ಶುಕ್ರವಾರ, ಫೆಬ್ರವರಿ 28, 2020
19 °C

ಚಿಕ್ಕಬಳ್ಳಾಪುರ: ಫೆ.12 ರಂದು ಬೆಂಗಳೂರಿನಲ್ಲಿ ಅಂಗವಿಕಲರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಅಂಗವಿಕಲರ ಹಕ್ಕುಗಳ ಕಾಯ್ದೆ 2016ನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಎನ್ನುವುದು ಸೇರಿದಂತೆ ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಫೆಬ್ರುವರಿ 12 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗವಿಕಲರ ಹಾಗೂ ಪಾಲಕರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಅಂಗವಿಲಕರ ಸಂಸ್ಥೆ ಅಧ್ಯಕ್ಷ ಕೆ.ಜಿ.ಸುಬ್ರಮಣ್ಯಂ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೇ74 ರಷ್ಟು ಅಂಗವೈಕಲ್ಯ ಹೊಂದಿರುವವರಿಗೆ ಮಾಸಿಕ ₹3,000 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣ ಇರುವವರಿಗೆ ₹5,000 ಜೀವನ ಭತ್ಯ ಪಿಂಚಣಿ ರೂಪದಲ್ಲಿ ನೀಡಬೇಕು. ಅಂಗವಿಕಲರ ಹಕ್ಕುಗಳ ಕಾಯ್ದೆ 2016ನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಈಗಾಗಲೇ ನಿಯಮಗಳ ಪ್ರಕ್ರಿಯೆ ಮುಗಿದಿದ್ದು ಕೂಡಲೆ ಅನುಷ್ಠಾನ ಮಾಡಬೇಕು’ ಎಂದು ಒತ್ತಾಯಿಸಿದರು.

‘ತೀವ್ರ ಅಂಗವಿಕಲತೆ ಉಳ್ಳವರನ್ನು ನೋಡಿಕೊಳ್ಳಲು ಆರೈಕೆದಾರರಿಗೆ ಮಾಸಿಕ ₹3,000 ಅಂಗವಿಕಲರ ಪೊಷಣೆ ಭತ್ಯೆ ನೀಡಬೇಕು. ಯುಡಿಐಡಿ ಪ್ರಮಾಣೀಕರಿಸುವ ಪ್ರಕ್ರಿಯೆಯನ್ನು ವೇಗಗೊಳಿಸಿ, ವಿಳಂಬಕ್ಕೆ ಕಾರಣವಾಗುವ ಲೋಪದೋಷಗಳನ್ನು ಸರಿಪಡಿಸಬೇಕು. ಅಂಗವಿಕಲರಿಗೆ ಉಚಿತ ಆರೋಗ್ಯ ಸೇವೆ ಸುಲಭ ಸಾಧ್ಯವಾದ ವಿಮಾ ಯೇಜನೆಗಳು ಪಾಲಿಸಿಗಳನ್ನು ರೂಪಿಸಬೇಕು. ಈಗ ಸರ್ಕಾರಿ ವಲಯದಲ್ಲಿರುವಂತೆ ಉದ್ಯೋಗ ಮೀಸಲಾತಿಯನ್ನು ಖಾಸಗಿ ವಲಯಕ್ಕೂ ವಿಸ್ತರಿಸಬೇಕು. ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು’ ಎಂದು ಹೇಳಿದರು.

‘ಅಂಗವಿಕಲ ಮಹಿಳೆಯರಿಗೆ ಜೀವನೋಪಾಯ ಮತ್ತು ಮಕ್ಕಳ ಪಾಲನೆ ಮಾಡಲು ಅಗತ್ಯ ಬೆಂಬಲ ನೀಡುವ ಯೋಜನೆ ರೂಪಿಸಿ, ಅಂಗವಿಕಲ ಮಹಿಳೆಯರ ಮೇಲೆ ಹಿಂಸಾಚಾರ, ದೌರ್ಜನ್ಯ ನಿಲ್ಲಿಸಿ, ಸಮಾನತೆಯನ್ನು ಉತ್ತೇಜಿಸಿ ಅಂಗವಿಕಲ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ವಿಶೇಷ ಅವಕಾಶದ ನಿಯಮಗಳನ್ನು ರೂಪಿಸಬೇಕು. ಎಲ್ಲಾ ಅಂಗವಿಕಲ ಮಕ್ಕಳನ್ನು ಶಾಲೆಗಳಲ್ಲಿ ಸೇರಿಸಲಾಗಿದಿಯೇ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಅನುಸರಿಸಲಾಗಿದಿಯೇ ಎಂದು ಖಚಿತ ಪಡಿಸಿಕೊಳ್ಳಬೇಕು. ಕಲಿಕಾ ಸಾಧನಗಳನ್ನು ಉಚಿತವಾಗಿ ಒದಗಿಸಬೇಕು’ ಎಂದು ತಿಳಿಸಿದರು.

‘ಅಂಗವಿಕಲ ಮಹಿಳೆಯರನ್ನು ಮದುವೆಯಾಗುವ ಕುಟುಂಬಕ್ಕೆ ನೀಡುವ ಪ್ರೋತ್ಸಾಹ ಹಣವನ್ನು ₹50 ಸಾವಿರದಿಂದ ₹3 ಲಕ್ಷ ವರೆಗೆ ಹೆಚ್ಚಿಸಬೇಕು. ಅಂಗವಿಕಲರ ನಡುವೆ ಮದುವೆಯಾದವರಿಗೂ ಈ ಪ್ರೋತ್ಸಾಹಧನ ಅನ್ವಯಿಸಬೇಕು. ಸಂಸದರು ಹಾಗೂ ಶಾಸಕರ ಅನುದಾನದ ಅಡಿಯಲ್ಲಿ ಅಂಗವಿಕಲರಿಗೆ ಮೀಸಲಿರಿಸಿದ ₹20 ಲಕ್ಷ ಅಂಗವಿಕಲರಿಗಾಗಿ ಖರ್ಚು ಮಾಡಬೇಕು’ ಎಂದರು.

‘ಅಂಗವಿಕಲರ ಸಾಲ ಸೌಲಭ್ಯಗಳನ್ನು ಹೆಚ್ಚಿಸಲು ಕ್ರಮವಹಿಸಬೇಕು. ಈಗಿರುವ ಆಧಾರ ಸಾಲ ಸೌಲಭ್ಯಗಳ ಸಂಖ್ಯೆಯನ್ನು ಪ್ರತಿ ತಾಲ್ಲೂಕಿಗೆ 10ಕ್ಕೆ ಹೆಚ್ಚಿಸಬೇಕು ಮತ್ತು ಸಾಲದ ಮೊತ್ತವನ್ನು ₹1 ಲಕ್ಷದಿಂದ ₹2 ಲಕ್ಷಕ್ಕೆ ಹೆಚ್ಚಿಸಬೇಕು. ರಾಜ್ಯ ಸಕಾರದ ಎಲ್ಲಾ ಇಲಾಖೆಗಳು, ಪಂಚಾಯಿತಿ ಮತ್ತು ಪೌರಾಡಳಿತ ಸಂಸ್ಥೆಗಳು ಶೇ 5ರಷ್ಟು ಹಣವನ್ನು ಅಂಗವಿಕಲರಿಗಾಗಿ ವೆಚ್ಚ ಮಾಡಬೇಕು’ ಎಂದು ಆಗ್ರಹಿಸಿದರು.

ಸಂಘಟನೆ ಗೌರವ ಅಧ್ಯಕ್ಷ ಪಿ.ವಿ.ಕುಶಕುಮಾರ್, ಉಪಾಧ್ಯಕ್ಷ ಜಿ.ವಿ.ವೆಂಕಟಶಿವಪ್ಪ, ಕಾರ್ಯದರ್ಶಿ ಬಿ.ಕಿರಣ್ ನಾಯಕ್, ಖಜಾಂಚಿ ಸೌಭಾಗ್ಯಮ್ಮ , ಸಂಚಾಲಕರಾದ ಕೆ.ಸಿ.ಮಮತಾ, ಕೆ.ಬಿ.ಸುಶೀಲಮ್ಮ , ಬಾಬಾಜಾನ್, ಬಿ.ಎನ್.ನರಸಿಂಹಮೂರ್ತಿ, ಆರ್.ಚಂದ್ರಶೇಖರ್, ಎಚ್.ಎಸ್.ಕೃಷ್ಣಪ್ಪ, ಸುಬಾನ್, ರಾಘವೇಂದ್ರ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು