ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಒಳಚರಂಡಿ ಅವ್ಯವಸ್ಥೆಯ ಆಗರ

ಚಿಂತಾಮಣಿ: ಜನರ ಸಂಕಟಕ್ಕೆ ಪರಿಹಾರ ಮರೀಚಿಕೆ
Last Updated 29 ಮೇ 2022, 4:34 IST
ಅಕ್ಷರ ಗಾತ್ರ

ಚಿಂತಾಮಣಿ: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಒಳಚರಂಡಿ ವ್ಯವಸ್ಥೆಗೆ ಅಳವಡಿಸಿದ ಮೊದಲ ನಗರ ಚಿಂತಾಮಣಿ. ನಗರದಲ್ಲಿ ಶೇ 85ರಷ್ಟು ಪ್ರದೇಶಕ್ಕೆ ಒಳಚರಂಡಿ ವ್ಯವಸ್ಥೆ ಇದೆ. ಆದರೆ, ಅವೈಜ್ಞಾನಿಕ ನಿರ್ಮಾಣ ಮತ್ತು ಸಮರ್ಪಕ ನಿರ್ವಹಣೆ ಇಲ್ಲದೆ ಅನೇಕ ರಸ್ತೆಗಳಲ್ಲಿ ಮ್ಯಾನ್‌ಹೋಲ್‌ಗಳ ಮೂಲಕ ಒಳಚರಂಡಿ ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತದೆ.

ಪ್ರತಿನಿತ್ಯ ನಗರದ ಒಂದಲ್ಲ ಒಂದು ರಸ್ತೆಯಲ್ಲಿ ಒಳಚರಂಡಿ ತ್ಯಾಜ್ಯ ಹರಿಯುವುದು, ಒಳಚರಂಡಿ ಪೈಪ್‌ಗಳು ಬಂದ್ ಆಗಿರುವುದು, ತ್ಯಾಜ್ಯ ನೀರು ಮುಂದೆ ಹರಿಯದೆ ಮನೆಗಳ ಒಳಗಡೆ ಹಿಂದಿರುಗುವ ದೂರುಗಳು ಕೇಳಿಬರುವುದು ಸಾಮಾನ್ಯವಾಗಿದೆ.‌ ನಗರಸಭೆಯ ಮಾಹಿತಿ ಪ್ರಕಾರವೇ ಪ್ರತಿದಿನ ಸರಾಸರಿ 15-20 ದೂರುಗಳು ದಾಖಲಾಗುತ್ತವೆ.

ವಿಶ್ವ ಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ಕೋಟ್ಯಂತರ ರೂಪಾಯಿ ವೆಚ್ಚದಡಿ ಒಳಚರಂಡಿ ಕಾಮಗಾರಿಯನ್ನು 2-3 ಹಂತಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಗುತ್ತಿಗೆದಾರರು ಕಾಮಗಾರಿ ನಡೆಯುತ್ತಿರುವಾಗ ಎಂಜಿನಿಯರ್‌ಗಳ ಸೂಕ್ತ ಮೇಲ್ವಿಚಾರಣೆ ನಡೆಸದಿರುವುದು ಈಗಿನ ಬಹುತೇಕ ಸಮಸ್ಯೆಗೆ ಕಾರಣವಾಗಿದೆ. ಉತ್ತಮ ಗುಣಮಟ್ಟ ಮತ್ತು ಸೂಕ್ತ ಸರ್ವೆ ನಡೆಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದು ನಾಗರಿಕರ ಅಭಿಪ್ರಾಯ.

ನಗರದ ಕೆಲವು ನಾಗರಿಕರು ಸಹ ಜವಾಬ್ದಾರಿ ಮರೆತು ಒಳಚರಂಡಿಗೆ ಸ್ಯಾನಿಟರಿ ಪ್ಯಾಡ್ಸ್, ಪ್ಲಾಸ್ಟಿಕ್ ಪೇಪರ್, ಹಳೆಯ ಬಟ್ಟೆ ಮತ್ತಿತರ ವಸ್ತುಗಳನ್ನು ಹಾಕಿ ಅಧಿಕ ಒತ್ತಡದಿಂದ ನೀರನ್ನು ಸುರಿಯುತ್ತಾರೆ.

ಅವುಗಳು ಒಳಚರಂಡಿ ಪೈಪ್‌ಗಳಲ್ಲಿ ಕಟ್ಟಿಕೊಂಡು ತ್ಯಾಜ್ಯ ಮತ್ತು ನೀರು ಮುಂದೆ ಹರಿಯಲು ಅವಕಾಶ ಇರುವುದಿಲ್ಲ. ಮ್ಯಾನ್‌ಹೋಲ್‌ಗಳ ಮೂಲಕ ಮೇಲಕ್ಕೆ ಚಿಮ್ಮಿ ರಸ್ತೆಗಳಲ್ಲಿ ಹರಿಯುತ್ತದೆ ಎನ್ನುತ್ತಾರೆ ನಗರಸಭೆ ಆರೋಗ್ಯ ವಿಭಾಗದ
ಅಧಿಕಾರಿಗಳು.

ಮುಖ್ಯರಸ್ತೆಗಳು ಹಾಗೂ ಬಡಾವಣೆಗಳ ಕಿಷ್ಕಿಂಧೆ ರಸ್ತೆಗಳಲ್ಲಿ ಮ್ಯಾನ್‌ಹೋಲ್‌ಗಳು ವಾಹನ ಚಾಲಕರಿಗೆ ಸವಾಲಾಗಿ ಪರಿಣಮಿಸಿವೆ. ಕೆಲವೆಡೆ ಮ್ಯಾನ್‌ಹೋಲ್‌ಗಳು ರಸ್ತೆಯ ಮೇಲಕ್ಕೆ ಉಬ್ಬುಗಳಂತಿವೆ. ಕೆಲವೆಡೆ ರಸ್ತೆ ಸಮಕ್ಕಿಂತ ತಗ್ಗಿನಲ್ಲಿದ್ದು ಗುಣಿಗಳಾಗಿವೆ. ಅವೈಜ್ಞಾನಿಕ ಮ್ಯಾನ್‌ಹೋಲ್‌ಗಳಿಂದ ದ್ವಿಚಕ್ರವಾಹನ, ಕಾರು, ಜೀಪ್‌ ಇನ್ನಿತರ ಸಣ್ಣ ವಾಹನಗಳ ಚಾಲಕರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿರುವ ನಿದರ್ಶನಗಳಿವೆ.

‘ಮನೆ ಮುಂಭಾಗದಲ್ಲಿ ಮ್ಯಾನ್‌ಹೋಲ್ ಇದ್ದು 6 ತಿಂಗಳಿಗೊಮ್ಮೆ ಕಟ್ಟಿಕೊಂಡು ತ್ಯಾಜ್ಯ ರಸ್ತೆಗೆ ಹರಿಯುತ್ತದೆ. ಮನೆ ತಗ್ಗಿನಲ್ಲಿರುವ ಒಳಚರಂಡಿ ತ್ಯಾಜ್ಯ ಮನೆಗೆ ಹಿಂದಿರುಗುತ್ತದೆ. ಮನೆಯ ತುಂಬಾ ವಾಸನೆ ಬಡಿಯುತ್ತದೆ. ಪ್ರತಿ ಬಾರಿ ನಗರಸಭೆಗೆ ದೂರು ನೀಡಿ ಸಿಬ್ಬಂದಿಯ ಕೈಕಾಲು ಹಿಡಿದು ಮ್ಯಾನ್‌ಹೋಲ್ ಸ್ವಚ್ಛಗೊಳಿಸಬೇಕಾಗಿದೆ. ಶಾಶ್ವತವಾಗಿ ಸಮಸ್ಯೆ ಬಗೆಹರಿಸುತ್ತಿಲ್ಲ’ ಎಂದು ಅಂಜನಿ ಬಡಾವಣೆಯಪ್ರಭಾವತಿ ದೂರಿದರು.

‘ನಗರದಲ್ಲಿ ಮ್ಯಾನ್‌ಹೋಲ್‌ಗಳಿಗೆ ಪ್ಲಾಸಿಕ್, ಬಟ್ಟೆ, ಸ್ಯಾನಿಟರಿ ಪ್ಯಾಡ್ ಹಾಕುವುದರಿಂದ ಒಳಚರಂಡಿ ಕಟ್ಟಿಕೊಂಡು ಮುಂದೆ ಹರಿಯುವುದಿಲ್ಲ. ದೂರು ಬಗೆಹರಿಸಲು ಮೂರು ತಂಡಗಳನ್ನು ನಿಯೋಜಿಸಲಾಗಿದೆ. ತಲಾ ಒಂದರಂತೆ ಮೂರು ತಂಡಗಳಿಗೂ ತಲಾ ಒಂದೊಂದು ಸಕ್ಕಿಂಗ್ ಯಂತ್ರದ ವಾಹನ ಒದಗಿಸಲಾಗಿದೆ’ ಎಂದು ಪೌರಾಯುಕ್ತಉಮಾಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT