ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ | ಮಳೆ ಕೊರತೆ: ಬಿತ್ತನೆ ಬೀಜ ಹಾಕಲು ಸಿದ್ಧತೆ

Published 1 ಜುಲೈ 2024, 6:58 IST
Last Updated 1 ಜುಲೈ 2024, 6:58 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನಾದ್ಯಾಂತ ಮುಂಗಾರು ಮಳೆ ಕೊರತೆ ನಡುವೆ ರೈತರು ಭೂಮಿ ಹದ ಹಾಗೂ ಬೀಜ ಬಿತ್ತನೆಗೆ ಮುಂದಾಗಿದ್ದಾರೆ. ಮಳೆ ಕೊರತೆ ಇರುವ ಗ್ರಾಮಗಳಲ್ಲಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ.

ತಾಲ್ಲೂಕಿನಲ್ಲಿ ಜೂನ್ 21ರ ಅಂತ್ಯಕ್ಕೆ 95 ಮಿ.ಮೀ ಮಳೆಯಾಗಬೇಕಿತ್ತು. ಇದುವರೆಗೆ 83 ಮಿ.ಮೀ ಮಳೆಯಾಗಿದೆ. ಉಳಿದಂತೆ 12 ಮೀ.ಮೀ ನಷ್ಟು ಮಳೆ ಕೊರತೆ ಇದೆ.

ತಾಲ್ಲೂಕಿನಲ್ಲಿ ಕಸಬಾ, ಮಿಟ್ಟೇಮರಿ, ಪಾತಪಾಳ್ಯ, ಚೇಳೂರು, ಗೂಳೂರು 5 ಹೋಬಳಿಗಳ ಪೈಕಿ 430ಕ್ಕೂ ಹೆಚ್ಚು ಗ್ರಾಮಗಳು ಇವೆ. ತಾಲ್ಲೂಕಿನಲ್ಲಿ 90,009 ಹೆಕ್ಟೇರ್ ಭೌಗೋಳಿಕ ಪ್ರದೇಶ ಹೊಂದಿದೆ.

ತಾಲ್ಲೂಕಿನಲ್ಲಿ 38,342 ಹೆಕ್ಟೇರ್ ನಿವ್ವಳ ಕೃಷಿ ಪ್ರದೇಶ, 18,488 ಹೆಕ್ಟೇರ್ ಅರಣ್ಯ ಪ್ರದೇಶ, 6790 ಎಕರೆ ಸಾಗುವಳಿಗೆ ಯೋಗ್ಯವಲ್ಲದ ಭೂಮಿ, 7,498 ಬಂಜರು ಭೂಮಿ, 11,879 ಸಾಗುವಳಿ ಮಾಡದಿರುವ ಇತರೆ ಭೂಮಿ, 25,867 ಯೋಗ್ಯವಲ್ಲದ ಸಾಗುವಳಿ ಭೂಮಿ ಇದೆ.

ತಾಲ್ಲೂಕಿನಲ್ಲಿ 325 ನೀರಾವರಿ ಕೆರೆಗಳು ಇವೆ. 5,099 ಹೆಕ್ಟರ್ ಪ್ರದೇಶದಲ್ಲಿ ಕೊಳವೆಬಾವಿಗಳಿಂದ ನೀರಾವರಿ ಪ್ರದೇಶ ಇದೆ. 8,029 ಹೆಕ್ಟರ್ ಪ್ರದೇಶದಲ್ಲಿ ನೀರಾವರಿ ಪ್ರದೇಶ ಇದೆ. 23 ಕೃಷಿ ಸಹಕಾರ ಸಂಘ, 24 ಬಿತ್ತನೆ ಬೀಜ ವಿತರಕರು, 32 ರಸಗೊಬ್ಬರ ವಿತರಕರು, 38 ಕೀಟನಾಶಕ ವಿತರಕರು, 5 ರೈತ ಸಂಪರ್ಕ ಕೇಂದ್ರಗಳಿವೆ.

ದಾಸ್ತಾನು ವಿವರ: ತಾಲ್ಲೂಕಿನಲ್ಲಿ ಜೂನ್ 21ರ ಅಂತ್ಯಕ್ಕೆ 5 ಹೋಬಳಿಗಳ ಪೈಕಿ, ರಾಗಿ 20.3 ಕ್ವಿಂಟಲ್, ಜೋಳ 201.88 ಕ್ವಿಂಟಲ್, ನೆಲಗಡಲೆ 450 ಕ್ವಿಂಟಲ್, ತೊಗರಿ 14 ಕ್ವಿಂಟಲ್, ಅಲಸಂದೆ 0.8 ಕ್ವಿಂಟಲ್, ನವಣೆ 0.6 ಕ್ವಿಂಟಲ್ ದಾಸ್ತಾನು ಇದೆ. ಯೂರಿಯಾ 538 ಕ್ವಿಂಟಲ್, ಡಿಎಪಿ 189.65 ಕ್ವಿಂಟಲ್, ಎಸ್‍ಎಸ್‍ಪಿ 28.2 ಕ್ವಿಂಟಲ್, ಎಂಓಪಿ 33.9 ಕ್ವಿಂಟಲ್, ಎನ್‍ಪಿಕೆ 155 ಕ್ವಿಂಟಲ್ ರಸಗೊಬ್ಬರ ದಾಸ್ತಾನು ಇದೆ. ಒಟ್ಟಾರೆಯಾಗಿ 944.75 ಕ್ವಿಂಟಲ್ ರಸಗೊಬ್ಬರ ದಾಸ್ತಾನು ಇದೆ.

ಮಳೆ ಕೈ ಕೊಟ್ಟಿದ್ದರಿಂದ ಬಿತ್ತನೆ ಬೀಜ ಹಾಕಲು ಆಗಿಲ್ಲ. ಭೂಮಿ ಹದ ಮಾಡಿದ್ದೇವೆ. ಮಳೆಯಾಗುವ ಭರವಸೆ ಇದೆ. ಮಳೆ ಬಂದರೆ ಬಿತ್ತನೆ ಬೀಜ ಹಾಕುತ್ತೇವೆ ಎಂದು ಆಗಟಮಡಕ ಗ್ರಾಮದ ರೈತ ಎ.ಎನ್.ಶ್ರೀರಾಮಪ್ಪ ತಿಳಿಸಿದರು.

ರೈತರ ಬೆಳೆ ನಷ್ಟ, ವಿಮೆ ಪರಿಹಾರದ ವಸ್ತುನಿಷ್ಠ ವರದಿ ನೀಡಲು ಕೃಷಿ, ಕಂದಾಯ ಅಧಿಕಾರಿಗಳು ಜಂಟಿ ಸರ್ವೆ ಮಾಡಬೇಕು. ರೈತರಿಗೆ ತೊಂದರೆ ನೀಡಿದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ ಹೇಳಿದರು.

ಶಾಶ್ವತ ನೀರಾವರಿಗೆ ಡಾ.ಪರಮಶಿವಯ್ಯ ವರದಿ ಅನುಷ್ಠಾನ, ಎತ್ತಿನಹೊಳೆ, ಕೃಷ್ಣಾ ನದಿಯಿಂದ ನೀರು ಹರಿಸುವುದು ಅಗತ್ಯ. ಸರ್ಕಾರಗಳು ಕೂಡಲೇ ಶಾಶ್ವತ ನೀರಾವರಿ ಕಲ್ಪಿಸಬೇಕು ಎಂದು ಶಾಶ್ವತ ನೀರಾವರಿ ಹೋರಾಟಗಾರ ಚನ್ನರಾಯಪ್ಪ ಒತ್ತಾಯಿಸಿದರು.

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದೆ. ಬೀಜ ಬಿತ್ತಲು ಮಳೆಯಾಗಿಲ್ಲ. ಬೆಳೆಗಳ ಮಧ್ಯೆ ತೊಗರಿ, ಅಲಸಂದೆ, ಅವರೆ ಬೀಜ ಹಾಕಲು ರೈತರು ಮುಂದಾಗಬೇಕು ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕಿ ಲಕ್ಷ್ಮಿ ಪ್ರಜಾವಾಣಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT