ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಡಿಬಂಡೆ | ಕಾಲುವೆಯಲ್ಲಿ ಚರಂಡಿ ನೀರು; ಕೆರೆ ಕಲುಷಿತ

Published 23 ಮೇ 2024, 7:07 IST
Last Updated 23 ಮೇ 2024, 7:07 IST
ಅಕ್ಷರ ಗಾತ್ರ

ಗುಡಿಬಂಡೆ: ಸರ್ಕಾರದಿಂದ ಅನುದಾನ ಬಂದರೂ, ಆರ್ಥಿಕ‌ ದುಸ್ಥಿತಿ ಎನ್ನುತ್ತಾ ಗುಡಿಬಂಡೆ ಪಟ್ಟಣ ಪಂಚಾಯಿತಿ ರಾಜಕಾಲುವೆ‌ ಸ್ವಚ್ಛತೆ ನಿರ್ಲಕ್ಷ್ಯವಹಿಸಿದೆ. ಇದರಿಂದ ಪೋಷಕಕಾಲುವೆ ಸೇರಿ ರಾಜಕಾಲುವೆ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ.

ಪ್ರತಿ ವರ್ಷ ಸರ್ಕಾರದಿಂದ ವಿವಿಧ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬರುತ್ತಿದೆ. ಆದರೆ ವರ್ಷಕ್ಕೆ ಒಮ್ಮೆಯಾದರೂ ರಾಜಕಾಲುವೆ ಸ್ವಚ್ಛಗೊಳಿಸಲು ಹಣವಿಲ್ಲ ಎನ್ನುತ್ತಿದೆ ಪಟ್ಟಣ ಪಂಚಾಯಿತಿ. ಹೀಗಾಗಿ ರಾಜಕಾಲುವೆಯಲ್ಲಿ ಕಸ ತುಂಬಿಕೊಂಡು ‌ನೀರು ಸರಾಗವಾಗಿ ಹರಿಯುತ್ತಿಲ್ಲ. ಹೂಳು ತುಂಬಿಕೊಂಡು ರಾಜಕಾಲುವೆ ಮುಚ್ಚಿಹೋಗುತ್ತಿದೆ.

‘ಬೇಲಿಯೇ ಎದ್ದು ಹೊಲ ಮೇಯಿತು’ ಎಂಬ ನಾಣ್ಣುಡಿಯಂತೆ ಪಟ್ಟಣ ಪಂಚಾಯಿತಿ ರಾಜಕಾಲುವೆ ಮೇಲ್ಭಾಗದಲ್ಲಿ ವಾಣಿಜ್ಯ ಮಳಿಗೆ ಮತ್ತು ನಾಲ್ಕು ಕಡೆ ಸಾರ್ವಜನಿಕ ಶೌಚಾಲಯ ನಿರ್ಮಿಸಿದೆ. ಇದರ ಕೆಳಗೆ ತ್ಯಾಜ್ಯ ಅಪಾರ ಪ್ರಯಾಣದಲ್ಲಿ ಸಂಗ್ರಹವಾಗುತ್ತಿದ್ದು, ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ.

ಪಟ್ಟಣದಲ್ಲಿ 10 ಸಾವಿರ ಜನಸಂಖ್ಯೆ, ಮೂರು ಸಾವಿರ‌ ಮನೆಗಳಿವೆ. ಪ್ರತಿನಿತ್ಯ ಶೇ 70 ರಷ್ಟು ಚರಂಡಿ, ಮುಖ್ಯ ರಸ್ತೆ ಇತರೆ ರಸ್ತೆಗಳ ಮಳೆ ನೀರು ಮತ್ತು ತ್ಯಾಜ್ಯ ಕಾಲುವೆ ಸೇರುತ್ತಿದೆ.

ಪಟ್ಟಣದ ತ್ಯಾಜದ ನೀರು ಹಾಗೂ ನಮಾಜ್ ಗಟ್ಟು, ವಿದ್ಯಾಗಿರಿ, ಸುರಸದ್ಮಗಿರಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಬಿದ್ದ ಮಳೆಯ ನೀರು ಹಾಗೂ  ಕೊಳಚೆ ನೀರು ರಾಜಕಾಲುವೆ ಮೂಲಕ ಅಮಾನಿಬೈರಸಾಗರ ಕೆರೆಯಿಂದ ವಾಟದ ಹೊಸಹಳ್ಳಿ ಕೆರೆಗೆ ಮೂಲಕ ದೊಡ್ಡಕಾಲುವೆ ಸೇರುತ್ತದೆ.

ಪಟ್ಟಣದ ಶೌಚಾಲಯಗಳಿಗೆ ಯುಜಿಡಿ ವ್ಯವಸ್ಥೆ ಇಲ್ಲದೆ ಕೆಲವರು ಗುಂಡಿ ನಿರ್ಮಿಸಿಕೊಂಡಿದ್ದಾರೆ. ಇನ್ನೂ ಕೆಲವರು ಚರಂಡಿಗೆ ಶೌಚಾಲಯ ತ್ಯಾಜ್ಯ ಹರಿಬಿಡುತ್ತಿದ್ದಾರೆ. ಮಳೆ ಬಂದರೆ ಇವೆಲ್ಲ ಒಟ್ಟುಗೂಡಿ ರಾಜಕಾಲುವೆ ಸೇರುತ್ತದೆ.

ಗುಡಿಬಂಡೆಯ ನಾಲ್ಕು ದಿಕ್ಕುಗಳಲ್ಲಿ ಬೆಟ್ಟಗಳಿವೆ. ಇಲ್ಲಿನ ಮಳೆ ನೀರು ಹಾಗೂ ಪಟ್ಟಣದ ಚರಂಡಿ ನೀರು ರಾಜಕಾಲುವೆಯೇ ಸೇರುತ್ತಿದೆ. ಪ್ರತ್ಯೇಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರಿನೊಂದಿಗೆ ಕೊಳಚೆ ನೀರು ಕೆರೆ ಸೇರಿ ಅಂತರ್ಜಲ ಕಲುಷಿತಗೊಳ್ಳುತ್ತಿದೆ.

ದಶಕಗಳ ಹಿಂದೆ ಕೃಷಿ ಭೂಮಿಯಾಗಿದ್ದ ವಿದ್ಯಾಗಿರ ತಪ್ಪಲಿನಲ್ಲಿ ತಿರುಮಲ ನಗರ ಈಗ ವಸತಿ ಪ್ರದೇಶದವಾಗಿದೆ. ಪೋಷಕ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದೆ. ಇದರಿಂದ ಕೆಲ ಪೋಷಕ ಕಾಲುವೆಗಳು ಅಸ್ತಿತ್ವ ಕಳೆದುಕೊಂಡರೆ, ಇನ್ನೂ ಕೆಲವು ಚರಂಡಿಗಳಾಗಿ ಮಾರ್ಪಟ್ಟಿವೆ.

ಪಟ್ಟಣ ಪಂಚಾಯಿತಿ ಆಡಳಿತ ಎಚ್ಚೆತ್ತುಕೊಂಡು, ಒತ್ತುವರಿ ತೆರವುಗೊಳಿಸಿ, ಪೋಷಕ ಕಾಲುವೆ ದುರಸ್ತಿಗೊಳಿಸದಿದ್ದರೆ, ಜೋರು ಮಳೆ ಬೀಳುವ ಸಂದರ್ಭ ಇಲ್ಲಿನ ಮನೆಗಳಿಗೆ ನೀರು ನುಗ್ಗಲಿದೆ ಎಂದು ತಿರುಮಲ ನಗರದ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

₹12 ಲಕ್ಷ ಬೇಕು
ಪೌರಕಾರ್ಮಿಕರಿಂದ ರಾಜಕಾಲುವೆ ಸ್ವಚ್ಛಗೊಳಿಸುವುದು ಅಸಾಧ್ಯ, ವರ್ಷಕ್ಕೊಮ್ಮೆ ರಾಜಕಾಲುವೆ ಸ್ವಚ್ಛಗೊಳಿಸಲು ವರ್ಷಕ್ಕೆ ₹12 ಲಕ್ಷ ಬೇಕಾಗುತ್ತೆ. ಪಟ್ಟಣ ಪಂಚಾಯಿತಿ ಅರ್ಥಿಕ ಸಂಕಷ್ಟದಲ್ಲಿದೆ. ಮಾನವೀಯ ದೃಷ್ಟಿಯಿಂದ ಹೆಚ್ಚು ತ್ಯಾಜ್ಯ ಶೇಖರಣೆಯಾಗಿರುವ ಸ್ಥಳಗಳಲ್ಲಿ, ಸ್ವಚ್ಛಗೊಳಿಸಲಾಗುವುದು. ಎಂ.ಶ್ರೀನಿವಾಸ, ಪ್ರಭಾರಿ ಮುಖ್ಯಾಧಿಕಾರಿ
ನಮ್ಮ ವ್ಯಾಪ್ತಿಗೆ ಬರಲ್ಲ
ರಾಜಕಾಲುವೆ ಸ್ವಚ್ಛತೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದರು ಸಂಪೂರ್ಣ ಜವಾಬ್ದಾರಿ ಪಟ್ಟಣ ಪಂಚಾಯಿತಿಯದ್ದು. ರಾಜ ಕಾಲುವೆ ತ್ಯಾಜ್ಯದ ನೀರು ಗುಡಿಬಂಡೆ ಅಮಾನಿಬೈರಸಾಗರ ಕೆರೆಯಿಂದ ವಾಟದಹೊಸಹಳ್ಳಿ ಕೆರೆಗೆ ನೀರುವ ಹರಿಯುವ ದೊಡ್ಡಕಾಲುವೆಗೆ ಬಂದು ಸೇರುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದರೆ, ಬದಲಿ ವ್ಯವಸ್ಥೆಗೆ ಯೋಜನೆ ರೊಪಿಸಲಾಗವುದು. ಸುನೀಲ, ಎಇ, ಸಣ್ಣ ನೀರಾವರಿ ಇಲಾಖೆ
ರಾಜಕಾಲುವೆ ಸ್ಚಚ್ಛತೆ ಜನ ಒತ್ತಾಯಿಸಿದ್ದಾರೆ. ಜೆಸಿಬಿಗೆ ಚಾಲಕ ನೇಮಕಾತಿ ಆಗಿಲ್ಲ. ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತೆ
ನಗೀನ್ ರಾಜ್ ಪೈಯಾಜ, ಅಧ್ಯಕ್ಷ, ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT