ನರಸಿಂಹಮೂರ್ತಿ ಅಶೋಕ್‌ಗೆ ಮಾಹಿತಿ ದೊರೆತಿತ್ತು. ಹಣ ವರ್ಗಾವಣೆಗೆ ಬಂದವರನ್ನು ವಶಕ್ಕೆ ಪಡೆದಿದ್ದರು. ಅವರನ್ನು ಠಾಣೆಯಲ್ಲಿ ಇರಿಸಿಕೊಂಡಿದ್ದರು. ಆದರೆ ಈ ಬಗ್ಗೆ ಯಾವುದೇ ಪ್ರಕರಣ ಸಹ ದಾಖಲಿಸಿರಲಿಲ್ಲ. ಇವರಿಂದ ವಶಕ್ಕೆ ಪಡೆದಿದ್ದ ಹಣವನ್ನು ಪೊಲೀಸರೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ತ್ರಿವೇಣಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರ ವಿರುದ್ಧ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಡಿವೈಎಸ್‌ಪಿ ಅವರಿಗೆ ವಹಿಸಲಾಗಿತ್ತು.

‘ವಿಚಾರಣೆಗೆ ಸಹಕರಿಸದ ಸಿಬ್ಬಂದಿ’: ಕಪ್ಪು ಹಣ ವರ್ಗಾವಣೆ ಜಾಲದಿಂದ ವಶಕ್ಕೆ ಪಡೆದ ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಈ ಇಬ್ಬರು ಸಿಬ್ಬಂದಿಯನ್ನು ಕಳೆದ ವರ್ಷ ಅಮಾನತುಗೊಳಿಸಲಾಗಿತ್ತು. ನಂತರ ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು. ಆದರೆ ಈ ಸಿಬ್ಬಂದಿ ವಿಚಾರಣೆಗೆ ಸಹಕರಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.  ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಗಳು ಪ್ರಕಟವಾಗಿದ್ದವು. ಸಿಬ್ಬಂದಿ ಕ್ರಿಮಿನಲ್‌ಗಳ ಜತೆ ಕೈ ಜೋಡಿಸಿದಾಗ ನಾವು ಏನು ಮಾಡಬೇಕು ಎಂದರು. ತಪ್ಪು ಮಾಡಿಲ್ಲದಿದ್ದರೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಿಚಾರಣಾಧಿಕಾರಿ ಅವರ ಎದುರು ಹಾಜರುಪಡಿಸಬೇಕು. ಆ ಅವಕಾಶವೂ ಇತ್ತು. ಆದರೆ ಇದ್ಯಾವುದನ್ನೂ ಸಿಬ್ಬಂದಿ ಮಾಡಲಿಲ್ಲ ಎಂದರು. ವಿಚಾರಣೆ ಮೂರು ತಿಂಗಳಲ್ಲಿ ಮುಗಿಯಬೇಕಿತ್ತು. ಇಷ್ಟು ದೀರ್ಘವಾಗಿ ಇಡಬಾರದು. ಆದರೆ ಸಿಬ್ಬಂದಿ ವಿಚಾರಣೆಗೆ ಸಹಕಾರ ನೀಡಲಿಲ್ಲ. ವಿಚಾರಣಾ ದಿನಾಂಕಕ್ಕೆ ಹಾಜರಾಗುತ್ತಿರಲಿಲ್ಲ. ನಾನಾ ಕಾರಣ ನೀಡಿ ಕೆಎಟಿಯಿಂದ ತಡೆ ತರಲು ಮುಂದಾದರು. ಆದರೆ ಕೆಎಟಿ ತಡೆ ನೀಡಲಿಲ್ಲ. ನೋಟಿಸ್ ನೀಡಿದರೂ ಪಡೆಯುವುದಿಲ್ಲ. ಈಗ ವಿಚಾರಣೆ ಅಂತಿಮ ಹಂತಕ್ಕೆ ಬಂದಿದೆ. ಇನ್ನೇನು ವರದಿ ಕೊಡಬೇಕಾಗಿದೆ. ಈಗ ತಾರತಮ್ಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.   ಈಗ ಮತ್ತೆ ಅಶಿಸ್ತು ತೋರಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚಿಸುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT