ಗುರುವಾರ , ಏಪ್ರಿಲ್ 22, 2021
24 °C
ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ನಗರದಲ್ಲಿ ಜನಜಾಗೃತಿ ಜಾಥಾ

ನೇತ್ರದಾನ ಮಾಡಿ ಬಾಳು ಬೆಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸತ್ತ ಮೇಲೆ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಿ ಕತ್ತಲಲ್ಲಿ ಜೀವನ ಸಾಗಿಸುತ್ತಿರುವ ಅಂಧರ ಬಾಳಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಜನರು ನೇತ್ರದಾನಕ್ಕೆ ಮುಂದಾಗಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್ ಗೌಡ ಹೇಳಿದರು.

ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ನಗರದಲ್ಲಿ ಬುಧವಾರ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ನೇತ್ರದಾನ ಕುರಿತಂತೆ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಣ್ಣು ಪ್ರತಿಯೊಬ್ಬರ ಜೀವನದ ಅಮೂಲ್ಯ ಅಂಗ. ಆದರೆ ಸಮಾಜದಲ್ಲಿ ಕಣ್ಣು ಕಾಣದ ಸಾಕಷ್ಟು ಜನರು ಅಂಧಕಾರದಲ್ಲಿ ಬದುಕುತ್ತಿದ್ದಾರೆ. ಆದ್ದರಿಂದ ಮಣ್ಣಲ್ಲಿ ಮಣ್ಣಾಗಿ ಕರಗುವ, ಬೂದಿಯಾಗಿ ಹೋಗುವ ದೇಹದ ಬಗ್ಗೆ ವ್ಯಾಮೋಹ ಇರಿಸಿಕೊಳ್ಳಬಾರದು. ನಮ್ಮ ಜೀವನದ ನಂತರವೂ ಈ ದೇಹ ಇತರರಿಗೂ ನೆರವಾಗಲಿ ಎಂಬ ಸದುದ್ದೇಶದಿಂದ ಕಣ್ಣುಗಳನ್ನು ದಾನ ಮಾಡಿದರೆ ಮತ್ತೊಬ್ಬರ ಬಾಳಲ್ಲಿ ಬೆಳಕು ತಂದ ಸಾರ್ಥಕತೆ ನಮ್ಮದಾಗುತ್ತದೆ’ ಎಂದು ತಿಳಿಸಿದರು.

‘ಪಂಚೇಂದ್ರಿಯಗಳಲ್ಲೇ ಕಣ್ಣು ಅತಿ ಸೂಕ್ಷ್ಮ ಅಂಗವಾಗಿದೆ. ಕಣ್ಣಿನ ಸಮಸ್ಯೆಗಳಿದ್ದರೆ ತಕ್ಷಣ ತಜ್ಞ ವೈದ್ಯರಲ್ಲಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಯಾವುದೇ ವಯಸ್ಸಿನ ಹಾಗೂ ಯಾವುದೇ ರಕ್ತದ ಗುಂಪಿನ ಮಹಿಳೆ, ಪುರುಷ ನೇತ್ರದಾನ ಮಾಡಬಹುದು. ಅನೇಕರಿಗೆ ನೇತ್ರದಾನ ಮಾಡುವ ಆಸೆ ಇರುತ್ತದೆ. ಆದರೆ, ತಿಳಿವಳಿಕೆ ಇಲ್ಲದೆ ಮುಂದೆ ಬರುತ್ತಿಲ್ಲ. ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಅಗತ್ಯವಿದೆ’ ಎಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿ, ನರ್ಸಿಂಗ್ ಪ್ರಶಿಕ್ಷಣಾರ್ಥಿಗಳು, ಆಶಾ ಕಾರ್ಯಕರ್ತೆರು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ಕರಪತ್ರಗಳನ್ನು ಹಂಚುವ ಮೂಲಕ ನೇತ್ರದಾನದ ಬಗ್ಗೆ ಅರಿವು ಮೂಡಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್ ಕುಮಾರ್, ಜಿಲ್ಲಾ ಕುಷ್ಠ ರೋಗ ನಿಯಂತ್ರಣ ಅಧಿಕಾರಿ ಡಾ.ಚಂದ್ರಮೋಹನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಹರೀಶ್, ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್‌, ಮಕ್ಕಳ ತಜ್ಞ ಡಾ.ರವಿಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಂಜುಳಾ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಮಹೇಶ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು