ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಸೆಪ್ಟೆಂಬರ್‌ನಲ್ಲಿ ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ‘ಆಶಾ ಕಿರಣ’ ಕಾರ್ಯಕ್ರಮ ಜಾರಿಗೊಳಿಸಲು ಮುಂದಾಗಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದು ಜಿಲ್ಲೆಯಲ್ಲಿ ‘ಆಶಾ ಕಿರಣ’ ಪ್ರಾಯೋಗಿಕವಾಗಿ ಅನುಷ್ಠಾನವಾಗಲಿದೆ.
ಬೆಂಗಳೂರು ವಿಭಾಗದಲ್ಲಿ ಚಿಕ್ಕಬಳ್ಳಾಪುರವು ಕಾರ್ಯಕ್ರಮ ಜಾರಿಗೆ ಪ್ರಾಯೋಗಿಕ ಜಿಲ್ಲೆಯಾಗಿ ಆಯ್ಕೆ ಆಗಿದೆ. ಉಳಿದಂತೆ ಬೆಳಗಾವಿ ವಿಭಾಗದಲ್ಲಿ ಹಾವೇರಿ, ಮೈಸೂರು ವಿಭಾಗದಲ್ಲಿ ಚಾಮರಾಜನಗರ ಹಾಗೂ ಕಲಬುರಗಿ ವಿಭಾಗದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕಾರ್ಯಕ್ರಮವು ಪ್ರಾಯೋಗಿಕವಾಗಿ ಜಾರಿಗೊಳ್ಳಲಿದೆ.
ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಎರಡನೇ ಬಾರಿಗೆ ಅವರು ಮುಖ್ಯಮಂತ್ರಿಯಾದ ನಂತರ ಜಿಲ್ಲೆಗೆ ನೀಡುತ್ತಿರುವ ಮೊದಲ ಭೇಟಿ ಇದಾಗಲಿದೆ. ಈ ಸಮಯದಲ್ಲಿಯೇ ಮೆಗಾ ಡೇರಿ ಉದ್ಘಾಟನೆ ಜೊತೆಗೆ ‘ಆಶಾ ಕಿರಣ’ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಏನಿದು ‘ಆಶಾ ಕಿರಣ’: ರಾಜ್ಯದ ಜನರ ಕಣ್ಣಿನ ಆರೋಗ್ಯ ತಪಾಸಣೆಗೆ ಸಂಬಂಧಿಸಿದ ಯೋಜನೆ ಇದಾಗಿದೆ. 40 ವರ್ಷ ಮೇಲ್ಪಟ್ಟವರು ಹಾಗೂ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ. ಯಾರಿಗೆ ಕನ್ನಡಕಗಳು ಅಗತ್ಯವಿದೆಯೊ, ಅವರಿಗೆ ಉಚಿತವಾಗಿ ಕನ್ನಡ ನೀಡಲಾಗುತ್ತದೆ. ಅಗತ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ ಸಹ ಮಾಡಿಸಲಾಗುತ್ತದೆ. ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಲ್ಲಿ ಸರ್ಕಾರ ಈ ಚಿಕಿತ್ಸೆಗಳನ್ನು ನೀಡಲಿದೆ. 2023ರ ಡಿಸೆಂಬರ್‌ನಿಂದ 2024ರ ಮಾರ್ಚ್ ಒಳಗೆ ಈ ತಪಾಸಣಾ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯಲಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಜಾರಿಗೊಳ್ಳುತ್ತಿರುವ ಮೊದಲ ಪ್ರಾಯೋಗಿಕ ಯೋಜನೆ ಇದಾಗಿದೆ. ಜನರಷ್ಟೇ ಅಲ್ಲ ಜಿಲ್ಲೆಯ ವಿದ್ಯಾರ್ಥಿ ಸಮೂಹದ ಕಣ್ಣಿನ ಆರೋಗ್ಯದ ತಪಾಸಣೆ ಆಯಾ ಶಾಲೆ, ಕಾಲೇಜಿನಲ್ಲಿಯೇ ನಡೆಯಲಿದೆ. ಹೀಗೆ ಪ್ರಮುಖ ಯೋಜನೆಯೊಂದು ಜಿಲ್ಲೆಯಲ್ಲಿ ಕಾರ್ಯಗತವಾಗುವ ಹಂತದಲ್ಲಿದೆ.
ಆಶಾ ಕಾರ್ಯಕರ್ತೆಯರಿಗೆ ತರಬೇತಿ: ಕಣ್ಣಿನ ತಪಾಸಣೆಗೆ ಸಂಬಂಧಿಸಿದಂತೆ ಎರಡು ಹಂತದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ತೆರಳಿ ಜನರ ಕಣ್ಣಿನ ಆರೋಗ್ಯ ಪರೀಕ್ಷಿಸುವರು. ಯಾವ ರೀತಿ ಪರೀಕ್ಷೆ ನಡೆಸಬೇಕು ಎನ್ನುವ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಸಹ ನೀಡಲಾಗುತ್ತದೆ. ರಾಜ್ಯ ಮಟ್ಟದಿಂದಲೇ ತಪಾಸಣೆ ಕಿಟ್‌ಗಳನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ತಿಳಿಸಿದರು.
ಎರಡನೇ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಣ್ಣಿನ ತಪಾಸಣೆ ನಡೆಯುತ್ತದೆ. ಇದು ಕಣ್ಣಿನ ಆರೋಗ್ಯ ಕಾಪಾಡಲು ಉತ್ತಮ ಯೋಜನೆ ಆಗಿದೆ. ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಇದ್ದವರು ಸರಿಯಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿರುವುದಿಲ್ಲ. ಅಂತಹವರ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ. ಯಾರಿಗೇ ಆಗಲಿ ಕಣ್ಣಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದರೆ ಅವುಗಳನ್ನು ಪತ್ತೆ ಮಾಡಿ ‘ಆಶಾ ಕಿರಣ’ದಡಿ ಚಿಕಿತ್ಸೆ ನೀಡಲಾಗುತ್ತದೆ. ಇದು ಉತ್ತಮ ಯೋಜನೆ ಎಂದು ಮಾಹಿತಿ ನೀಡಿದರು.
ಯೋಜನೆಗೆ ಚಾಲನೆ ನೀಡಲು ಜಿಲ್ಲೆಗೆ ಬರಲಿರುವ ಮುಖ್ಯಮಂತ್ರಿ ಚಾಮರಾಜನಗರ, ಹಾವೇರಿ, ಕಲಬುರಗಿ ಜಿಲ್ಲೆ ಸಹ ಆಯ್ಕೆ ಡಿಸೆಂಬರ್‌ನಿಂದ ಮಾರ್ಚ್ ಒಳಗೆ ತಪಾಸಣೆ ಕಾರ್ಯಕ್ರಮ
‘ಸಿದ್ಧತೆಗಳು ನಡೆದಿವೆ’ ‘ಆಶಾ ಕಿರಣ’ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ನೇತೃತ್ವದಲ್ಲಿ ಸಭೆಗಳು ಈಗಾಗಲೇ ನಡೆದಿವೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಸಹ ನಡೆಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆಗಳು ನಡೆದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.