ಮಂಗಳವಾರ, ಜನವರಿ 31, 2023
19 °C
ಜಿಲ್ಲೆಯಾದ್ಯಂತ ವಾಯುಪುತ್ರನಿಗೆ ನಮನ

ಶ್ರದ್ಧಾಭಕ್ತಿಯ ಹನುಮ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಹನುಮ ಜಯಂತಿಯ ಪ್ರಯುಕ್ತ ಸೋಮವಾರ ಜಿಲ್ಲೆಯಾದ್ಯಂತ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.  

ದೇವಾಲಯಗಳಲ್ಲಿ ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಗಣಪತಿ ಪೂಜೆ, ಅಭಿಷೇಕ, ವಿಶೇಷ ಅಲಂಕಾರ, ಗಣಹೋಮ, ರಾಮತಾರಕ ಹೋಮ, ಪ್ರಧಾನ ಹೋಮ ಹಾಗೂ ವಿವಿಧ ಹೋಮ ಮತ್ತು ಪೂರ್ಣಾಹುತಿ ಆಚರಣೆಗಳನ್ನು ನೆರವೇರಿಸಲಾಯಿತು. ಭಕ್ತಗಣ ಭಜನೆಗಳನ್ನು ಮಾಡಿ, ವಾಯುಪುತ್ರನನ್ನು ಸ್ಮರಿಸಿತು. ಸಿಹಿಯನ್ನು ಪ್ರಸಾದವಾಗಿ ಹಂಚಲಾಯಿತು.

ಆದಿಚುಂಚನಗಿರಿ ಸ್ವಾಮೀಜಿ ಅವರಿಂದ ಅಭಿಷೇಕ: ನಗರದ ಹೊರವಲಯ­ದ ಆದಿಚುಂಚನಗಿರಿ ಶಾಖಾ ಮಠದ ವೀರಾಂಜನೇಯ­ಸ್ವಾಮಿ ದೇವಾಲಯದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು. ದೇವಾಲಯವನ್ನು ವಿಶೇಷ ಅಲಂಕಾರ ಮಾಡಲಾಗಿತ್ತು.

ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಂಜನೇಯ ಮೂ‌‌ರ್ತಿಗೆ ಅಭಿಷೇಕ, ಪೂಜೆ ನೆರವೇರಿಸಿದರು. ಹೋಮವನ್ನು ನಡೆಸಿದರು. ಬೆಳಿಗ್ಗೆಯಿಂದ ರಾತ್ರಿಯವರೆಗೂ ದರ್ಶನಕ್ಕೆ ಜನರು ಸಾಲುಗಟ್ಟಿದ್ದರು. ಇಡೀ ದೇಗುಲವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ದೇಗುಲದ ಹೊರಭಾಗ ಮತ್ತು ಒಳಭಾಗದಲ್ಲಿ ಮಾಡಿದ್ದ ಅಲಂಕಾರ ಗಮನ
ಸೆಳೆಯಿತು. ಮಂಗಳಾನಂದನಾಥ ಸ್ವಾಮೀಜಿ ಹಾಗೂ ಗಣ್ಯರು ಈ ವೇಳೆ ಹಾಜರಿದ್ದರು.

ನಗರದಲ್ಲಿ ಎಚ್‌.ಎಸ್‌. ಗಾರ್ಡನ್‌ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಸಂಭ್ರಮದಿಂದ ನಡೆಯಿತು. ದೇವರ ಮೂರ್ತಿಯನ್ನು ವಿವಿಧ ಕಲಾತಂಡಗಳೊಂದಿಗೆ ಎಚ್‌.ಎಸ್. ಗಾರ್ಡನ್‌ನಲ್ಲಿ ಮೆರವಣಿಗೆ ಮಾಡಲಾಯಿತು.

ಗಂಗಮ್ಮನ ಗುಡಿ ಬೀದಿಯಲ್ಲಿರುವ ಪೇಟೆ ಆಂಜನೇಯಸ್ವಾಮಿ ದೇವಾಲಯ, ಹಳೇ ಪೊಲೀಸ್ ಠಾಣೆ ರಸ್ತೆಯ ಜೀವಾಂಜನೇಯಸ್ವಾಮಿ, ಇಂದಿರಾ ನಗರದ ಅಭಯ ಆಂಜನೇಯಸ್ವಾಮಿ, ಹಳೇ ಜಿಲ್ಲಾಸ್ಪತ್ರೆಯ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಅನೇಕ ಕಡೆಗಳಲ್ಲಿ ರಾಮದೂತನ ಆರಾಧನೆ ಸಡಗರ ಮತ್ತು ಶ್ರದ್ಧೆಯಿಂದ ಜರುಗಿತು.

ಭಕ್ತರು ಬೆಳಿಗ್ಗೆಯಿಂದಲೇ ನಗರದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಅನೇಕ ದೇವಾಲಯಗಳಲ್ಲಿ ಭಕ್ತಿಗೀತೆಗಳ ಗಾಯನ ಏರ್ಪಡಿಸಲಾಗಿತ್ತು. ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು