ಶುಕ್ರವಾರ, ಆಗಸ್ಟ್ 12, 2022
27 °C
ರೇಷ್ಮೆ ಕೃಷಿ ಕ್ಷೇತ್ರೋತ್ಸವದಲ್ಲಿ ಕೃಷಿ ವಿಜ್ಞಾನಿ ವಿನೋದಾ ಸಲಹೆ

ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಕೃಷಿ ವಿಜ್ಞಾನಿ ವಿನೋದಾ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ರೇಷ್ಮೆ ಕೃಷಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಕಡಿಮೆ ನೀರಿರುವ ಪ್ರದೇಶದಲ್ಲಿ ಬೆಳೆಯಲೂ ಅನುಕೂಲವಾಗಿದೆ. ಲಾಕ್‌ಡೌನ್ ತೆರವುಗೊಳಿಸಿದಾಗಿನಿಂದ ಏರುಗತಿಯಲ್ಲಿರುವ ಗೂಡಿನ ಬೆಲೆಯು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದು ರೇಷ್ಮೆ ಕೃಷಿ ವಿಜ್ಞಾನಿ ವಿನೋದಾ ಹೇಳಿದರು.

ತಾಲ್ಲೂಕಿನ ಬೋದಗೂರಿನಲ್ಲಿ ಕುರುಬೂರಿನ ರೇಷ್ಮೆ ಕೃಷಿ ವಿಜ್ಞಾನ ಕಾಲೇಜು, ಕೆ.ವಿ.ಕೆ, ರೇಷ್ಮೆ ಇಲಾಖೆ, ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಗಳ ಆಶ್ರಯದಲ್ಲಿ ನಾಗೇಶ್ ಕುಮಾರ್‌ ಅವರ ರೇಷ್ಮೆಹುಳು ಸಾಕಣೆ ಮನೆಯಲ್ಲಿ ನಡೆದ ರೇಷ್ಮೆ ಕೃಷಿ
ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

ನೈಲಾನ್ ಪರದೆಯ ಜತೆಗೆ ಇತರೆ ತಾಂತ್ರಿಕತೆಗಳಾದ ಊಜಿಟ್ರ್ಯಾಪ್ ದ್ರಾವಣ, ಊಜಿಪೌಡರ್, ಹಳದಿ ಅಂಟುಪಟ್ಟಿ, ಪರತಂತ್ರ ಜೀವಿಯಾದ ನಿಸೋಲಿಂಕ್ಸ್ ಥೈಮಸ್‌ ಬಳಕೆಯ ಜತೆಗೆ ಹೊಸ ತಂತ್ರಜ್ಞಾನವಾದ ಲಿಂಗಾಕರ್ಷಕ ಬಲೆಯನ್ನು ಅಳವಡಿಸಿಕೊಳ್ಳುವುದರಿಂದ ಊಜಿಯ ಪರಿಣಾಮಕಾರಿ ನಿರ್ವಹಣೆ ಸಾಧ್ಯವಾಗುತ್ತದೆ. ಇಂತಹ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆಯಿಂದ ರೈತರಿಗೆ ಲಾಭ ಮಾತ್ರವಲ್ಲ ಪರಿಸರ ಸಂರಕ್ಷಣೆಯೂ ಆಗಲಿದೆ ಎಂದು ಹೇಳಿದರು.

ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಮಾತನಾಡಿ, ‘ನಮ್ಮ ಹುಳುಮನೆಯಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಂಡು ಸುಮಾರು ಶೇ 10ರಷ್ಟು ಅಧಿಕ ಇಳುವರಿ ಪಡೆದಿದ್ದೇನೆ. ಪ್ರತಿ ಕೆ.ಜಿ. ಗೂಡಿಗೆ ಸುಮಾರು ₹30ರಷ್ಟು ಹೆಚ್ಚಿನ ದರ ದೊರೆತಿದೆ’ ಎಂದು ಹೇಳಿದರು.

ರೇಷ್ಮೆ ಉಪನಿರ್ದೇಶಕ ಭೈರಪ್ಪ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಕೃಷಿಯಲ್ಲಿ ಮಂಚೂಣಿಯಲ್ಲಿದ್ದರೂ ದ್ವಿತಳಿ ಬೆಳೆಯಲ್ಲಿ ಬಹಳ ಹಿಂದುಳಿದಿದೆ. ಎಲ್ಲ ರೈತರು ಇತ್ತ ಗಮನ ಹರಿಸಬೇಕಾಗಿ ಸೂಚಿಸಿದರು.

ರೇಷ್ಮೆ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ ಮಾತನಾಡಿ, ದ್ವಿತಳಿಯಲ್ಲಿ ಈಗಿರುವ ಡಬಲ್ ಹೈಬ್ರಿಡ್ ತಳಿಗಳನ್ನು ಸಾಂಪ್ರದಾಯಕ ತಳಿಗಳಿಗಿಂತ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಶ್ರಮವಿಲ್ಲದೆ ಬೆಳೆಯಬಹುದು. ಪ್ರತಿ ನೂರು ಮೊಟ್ಟೆಗೆ ಸುಮಾರು ₹15 ಸಾವಿದಷ್ಟು ಅಧಿಕ ಲಾಭ ಗಳಿಸಬಹುದು. ಮೊದಲಿನಂತೆ ಬೆಳೆ ಕಳೆದುಕೊಳ್ಳುತ್ತೇವೆಂದು ಭಯ ಪಡಬೇಕಾದ ಅಗತ್ಯವಿಲ್ಲ. ದ್ವಿತಳಿ ಬೆಳೆಗಾರರಿಗೆ ಸರ್ಕಾರದಿಂದ ಚಾಕಿಗೆ ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಿದರು. 

ಕೃಷಿಯಲ್ಲಿ ಮಣ್ಣು ಪರೀಕ್ಷೆಯ ಮಹತ್ವವನ್ನು ರೇಷ್ಮೆಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಳಿನ ತಿಳಿಸಿದರೆ, ಹಿಪ್ಪುನೇರಳೆ ತೋಟದಲ್ಲಿ ಹಸಿರೆಲೆ ಗೊಬ್ಬರವನ್ನು ಬೆಳೆದು ರಾಸಾಯನಿಕಗಳ ಶೇ 50ರಷ್ಟು ಬಳಕೆಯನ್ನು ಕಡಿಮೆ ಮಾಡಿಕೊಳ್ಳಬಹುದೆಂದು ಬೇಸಾಯ ಶಾಸ್ತ್ರಜ್ಞೆ ಅಮೃತ ತಿಳಿಸಿದರು.

ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ, ಸಿಇಒ ಜನಾರ್ದನಮೂರ್ತಿ, ಬೋದಗೂರು, ಹಿತ್ತಲಹಳ್ಳಿ, ಮಳಮಾಚನಹಳ್ಳಿ, ಗಿಡ್ನಹಳ್ಳಿ ಗ್ರಾಮಗಳ ಸುಮಾರು 50 ರೈತರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು