ಸೋಮವಾರ, ಫೆಬ್ರವರಿ 24, 2020
19 °C
ನೀಲಗಿರಿ ಮರಗಳ ತೆರವು ಕಾರ್ಯಾಚರಣೆ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ ಮನವಿ

ನೀಲಗಿರಿ ತೆರವು: ಸಹಕಾರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸತತ ಬರಗಾಲಕ್ಕೆ ಸಿಲುಕುತ್ತಿರುವ ಜಿಲ್ಲೆಯಲ್ಲಿ ಅಂತರ್ಜಲಕ್ಕೆ ಮಾರಕವಾಗಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಅಂತರ್ಜಲ ವೃದ್ಧಿಸಲು ರೈತರ ಸಹಕಾರದ ಅಗತ್ಯವಿದೆ. ರೈತರ ಸಹಕಾರದಿಂದಷ್ಟೇ ನಾವು ತಾಲ್ಲೂಕನ್ನು ನೀಲಗಿರಿ ಮುಕ್ತಗೊಳಿಸಲು ಸಾಧ್ಯ’ ಎಂದು ಚಿಕ್ಕಬಳ್ಳಾಪುರ ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ನೀಲಗಿರಿ ಮರಗಳ ತೆರವು ಕಾರ್ಯಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಅಂತರ್ಜಲ ಬರಡಾಗಿಸುವ ಅಕೇಶಿಯಾ ಹಾಗೂ ನೀಲಗಿರಿ ಮರ ಬೆಳೆಸುವುದನ್ನು ರಾಜ್ಯ ಸರ್ಕಾರ 2015ರಲ್ಲಿ ನಿಷೇಧಿಸಿದೆ. ಅಧಿಕೃತ ಸುತ್ತೋಲೆ ಕೂಡ ಹೊರಡಿಸಿದೆ. ಸರ್ಕಾರಿ ಜಮೀನು, ಅರಣ್ಯ ಪ್ರದೇಶದಲ್ಲಿ ಈ ಎರಡು ಸಸಿಗಳನ್ನು ನಾಟಿ ಮಾಡಿ ಬೆಳೆಸದಂತೆ ಅರಣ್ಯ ಇಲಾಖೆಯವರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ ಖಾಸಗಿ ಜಮೀನುಗಳಲ್ಲಿ ನೀಲಗಿರಿ ನೆಡುತೋಪುಗಳು ಹೆಚ್ಚುತ್ತಲೇ ಇವೆ. ಅವುಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ’ ಎಂದು ತಿಳಿಸಿದರು.

‘ಬರಪೀಡಿತ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಲ್ಲಿ ದಿನೇ ದಿನೇ ಮಳೆ ಪ್ರಮಾಣ ಕುಸಿಯುವ ಜತೆಗೆ ಅಂತರ್ಜಲ ಮಟ್ಟ ತೀವ್ರರೂಪದಲ್ಲಿ ಕುಸಿಯತೊಡಗಿದೆ. ಇದಕ್ಕೆ ನೀಲಗಿರಿ ಮರಗಳು ಸಹ ಕಾರಣವಾಗಿವೆ. ಹೀಗಾಗಿ, ನಾವು ಸಮರೋಪಾದಿಯಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಆ ಜಾಗದಲ್ಲಿ ಪರ್ಯಾಯ ಬೆಳೆ ಬೆಳೆಯಲು ರೈತರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿದ್ದೇವೆ’ ಎಂದರು.

‘ಖಾಸಗಿ ಒಡೆತನದಲ್ಲಿರುವ ನೀಲಗಿರಿ ಮರಗಳನ್ನು ಒಂದು ತಿಂಗಳು ಹಾಗೂ ಸರ್ಕಾರಿ ಜಮೀನಿನಲ್ಲಿರುವ ನೀಲಗಿರಿ ಮರಗಳನ್ನು ಎರಡು ತಿಂಗಳ ಒಳಗೆ ಸಂಪೂರ್ಣವಾಗಿ ತೆರವುಗೊಳಿಸಬೇಕಿದೆ. ರೈತರ ಸಹಕಾರ ಇಲ್ಲದಿದ್ದರೆ, ನೀಲಗಿರಿ ತೆರವು ಕಾರ್ಯ ತ್ವರಿತವಾಗಿ ನಡೆಯಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು. 

‘ಆದ್ದರಿಂದ ರೈತರು ಸ್ವಯಂಪ್ರೇರಿತರಾಗಿ ನೀಲಗಿರಿ ತೆರವುಗೊಳಿಸಲು ಮುಂದಾಗಬೇಕು. ಒಂದೊಮ್ಮೆ, ತೆರವುಗೊಳಿಸದೆ ಇದ್ದರೆ ಅಂತಹ ಭೂಮಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಜಮೀನಿನ ಪಹಣಿ ಕಾಲಂ 9ರಲ್ಲಿ ಸರ್ಕಾರಿ ಎಂದು ನಮೂದಿಸಲಾಗುತ್ತದೆ’ ಎಂದು ತಿಳಿಸಿದರು.

‘ತಾಲ್ಲೂಕನ್ನು ನೀಲಗಿರಿ ಮುಕ್ತಗೊಳಿಸಲು ಪ್ರತಿಯೊಬ್ಬ ರೈತ ಪಣತೊಡಬೇಕು. ನೀಲಗಿರಿ ತೆರವುಗೊಳಿಸಿ, ಪರ್ಯಾಯ ಬೆಳೆ ಬೆಳೆಯಲು ನರೇಗಾ ಯೋಜನೆ ಅಥವಾ ಅರಣ್ಯ ಇಲಾಖೆಯ ವಿವಿಧ ಯೋಜನೆಗಳ ಅಡಿ ಹೆಬ್ಬೇವು, ಜಂಬು ನೇರಳೆ, ಸಿಲ್ವರ್, ಶ್ರೀಗಂಧ, ರಕ್ತಚಂದನ, ನೆಲ್ಲಿ, ನಿಂಬೆ, ನುಗ್ಗೆ, ಮಹಾಗನಿ ಸೇರಿದಂತೆ ವಿವಿಧ ಜಾತಿಗಳನ್ನು ಗಿಡಗಳನ್ನು ನೀಡಲಾಗುತ್ತದೆ’ ಎಂದರು.

ಸಭೆಯಲ್ಲಿ ನಗರಸಭೆ ಆಯುಕ್ತ ಡಿ.ಲೋಹಿತ್, ವಲಯ ಅರಣ್ಯಾಧಿಕಾರಿ ವಿಕ್ರಮ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್, ರೈತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು