ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಸಿಗುತ್ತಿಲ್ಲ ಸೌಲಭ್ಯ

ಕುಡಿಯುವ ನೀರು, ಶೌಚಾಲಯ, ಏರ್ ಮೆಷಿನ್ ಅಲಭ್ಯ
Published 26 ಫೆಬ್ರುವರಿ 2024, 5:51 IST
Last Updated 26 ಫೆಬ್ರುವರಿ 2024, 5:51 IST
ಅಕ್ಷರ ಗಾತ್ರ

ಚಿಂತಾಮಣಿ: ಪೆಟ್ರೋಲ್ ಬಂಕ್‌ಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಏರ್ ಮೆಷಿನ್‌ ಕಡ್ಡಾಯವಾಗಿ ಇರಬೇಕು ಎಂಬ ನಿಯಮವಿದೆ. ಸರ್ಕಾರದ ಆದೇಶವು ಚಿಂತಾಮಣಿಯಲ್ಲಿ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂದರೆ ‘ಇಲ್ಲವೇ ಇಲ್ಲ’ ಎನ್ನುವ ಉತ್ತರ ದೊರೆಯುತ್ತದೆ.

ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಒದಗಿಸಬೇಕಾದ ಕನಿಷ್ಠ ಸೌಲಭ್ಯಗಳು ಸಹ ದೊರೆಯುತ್ತಿಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ನಡೆಸದೆ ಹಾಗೂ ಈ ಘಟನೆಗಳನ್ನು ಕಂಡೂ ಕಾಣದಂತೆ ಇದ್ದಾರೆ.

ತಾಲ್ಲೂಕಿನಲ್ಲಿ ವಿವಿಧ ಕಂಪನಿಗಳ 24 ಪೆಟ್ರೋಲ್‌ ಬಂಕ್‌ಗಳ ರಿಟೇಲ್ ಔಟ್‌ಲೆಟ್‌ಗಳಲ್ಲಿ ಸರ್ಕಾರದ ಆದೇಶ ಪಾಲನೆ ಆಗುತ್ತಿಲ್ಲ. ನಿಯಮ ಉಲ್ಲಂಘಿಸಿದರೆ ಬಂಕ್ ಮಾಲೀಕರಿಗೆ ದಂಡ ವಿಧಿಸಬೇಕು. ನಗರದ ಬಹುತೇಕ ಬಂಕ್‌ಗಳಲ್ಲಿ ಯಾವುದೇ ನಿಯಮ ಪಾಲನೆ ಇಲ್ಲ. ಮಾಲೀಕರಿಗೆ ದಂಡ ವಿಧಿಸಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.  

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ ಒಟ್ಟು 24 ಪೆಟ್ರೋಲ್ ಬಂಕ್‌ಗಳು ಇವೆ. ನಗರದಲ್ಲಿ ಐದು ಹಾಗೂ ಗ್ರಾಮೀಣ ಪ್ರದೇಶದಲ್ಲಿ 19 ಬಂಕ್‌ಗಳಿವೆ. ಐಒಸಿಎಲ್ ಒಂಬತ್ತು, ಬಿಪಿಸಿಎಲ್ ಆರು, ಎಚ್.ಪಿ.ಸಿ.ಎಲ್ ನಾಲ್ಕು, ಇ.ಎಸ್.ಎಸ್.ಆರ್ ಎರಡು, ಶೆಲ್ ಎರಡು, ಎಂ.ಆರ್.ಪಿ.ಎಲ್ ಒಂದು ಬಂಕ್‌ಗಳಿವೆ. ಈ ಬಂಕ್‌ಗಳಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಏರ್ ಮೆಷಿನ್ ಸೌಲಭ್ಯಗಳು ಸಿಗುತ್ತಿಲ್ಲ. ಯಾವ ಬಂಕ್‌ನಲ್ಲಿಯೂ ಏರ್‌ ಮೆಷಿನ್ ಇಲ್ಲ. ಒಂದು ವೇಳೆ ಯಂತ್ರ ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಹಕರು ಕೇಳಿದರೆ ಸಿಬ್ಬಂದಿ ಬಂದಿಲ್ಲ. ತಾಂತ್ರಿಕ ದೋಷ ಎಂದು ಹಲವು ಕಾರಣಗಳನ್ನು ಹೇಳುವರು.

ನಗರದಲ್ಲಿ ಬಹಳ ಹಿಂದೆ ಆರಂಭವಾಗಿರುವ ಹಳೆಯ ಪೆಟ್ರೋಲ್ ಬಂಕ್‌ಗಳಲ್ಲಿ ಸ್ಥಳದ ಕೊರತೆ ಇದೆ. ಹೀಗಾಗಿ ಶೌಚಾಲಯ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ನಗರದ ಕೆಲವು ಬಂಕ್‌ಗಳ ವ್ಯವಸ್ಥಾಪಕರು ಹೇಳುತ್ತಾರೆ. ಈಚೆಗೆ ಮಹಿಳೆಯರು ಸಹ ದ್ವಿಚಕ್ರವಾಹನಗಳನ್ನು ಚಾಲನೆ ಮಾಡುವುದು ಹೆಚ್ಚಾಗಿದೆ. ಜತೆಗೆ ಮುಖ್ಯರಸ್ತೆ, ಹೆದ್ದಾರಿಗಳಲ್ಲಿ ದೂರ ಪ್ರಯಾಣದ ಕುಟುಂಬ ಸಮೇತ ಕಾರುಗಳಲ್ಲಿ ಬರುವ ಮಹಿಳೆಯರು ಪೆಟ್ರೋಲ್‌ಗಾಗಿ ನಿಲ್ಲಿಸಿದಾಗ ಶೌಚಾಲಯಕ್ಕಾಗಿ ಪರದಾಡುವಂತಾಗಿದೆ. 

ಶೌಚಾಲಯಗಳಿಲ್ಲದೆ ಹೆಚ್ಚಿನ ತೊಂದರೆ ಅನುಭವಿಸುವವರು ಮಹಿಳೆಯರು. ಕೆಲವು ಬಂಕ್‌ಗಳಲ್ಲಿ ನಿಯಮಗಳ ಪಾಲನೆಗಾಗಿ ಕಾಟಾಚಾರಕ್ಕೆ ಶೌಚಾಲಯಗಳನ್ನು ನಿರ್ಮಿಸಿದ್ದರೂ ಅವುಗಳ ನಿರ್ವಹಣೆ ಇಲ್ಲ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಶೌಚಾಲಯ ಇದ್ದರೂ ಬೀಗ ಹಾಕಿರುತ್ತಾರೆ. ನೀರು ಮತ್ತು ಸ್ವಚ್ಛತೆ ಮರೀಚಿಕೆ ಆಗಿರುತ್ತದೆ. ಮೂಗು ಮುಚ್ಚಿ ಒಳಗೆ ಹೋಗಬೇಕಾಗುತ್ತದೆ ಎಂದು ಗ್ರಾಹಕರು ದೂರುವರು. 

‘ಬಂಕ್‌ಗಳಲ್ಲಿ ಏರ್ ಮೆಷಿನ್ ಕಡ್ಡಾಯವಾಗಿ ಇರಬೇಕು. ಬಹುತೇಕ ಬಂಕ್‌ನಲ್ಲಿ ಸೌಲಭ್ಯವಿಲ್ಲ. ಒಂದೆರಡು ಬಂಕ್‌ಗಳಲ್ಲಿ ಯಂತ್ರಗಳಿದ್ದರೂ ಕೆಟ್ಟುನಿಂತಿವೆ. ಮಾಲೀಕರು ದುರಸ್ತಿ ಕಡೆ ಗಮನಹರಿಸಿಲ್ಲ. ಪೆಟ್ರೋಲ್ ಹಾಕಿಸಿಕೊಳ್ಳುವ ವಾಹನಗಳಿಗೆ ಉಚಿತವಾಗಿ ಗಾಳಿ ತುಂಬಿಸಿಕೊಡಬೇಕು ಎಂಬ ನಿಯಮವಿದೆ. ನಿಯಮ ಪಾಲನೆ ಬಗ್ಗೆ ಮಾತ್ರ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿಲ್ಲ’ ಎಂಬುದು ಗ್ರಾಹಕರ ಆರೋಪ.

‌ಕೆಲವು ಪೆಟ್ರೋಲ್ ಬಂಕ್ ಮಾಲೀಕರು ವಾಹನಗಳ ಪಂಚ್ಚರ್‌ ಹಾಕುವ ವ್ಯಕ್ತಿಗಳಿಗೆ ಏರ್ ಮೆಷಿನ್ ಮತ್ತು ಪಕ್ಕದಲ್ಲಿ ಸ್ವಲ್ಪ ಜಾಗವನ್ನು ಬಾಡಿಗೆಗೆ ಕೊಟಿರುತ್ತಾರೆ. ಅಲ್ಲಿ ಗಾಳಿ ತುಂಬಿಸಿಕೊಳ್ಳುವ ವಾಹನಗಳು ಶುಲ್ಕ ಪಾವತಿಸಬೇಕು. ಹೀಗೆ ಕೆಲವು ಬಂಕ್‌ಗಳ ಮಾಲೀಕರು ಸೇವೆ ಹೆಸರಿನಲ್ಲಿ ಲಾಭದ ವ್ಯವಹಾರ ನಡೆಸುತ್ತಿದ್ದಾರೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ಸಿಬ್ಬಂದಿ ಲೀಟರ್ ಮಾಪನದಲ್ಲಿ ‘ಕೈಚಳಕ’ ತೋರಿ ವಂಚಿಸುವ ದೂರುಗಳು ವ್ಯಾಪಕವಾಗಿವೆ. ಸಾಮಾನ್ಯವಾಗಿ ನಿತ್ಯ ಒಂದಲ್ಲ ಒಂದು ಪೆಟ್ರೋಲ್ ಬಂಕ್‌ ಬಳಿ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮುಕಿ ನಡೆಯುತ್ತಿರುತ್ತದೆ. ಕೆಲವೊಮ್ಮೆ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸಿರುವ ಘಟನೆಗಳು ನಡೆದಿವೆ. ಸಿಬ್ಬಂದಿ ಪೆಟ್ರೋಲ್ ಲೀಟರ್ ಅನ್ನು ಮಾಪನ ಮಾಡುವ ಮೀಟರ್ ಪೂರ್ಣವಾಗಿ ತೋರಿಸುವವರೆಗೂ ಕಾಯದೆ ಮೊದಲೇ ಸ್ಥಗಿತಗೊಳಿಸುವರು ಎಂಬುದು ಗ್ರಾಹಕರ ಆರೋಪ.

ಅನುಮತಿ ನೀಡಿದ್ದಾದರೂ ಹೇಗೆ?

ಚಿಂತಾಮಣಿಯಿಂದ ಬೆಂಗಳೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ತಾಲ್ಲೂಕಿನ ಗಡಿಯ ಒಳಗೆ 14 ಪೆಟ್ರೋಲ್ ಬಂಕ್‌ಗಳಿವೆ. ಕನಂಪಲ್ಲಿ, ಚಿನ್ನಸಂದ್ರ, ಕೈವಾರ ಕ್ರಾಸ್ ಬಳಿ ಹಳೆಯ ಬಂಕ್‌ಗಳನ್ನು ಹೊರತುಪಡಿಸಿದರೆ ಎಲ್ಲವೂ ಹೊಸ ಬಂಕ್‌ಗಳಾಗಿವೆ. ಯಾವುದರಲ್ಲೂ ಏರ್ ಮೆಷಿನ್, ಸಮರ್ಪಕ ಶೌಚಾಲಯಗಳೇ ಇಲ್ಲ. ಅವುಗಳ ಪ್ರಾರಂಭಕ್ಕೆ ಅಧಿಕಾರಿಗಳು ಹೇಗೆ ಅನುಮತಿ ನೀಡಿದರು ಎಂದು ಗ್ರಾಹಕರು ಪ್ರಶ್ನಿಸುತ್ತಾರೆ.

ಪೆಟ್ರೋಲ್ ಬಂಕ್‌ಗಳಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಏರ್ ಮೆಷಿನ್ ಕಡ್ಡಾಯವಾಗಿ ಇರಬೇಕು ಎನ್ನುವ ನಿಯಮವಿದೆ. ಗ್ರಾಹಕರಿಂದ ದೂರುಗಳು ಬಂದರೆ ಪರಿಶೀಲಿಸಿ ಬಂಕ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
–ಪಿ.ಸವಿತಾ, ಜಂಟಿ ನಿರ್ದೇಶಕಿ, ಆಹಾರ ಇಲಾಖೆ, ಚಿಕ್ಕಬಳ್ಳಾಪುರ
ನಗರ ಮತ್ತು ತಾಲ್ಲೂಕಿನ ಪೆಟ್ರೋಲ್ ಬಂಕ್‌ಗಳಲ್ಲಿ ನಿಯಮಗಳ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮಾಲೀಕರು ರಾಜಾರೋಷವಾಗಿ ಗ್ರಾಹಕರನ್ನು ವಂಚಿಸುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಕುರುಡರಾಗಿದ್ದಾರೆ. ಇದು ಸಂಶಯಕ್ಕೆ ಕಾರಣವಾಗಿದೆ.
–ವೆಂಕಟೇಶ್, ಹಿರಿಯ ನಾಗರಿಕ, ಚಿಂತಾಮಣಿ 
ಪೆಟ್ರೋಲ್ ಬಂಕ್‌ಗಳ ವಿರುದ್ಧದ ದೂರುಗಳ ಬಗ್ಗೆ ಪ್ರತಿಕ್ರಿಯಿಸಲು ನಮಗೆ ಯಾವುದೇ ಅಧಿಕಾರವಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು.
–ಸುಧಾಮಣಿ, ಮೇಲ್ವಿಚಾರಕಿ, ಆಹಾರ ಇಲಾಖೆ, ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT