ಚಿಂತಾಮಣಿ: ಉನ್ನತ ಶಿಕ್ಷಣದಿಂದ ದೇಶದ ಅಭಿವೃದ್ಧಿ

ಚಿಂತಾಮಣಿ: ತಾಲ್ಲೂಕಿನ ಕೈವಾರದಲ್ಲಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಸೇವಾ ಸಮಿತಿಯ ಜಿಲ್ಲಾ ಮತ್ತು ತಾಲ್ಲೂಕು ಸಮಿತಿ, ವಕೀಲರ ಸಂಘ, ರಾಮಯ್ಯ ಕಾಲೇಜ್ ಆಫ್ ಲಾ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಯಿತು.
ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ‘ಮಾನವನ ಜೀವನ ಶಾಶ್ವತವಲ್ಲ. ಜೀವಿತಾವಧಿಯಲ್ಲಿ ಪರೋಪಕಾರ ಮತ್ತಿತರ ಉತ್ತಮ ಕೆಲಸ ಮಾಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಭಾರತವು ಹಳ್ಳಿಗಳ ದೇಶ ಎಂದು ಸಾರಿ ಸಾರಿ ಹೇಳಲಾಗುತ್ತಿದೆ. ಸ್ವಾತಂತ್ರ್ಯ ಲಭಿಸಿದ 75 ವರ್ಷಗಳಲ್ಲಿ ಏನು ಮಾಡಿದ್ದೇವೆ. ಹಳ್ಳಿಗಳ ಜನರಲ್ಲಿ ಜಾಗೃತಿ ಮೂಡಿಸಬೇಕು. ಜನರು ವಿದ್ಯಾವಂತರಾದರೆ ದುಃಸ್ಥಿತಿ ದೂರವಾಗುತ್ತದೆ. ವಿದ್ಯಾವಂತರಾದರೆ ವಿಶೇಷ ಶಕ್ತಿ ದೊರೆಯುತ್ತದೆ. ವಿದ್ಯಾವಂತರು ಶಿಸ್ತಿನ ಸೈನಿಕರಾಗಬೇಕು ಎಂದು ಹೇಳಿದರು.
ತಂದೆ-ತಾಯಿಗಳನ್ನು ವೃದ್ಧಾಪ್ಯ ಕಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು. ಹಿರಿಯ ನಾಗರಿಕರ ಹಕ್ಕುಗಳಿಗಾಗಿ ವಿಶೇಷ ಕಾನೂನು ಜಾರಿಗೆ ತರಲಾಗಿದೆ. ತಂದೆ-ತಾಯಿಗಳಿಂದ ದೂರು ಬಂದರೆ ಅವರಿಗೆ ಮಕ್ಕಳಿಂದ ಪೋಷಣೆಗಾಗಿ ಮಾಸಾಶನ ಕೊಡಿಸಲಾಗುವುದು. ಮಕ್ಕಳಿಗೆ ನೀಡಿದ್ದ ಅವರ ಆಸ್ತಿಯನ್ನು ಮತ್ತೆ ಪೋಷಕರಿಗೆ ವಾಪಸು ಕೊಡಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಂ ಮಾತನಾಡಿ, ಎಂ.ಎಸ್. ರಾಮಯ್ಯ ಕಾನೂನು ಮಹಾ ವಿದ್ಯಾಲಯದಿಂದ ಕೈವಾರ ಸುತ್ತಮುತ್ತ 36 ಹಳ್ಳಿಗಳಿಗೆ ಆರೋಗ್ಯ ಮತ್ತು ಶಿಕ್ಷಣದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮನೆ ಮನೆಗೂ ಭೇಟಿ ನೀಡಿ ಸಮೀಕ್ಷೆ ಮಾಡಲಾಗಿದೆ. ಗ್ರಾಮೀಣ ಭಾಗದ ಜನರಿಗೆ ಏನೇನು ಅಗತ್ಯವಿದೆ ಎಂಬ ವರದಿ ತಯಾರಿಸಲಾಗಿದೆ. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ಮಂಜೂರಾತಿ ಪತ್ರ, ರೇಷನ್ ಕಾರ್ಡ್, ಆರೋಗ್ಯ ಕಾರ್ಡ್, ಜನನ ಪ್ರಮಾಣ ಪತ್ರ ವಿತರಿಸಲಾಯಿತು.
ಸಿ.ಇ.ಎಫ್ ನಿರ್ದೇಶಕ ಎಂ.ಆರ್. ಆನಂದರಾಮ್, ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್, ಕೆಎಸ್ಎಲ್ಎಸ್ಎ ಸದಸ್ಯ ಜೈಶಂಕರ್, ಉಪಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜ್ಞೇಶ್ ಕುಮಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮಿಕಾಂತ್ ಜೆ. ಮಿಸ್ಕಿನ್, ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್, ಎಸ್.ಪಿ ಡಿ.ಎಸ್. ನಾಗೇಶ್, ವಕೀಲರ ಸಂಘದ ಅಧ್ಯಕ್ಷ ನಾ. ಶಂಕರ್, ತಹಶೀಲ್ದಾರ್ ರಾಜೇಂದ್ರನ್ ಹಾಗೂ ವಿವಿ ಇಲಾಖೆಗಳ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ
ಕಾನೂನು ಅರಿವಿದ್ದರೆ ನ್ಯಾಯಾಲಯಗಲ್ಲಿ ದಾಖಲಾಗುವ ಮೊಕದ್ದಮೆಗಳ ಸಂಖ್ಯೆ ಕಡಿಮೆಯಾಗುತ್ತವೆ. ಕಾನೂನಿನ ಅರಿವಿಲ್ಲದಿದ್ದರೆ ಮೋಸಕ್ಕೆ ಒಳಗಾಗುತ್ತಾರೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯಗಳು ಸಮಾಜಕ್ಕೆ ಒಂದು ದೊಡ್ಡಪಿಡುಗಾಗಿದೆ. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಲು ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ ಎಂದು ನ್ಯಾ. ಬಿ. ವೀರಪ್ಪ ಹೇಳಿದರು.
ಎಷ್ಟೋ ಹೆಣ್ಣುಮಕ್ಕಳು ಶೋಷಣೆ, ಅತ್ಯಾಚಾರಕ್ಕೆ ಒಳಗಾಗಿ, ಅವಮಾನಕ್ಕೊಳಗಾಗಿ ಕಣ್ಣೀರು ಸುರಿಸುತ್ತಾರೆ. ಮಾದ್ಯಮಗಳಲ್ಲಿ ಹೆಣ್ಣುಮಕ್ಕಳ, ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳ ಕುರಿತು ವೈಭವೀಕರಣ ಮಾಡಬಾರದು. ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಮಾನವಾಗಿ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.