ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ವಿಭಿನ್ನ ಕಲಿಕಾ ತಂತ್ರ ಪ್ರಯೋಗ

Published 17 ಫೆಬ್ರುವರಿ 2024, 6:58 IST
Last Updated 17 ಫೆಬ್ರುವರಿ 2024, 6:58 IST
ಅಕ್ಷರ ಗಾತ್ರ

ಚಿಂತಾಮಣಿ: ಆಧುನಿಕ ಸೌಲಭ್ಯಗಳ ಬಳಕೆ, ಸ್ಮಾರ್ಟ್ ಕ್ಲಾಸ್, ವಿದ್ಯಾರ್ಥಿಗಳಿಗೆ ವಿಷಯಗಳನ್ನು ಮನದಟ್ಟು ಮಾಡುವ ವಿಭಿನ್ನ ಕಲಿಕಾ ತಂತ್ರಗಳು, ಗುಣಮಟ್ಟದ ಮೂಲಸೌಲಭ್ಯ, ಮುಖ್ಯೋಪಾಧ್ಯಾಯ ಮತ್ತು ಸಹಶಿಕ್ಷಕರ ಬದ್ಧತೆಯಿಂದಾಗಿ ನಗರದ ನೂತನ ಪ್ರೌಢಶಾಲೆಯು ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ. ಪ್ರೌಢಶಾಲೆಯಲ್ಲಿ 560 ವಿದ್ಯಾರ್ಥಿಗಳಿದ್ದಾರೆ. 16 ಜನ ಶಿಕ್ಷಕರಿದ್ದಾರೆ.

ಶಾಲೆಯಲ್ಲಿ ಎಲ್ಲ ಶಿಕ್ಷಕರೂ ಶ್ರಮವಹಿಸಿ, ಅತ್ಯಂತ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು, ಕಠಿಣ ವಿಷಯಗಳನ್ನು ಮನದಟ್ಟು ಮಾಡುತ್ತಾರೆ. ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ವಿವಿಧ ಕಂಪನಿಗಳು ಸ್ಪಂದಿಸಿವೆ.

ಗೂಗಲ್ ಮತ್ತು ಯೂಟ್ಯೂಬ್‌ಗಳಲ್ಲಿ 8, 9, 10ನೇ ತರಗತಿಯ ಪಠ್ಯವನ್ನು ಮತ್ತು ನೋಟ್ಸ್ ಆಪ್‌ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ಅದರಲ್ಲೇ ಓದಬಹುದು, ಬರೆದುಕೊಳ್ಳಬಹುದು. ಕಲಿಕೆಗೆ ಪೂರಕವಾಗಿ ವಿಜ್ಞಾನ ಕ್ಲಬ್, ಕಂಪ್ಯೂಟರ್ ಕ್ಲಬ್‌ಗಳಿವೆ.

ಸಾಮಾನ್ಯವಾಗಿ ಜನವರಿ ತಿಂಗಳು ಆರಂಭದಿಂದಲೇ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕೆ ಕಸರತ್ತು ನಡೆಸುತ್ತಾರೆ. ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ಫಲಿತಾಂಶಕ್ಕಾಗಿ ಶಿಕ್ಷಕರು ಹೆಚ್ಚಿನ ನಿಗಾವಹಿಸಿ ಅನೇಕ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಗಣಿತ, ವಿಜ್ಞಾನ, ಆಂಗ್ಲಭಾಷೆಗಳಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಹಲವಾರು ನೂತನ ಪ್ರಯೋಗ ಮಾಡುತ್ತಿದ್ದಾರೆ. ಫಲಿತಾಂಶ ಜನವರಿ ತಿಂಗಳಿಗೆ ಪಠ್ಯವನ್ನು ಮುಗಿಸಲಾಗಿದೆ. ಪ್ರತಿನಿತ್ಯ ಶಾಲೆ ಆರಂಭಕ್ಕೆ ಒಂದು ಗಂಟೆ ಮುಂಚೆ ಮತ್ತು ಶಾಲಾ ಸಮಯ ಮುಕ್ತಾಯದ ನಂತರ ಒಂದು ಗಂಟೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ.

ಪ್ರತಿ ಶಿಕ್ಷಕರೂ ಸಂಖ್ಯೆಗೆ ಅನುಗುಣವಾಗಿ 10-11 ಮಕ್ಕಳನ್ನು ದತ್ತು ತೆಗೆದುಕೊಂಡು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ಆ ಶಿಕ್ಷಕರು ನೋಡಿಕೊಳ್ಳುತ್ತಾರೆ. ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ. ಮನೆಗಳಲ್ಲಿನ ಕಲಿಕಾ ವಾತಾವರಣ, ಪೋಷಕರ ಆಸಕ್ತಿ ಎಲ್ಲವನ್ನು ಗಮನಿಸಿ ಸಲಹೆ ಸೂಚನೆ ನೀಡುತ್ತಾರೆ. ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಬೋಧನೆ ಮಾಡಲಾಗುತ್ತಿದೆ.

ಪ್ರತಿ ಶನಿವಾರ ಪಠ್ಯವನ್ನು ಕ್ವಿಜ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ರಸಪ್ರಶ್ನೆ, ಗುಂಪು ಅಧ್ಯಯನ, ಪೋಷಕರ ಸಭೆ, ಮಾದರಿ ಪ್ರಶ್ನೆ ಪತ್ರಿಕೆಗಳು, ಪೂರ್ವ ಸಿದ್ಧತಾ ಪರೀಕ್ಷೆ, ಭಾನುವಾರ ತರಗತಿಗಳನ್ನು ನಡೆಸಲಾಗುತ್ತಿದೆ.

ಪ್ರತಿ ತಿಂಗಳು ಪೋಷಕರ ಸಭೆ ನಡೆಸಿ ಮಕ್ಕಳ ಕಲಿಕೆ ಕುರಿತು ಚರ್ಚಿಸಲಾಗುತ್ತದೆ. ಫಲಿತಾಂಶ ಉತ್ತಮಪಡಿಸುವಲ್ಲಿ ಪೋಷಕರ ಪಾತ್ರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಪರೀಕ್ಷೆ ಮುಗಿಯುವವರೆಗೂ ಮನೆಯಲ್ಲಿ ಸಾಧ್ಯವಾದಷ್ಟು ದೂರದರ್ಶನ (ಟಿ.ವಿ) ವ್ಯವಸ್ಥೆ ಕಡಿತಗೊಳಿಸಬೇಕು. ಬೆಳಿಗ್ಗೆ ಮತ್ತು ರಾತ್ರಿ ಮಕ್ಕಳ ವ್ಯಾಸಂಗಕ್ಕೆ ಪೂರಕವಾದ ವಾತಾವರಣ ಇರುವಂತೆ ನೋಡಿಕೊಳ್ಳಲು ಪೋಷಕರಿಗೆ ಮನವಿ ಮಾಡಲಾಗಿದೆ.

ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಮಕ್ಕಳ ಬಗ್ಗೆ ವಿಶೇಷ ಗಮನ ವಹಿಸಲಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಮೂಲಕವೂ ಶಿಕ್ಷಕರನ್ನು ಸಂಪರ್ಕಿಸಬಹುದು. ವಿದ್ಯಾರ್ಥಿಗಳು ಅರ್ಥವಾಗದ ಕ್ಲಿಷ್ಟ ಸಮಸ್ಯೆಗಳ ಕುರಿತು ಆಯಾ ಶಿಕ್ಷಕರೊಂದಿಗೆ ವೈಯಕ್ತಿಕವಾಗಿ ಪ್ರಶ್ನೆಗಳನ್ನು ಕೇಳಿ ಬಗೆಹರಿಸಿಕೊಳ್ಳಬಹುದಾದ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಉತ್ತಮ ಫಲಿತಾಂಶ ಗಳಿಸಲು ಶನಿವಾರ ಭಾನುವಾರವೂ ತರಗತಿ ನಡೆಸಲಾಗುತ್ತಿದೆ. 184 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಶಿಕ್ಷಕರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಉತ್ತಮ ಕಲಿಕಾ ವಾತಾವರಣವಿದೆ
ವಿ.ಉಮಾದೇವಿ ಬಿಇಒ ಚಿಂತಾಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT