ಗುರುವಾರ , ಸೆಪ್ಟೆಂಬರ್ 23, 2021
22 °C
ಗಣಿಗಾರಿಕೆ: ಷರತ್ತು ಪಾಲನೆ ಮಾಡದೆ ಸ್ಫೋಟ, ರೈತರಿಗೆ ಆತಂಕ

ಬಾಗೇಪಲ್ಲಿ: ಹೊಲ, ಗದ್ದೆಗಳಿಗೆ ಉರುಳುವ ಕಲ್ಲು

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದ ಬಳಿ ಸರ್ಕಾರದ ಅನುಮತಿ ಪಡೆದು ಕಲ್ಲುಗಣಿಗಾರಿಕೆ ನಡೆಸುತ್ತಿರುವ ಪ್ರದೇಶಗಳಲ್ಲಿ ಜಿಲೆಟಿನ್ ಸ್ಫೋಟಕ ಸಿಡಿಸುತ್ತಿರುವುದರಿಂದ ಬೃಹತ್ ಕಲ್ಲುಗಳು ರೈತರು ಹೊಲ, ಗದ್ದೆಗಳಿಗೆ ಬೀಳುತ್ತಿವೆ. ಇದರಿಂದಾಗಿ ಜನ-ಜಾನುವಾರುಗಳಿಗೆ ತೊಂದರೆ ಆಗಿದೆ.

ತಾಲ್ಲೂಕಿನ ಹೊನ್ನಂಪಲ್ಲಿ ಸಮೀಪದ ಮಾಡಪಲ್ಲಿ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಆದರೆ ಗಣಿಗಾರಿಕೆ ನಡೆಸಲು ಹಾಕಿದ ಷರತ್ತುಗಳನ್ನು ಸಮರ್ಪಕ ರೀತಿಯಲ್ಲಿ ಪಾಲನೆ ಮಾಡುತ್ತಿಲ್ಲ. ಗಣಿಗಾರಿಕೆ ನಡೆಸುವ ಬೆಟ್ಟದ ಸುತ್ತಲೂ ರೈತರ ಜಮೀನು, ಹೊಲ, ಗದ್ದೆಗಳು ಇವೆ. ನಿತ್ಯವೂ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ.

ಇಂತಹ ಸಂದರ್ಭಗಳಲ್ಲಿ ಸ್ಪೋಟಿಸುವ ಸ್ಪೋಟಕಗಳಿಂದ ಬೃಹತ್ ಪ್ರಮಾಣದ ಕಲ್ಲುಬಂಡೆಗಳು ಅಡೆತಡೆ ಇಲ್ಲದೆ ನೇರವಾಗಿ ರೈತರ ಜಮೀನುಗಳಿಗೆ ನುಗ್ಗುತ್ತಿವೆ. ಇದರಿಂದಾಗಿ ರೈತರು ಪ್ರಾಣಭೀತಿಯಲ್ಲೇ ಕೃಷಿ ಚಟುವಟಿಕೆ ನಡೆಸದಂತೆ ಆಗಿದೆ‌. ಹಾಗೂ ಜಮೀನುಗಳಲ್ಲಿನ ಬೆಳೆ ನಾಶವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗಣಿಗಾರಿಕೆಗೆ ಅನುಮತಿ ನೀಡುವಾಗ ಪರಿಸರ ಮಾಲಿನ್ಯ, ರೈತರಿಗೆ ಹಾನಿ, ಜಲಮೂಲಗಳಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಅಳವಡಿಸಿ ಗಣಿಗಾರಿಕೆ ನಡೆಸುವಂತೆ ಷರತ್ತು ವಿಧಿಸಲಾಗಿರುತ್ತದೆ. ಮಾಡಪಲ್ಲಿ ಬೆಟ್ಟದಲ್ಲಿ ಗಣಿಗಾರಿಕಾ ಪ್ರದೇಶದ ಸುತ್ತ ಕಲ್ಲುಬಂಡೆಗಳು ಉರುಳದಂತೆ ತಡೆಗೋಡೆ ಇಲ್ಲ. ಇದರಿಂದ ಕಲ್ಲುಗಳು ಉರುಳಿ ಹೊಲ-ಗದ್ದೆಗಳಿಗೆ ಬರುತ್ತಿದೆ. ಅಪಾರವಾದ ಸಸ್ಯ ಸಂಪತ್ತಿರುವ ಈ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯಿಂದ ಜನರಿಗೆ ಭಾರಿ ತೊಂದರೆ ಆಗುತ್ತಿದೆ ಎಂದು ಗ್ರಾಮದ ನರಸಿಂಹಮೂರ್ತಿ ತಿಳಿಸಿದರು.

ನಮ್ಮ ಜಮೀನು ಬೆಟ್ಟದ ತಪ್ಪಲಲ್ಲೇ ಇರುವುದರಿಂದ ಬೃಹತ್ ಬಂಡೆಗಳು ಉರುಳಿ ಬಿದ್ದಿವೆ. ಕಲ್ಲುಗಣಿಗಾರಿಕಾ ಲಾರಿಗಳ ಓಡಾಟಕ್ಕೆ ನಿರ್ಮಿಸಿಕೊಂಡ ರಸ್ತೆಯಿಂದಾಗಿ ಬೆಟ್ಟದ ಮಣ್ಣು ಆ ರಸ್ತೆಯ ಮೂಲಕ ಕೊಚ್ಚಿಕೊಂಡು ಬಂದು ನಮ್ಮ ಜಮೀನಿನಲ್ಲಿ ಮಣ್ಣಿನ ದಿಬ್ಬಗಳನ್ನು ನಿರ್ಮಿಸುತ್ತಿದೆ. ಇದರಿಂದಾಗಿ ಬಿತ್ತಿದ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ರೈತ ಈಶ್ವರಪ್ಪ ನೋವು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.