ಮಂಗಳವಾರ, ಜೂನ್ 15, 2021
20 °C
ತಾ.ಪಂ ಸಾಮಾನ್ಯ ಸಭೆಯಲ್ಲಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸೂಚನೆ

‘ನರೇಗಾ’ ಸದುಪಯೋಗಕ್ಕೆ ಒತ್ತು ನೀಡಿ: ಶಾಸಕ ಶಿವಶಂಕರ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ನರೇಗಾ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಬೇಕು. ಅಧಿಕಾರಿಗಳು ಆರೋಗ್ಯ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮತ್ತು ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ  ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ನರೇಗಾ ಯೋಜನೆಯಡಿ ಜಮೀನುಗಳಲ್ಲಿ ಕಂದಕ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ನೆಡು ತೋಪು ಕಾಮಗಾರಿ, ಶಾಲಾ ಕಟ್ಟಡ ನಿರ್ಮಾಣ, ಕಲ್ಯಾಣಿ ಸ್ವಚ್ಛತೆ, ಜಲ ಸಂಪನ್ಮೂಲಗಳ ಸಂರಕ್ಷಣೆ, ಕೊಳವೆ ಬಾವಿಗಳ ಜಲಮರುಪೂರಣ, ಕಾಲುವೆ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳು ಸತತವಾಗಿ ನಡೆಯುತ್ತಿವೆ. ಇದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಓ.ರತ್ನಮ್ಮ ಮಾತನಾಡಿ, ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಈಗ ಬಹುತೇಕ ನಿಯಂತ್ರಣಲ್ಲಿದೆ. ಒಟ್ಟು 476 ಜನ ಸೋಂಕಿತರು ದಾಖಲಾಗಿದ್ದು, ಅದರಲ್ಲಿ 441 ಜನ ಗುಣಮುಖರಾಗಿದ್ದಾರೆ. 10 ಜನ ಮರಣ ಹೊಂದಿದ್ದು, ಪ್ರಸ್ತುತ 25 ಜನ ಮಾತ್ರ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು. 

ಮೀನುಗಾರಿಕೆ ಇಲಾಖೆಯಲ್ಲಿ ಅನ್ಯ ಜಿಲ್ಲೆಗಳ ಗುತ್ತಿಗೆದಾರರಿಗೆ ಆದ್ಯತೆ ನೀಡಿರುವುದು ಸಂಶಯಕ್ಕೆ ಈಡುಮಾಡಿದೆ. ಇಲ್ಲಿನ ಸ್ಥಳೀಯರಿಗೆ ಆದ್ಯತೆ ನೀಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಗೌರಿಬಿದನೂರು ನಗರ ಪ್ರದೇಶದಲ್ಲಿ ಮೀನು ಮಾರಾಟ ಕೇಂದ್ರಕ್ಕೆ ಒತ್ತು ನೀಡಿ ಉತ್ತಮ ತಳಿ ಮೀನು ಮಾರಾಟಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೋಟಗಾರಿಕೆ ಇಲಾಖೆಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ಇದಕ್ಕೆ ವ್ಯಾಪಕ ಪ್ರಚಾರ ಅಗತ್ಯ. ತಾಲ್ಲೂಕಿನಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿ ಹಣ್ಣುಗಳ ಸಸಿಗಳನ್ನು ನೆಡಲು ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕು ಎಂದು ಶಾಸಕರು ತಿಳಿಸಿದರು.

ಕೃಷಿ ಇಲಾಖೆ ಅಧಿಕಾರಿ ರವಿಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಲೋಕೇಶ್, ಉಪಧ್ಯಕ್ಷೆ ರತ್ನಮ್ಮ, ಸದಸ್ಯರಾದ ನರಸಿಂಹಮೂರ್ತಿ, ನಾಗೇಶ್, ಶ್ರೀನಿವಾಸ್ ಗೌಡ, ಇಒ ಎನ್.ಮುನಿರಾಜು, ಚಿನ್ನಪ್ಪ, ಬಿಸಿಎಂ ಅಧಿಕಾರಿ ನಾಗರಾಜು, ಮಹದೇವಯ್ಯ, ಮಂಜುನಾಥ್ ಮತ್ತು ಎನ್.ಪದ್ಮಶ್ರೀ  ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.