ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಬದುಕಿಗೆ ಆಸರೆಯಾದ ಸೊಪ್ಪು, ತರಕಾರಿ

ಸುತ್ತಮುತ್ತಲ ರೈತರಿಗೂ ಮಾರ್ಗದರ್ಶನ ನೀಡುವ ಯುವ ರೈತ ವೇಣು
Published 1 ಸೆಪ್ಟೆಂಬರ್ 2024, 7:04 IST
Last Updated 1 ಸೆಪ್ಟೆಂಬರ್ 2024, 7:04 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಗೋಪಸಂದ್ರ ಗ್ರಾಮದಲ್ಲಿ ಸ್ನಾತಕೋತ್ತರ ಪದವೀಧರ ರೈತ ವೇಣು ಅವರು ಹೀರೆಕಾಯಿ, ಸೊಪ್ಪು, ತರಕಾರಿ ಬೆಳೆದು ಅತ್ಯುತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಸರ್ಕಾರಿ ಕೆಲಸಕ್ಕೆ ಮಾರು ಹೋಗದೆ ಸ್ವಂತವಾಗಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ವೇಣು 2022ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. ಇವರಿಗೆ 10 ಎಕರೆ ಕೃಷಿ ಭೂಮಿ ಇದೆ. ಅದರಲ್ಲಿ 5 ಎಕರೆ ಮಾವಿನ ತೋಟ, ಉಳಿದ 5 ಎಕರೆಯಲ್ಲಿ ಸೊಪ್ಪು, ತರಕಾರಿಗಳನ್ನು ಬೆಳೆಯುತ್ತಾರೆ. ಕೊಳವೆ ಬಾವಿ ನೀರಿನ ಆಸರೆಯಾಗಿದೆ.

ಯಾವುದೇ ಒಂದು ಬೆಳೆಗೆ ಮಾರುಹೋಗದೆ ಜಮೀನನ್ನು ತಾಕುಗಳಾಗಿ ವಿಂಗಡಿಸಿ ಟೊಮೆಟೊ, ಹೀರೆಕಾಯಿ, ಬೆಂಡೆಕಾಯಿ, ಬೂದುಗುಂಬಳ, ಬೀಟ್ರೂಟ್, ಜೋಳ ಹಾಗೂ ವಿವಿಧ ತಳಿಗಳ ಸೊಪ್ಪು ಬೆಳೆಯುತ್ತಿದ್ದಾರೆ. ಸಾಧ್ಯವಾದಷ್ಟು ನೇರ ಮಾರಾಟಕ್ಕೆ ಆದ್ಯತೆ ನೀಡುತ್ತಾರೆ. ಸೊಪ್ಪು, ತರಕಾರಿಗಳನ್ನು ನೇರ ಮಾರಾಟ ಮಾಡುವುದು. ಹಸಿರು ತರಕಾರಿಗಳನ್ನು ಬೆಳೆಯುವುದರಿಂದ ಕಡಿಮೆ ಖರ್ಚಿನಿಂದ ಹೆಚ್ಚು ಲಾಭದಾಯಕವಾಗುತ್ತದೆ ಎನ್ನುತ್ತಾರೆ ವೇಣು.

ಕೃಷಿ ಜತೆಗೆ ಹೈನುಗಾರಿಕೆ, ಕುರಿ ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಕೈಗೊಂಡಿದ್ದಾರೆ. ಜೇನು ಸಾಕಾಣಿಕೆಗಾಗಿ 10 ಪೆಟ್ಟಿಗೆ ಇಟ್ಟಿದ್ದಾರೆ. ಒಂದು ಪೆಟ್ಟಿಗೆಯಿಂದ 2-3 ಕೆ.ಜಿ.ಜೇನುತುಪ್ಪ ದೊರೆಯುತ್ತದೆ. ಯಾವುದೇ ಬಂಡವಾಳ ಹೂಡದೆ ಲಾಭ ಪಡೆಯುತ್ತಾರೆ. ಆಸಕ್ತ ಸುತ್ತಮುತ್ತಲ ರೈತರಿಗೂ ಸಹ ಮಾರ್ಗದರ್ಶನ ಮಾಡುತ್ತಾರೆ.

ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಸಮಗ್ರ ಪೋಷಕಾಂಶ ಹಾಗೂ ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆ ಮಾಡುತ್ತಿದ್ದಾರೆ. ಕಾಂಪೋಸ್ಟ್ ಮತ್ತು ಹಸಿರೆಲೆ ಗೊಬ್ಬರ ಬಳಕೆ ಮಾಡಿಕೊಂಡು ಮಣ್ಣಿನ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಜಮೀನಿನಲ್ಲಿ ನೀರು ಸಂರಕ್ಷಣೆಗಾಗಿ ಕೃಷಿ ಹೊಂಡ, ಬದುಗಳ ನಿರ್ಮಾಣ ಮಾಡಿದ್ದಾರೆ. ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಪಿಯುಸಿ ತೇರ್ಗಡೆಯಾಗಿ ಕೃಷಿ ವಿಶ್ವವಿದ್ಯಾಲಯದ ಕೃಷಿ, ರೇಷ್ಮೆ, ತೋಟಗಾರಿಕೆ, ಪಶುವೈದ್ಯಕೀಯ, ಮೀನುಗಾರಿಕೆ ಮತ್ತಿತರ ಕೋರ್ಸ್‌ಗಳಿಗೆ ಮೀಸಲಾತಿ ಹೊಂದಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕೃಷಿ ಪ್ರಾಯೋಗಿಕ ಆಯ್ಕೆ ಪರೀಕ್ಷೆಗೆ ತರಬೇತಿ ನೀಡುತ್ತಾರೆ. 2 ವರ್ಷಗಳಿಂದ ತರಬೇತಿ ನೀಡುತ್ತಿದ್ದು ಇದುವರೆಗೆ 180 ಜನರಿಗೆ ನೀಡಿದ್ದೇನೆ. ಕಳೆದ ವರ್ಷ 6 ವಿದ್ಯಾರ್ಥಿಗಳು ಪೂರ್ಣ ಅಂಕಗಳಿಸಿದ್ದರು ಎಂದು ವೇಣು ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರ, ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ಜೇನು ಸಾಕಾಣಿಕೆ, ಅಣಬೆ ಕೃಷಿ, ಜೈವಿಕ ಪೀಡೆನಾಶಕಗಳ ಉತ್ಪಾದನೆ ಮತ್ತಿತರ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಚ್ಚಿನ ಜ್ಞಾನ, ಲಾಭದಾಯಕ ಕೃಷಿಗೆ ಸೂಕ್ತ ವೈಜ್ಞಾನಿಕ ಸಲಹೆ ಪಡೆದುಕೊಂಡಿದ್ದಾರೆ.

ರೈತರು ಬಹುಬೆಳೆ ಮತ್ತು ನೇರ ಮಾರಾಟ ಪದ್ಧತಿ ಅಳವಡಿಸಿಕೊಂಡರೆ ಮಾತ್ರ ಅಭಿವೃದ್ಧಿಯಾಗುತ್ತಾರೆ. ಹೆಚ್ಚಿನ ಆಸೆಯಿಂದ ಒಂದು ಬೆಳೆಗೆ ಮುಗಿಬೀಳಬಾರದು. ಅಗತ್ಯಕ್ಕೆ ತಕ್ಕಂತೆ ಜಮೀನನ್ನು ತಾಕುಗಳನ್ನಾಗಿ ಮಾಡಿಕೊಂಡು ವಿವಿಧ ಬೆಳೆ ಬೆಳೆಯಬೇಕು. ಒಂದು ಬೆಳೆ ಕೊಯ್ಲು ಮುಗಿಯುತ್ತಿದ್ದಂತೆ ಮತ್ತೊಂದು ಬೆಳೆ ಕೊಯ್ಲಿಗೆ ಬರುವಂತೆ ಕೋಡಿಕೊಳ್ಳಬೇಕು. ಕಡಿಮೆಯಾದರೂ ದಿನನಿತ್ಯ ಆದಾಯ ಗಳಿಸುವಂತಿರಬೇಕು ಎಂದು ರೈತರಿಗೆ ಸಲಹೆ ನೀಡುತ್ತಾರೆ.

ಕೃಷಿಯಲ್ಲಿ ಅವರ ಸಾಧನೆಯನ್ನು ಗುರುತಿಸಿ 2022ರಲ್ಲಿ ಅಮರನಾರಾಯಣ ರೈತ ಉತ್ಪಾದಕ ಸಂಘದಿಂದ ಪ್ರಗತಿಪರ ರೈತ ಪ್ರಸಸ್ತಿ, 2023ರಲ್ಲಿ ಕೃಷಿ ಇಲಾಖೆಯಿಂದ ಯುವರೈತ ಪ್ರಶಸ್ತಿ ನೀಡಲಾಗಿದೆ.

ಹಸುಗಳ ಪೌಷ್ಟಿಕ ಆಹಾರ ಅಜೋಲಾ ಬೆಳೆ
ಹಸುಗಳ ಪೌಷ್ಟಿಕ ಆಹಾರ ಅಜೋಲಾ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT