ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ | ಗರಿಗೆದರಿದ ಕೃಷಿ ಚಟುವಟಿಕೆ: ಬಿತ್ತನೆಗೆ ಸಜ್ಜುಗೊಳಿಸುತ್ತಿರುವ ರೈತರು

Published 31 ಮೇ 2024, 6:21 IST
Last Updated 31 ಮೇ 2024, 6:21 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಮಳೆಯಾಗುತ್ತಿರುವುದರಿಂದ ರೈತರು ಲಘು ಬಗೆಯಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಮಳೆ ಕೈ ಕೊಟ್ಟಿದ್ದು, ಈ ವರ್ಷವಾದರೂ ಉತ್ತಮ ಮಳೆಯಾಗಬಹುದು ಎಂಬ ಆಶಾಭಾವನೆಯಲ್ಲಿ ರೈತರು ಕೃಷಿಯತ್ತ ಹೆಜ್ಜೆ ಇಟ್ಟಿದ್ದಾರೆ.

ತಾಲ್ಲೂಕಿನಲ್ಲಿ ಜನವರಿಯಿಂದ ಮೇ 27ರವರೆಗೆ 114 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 96 ಮಿ.ಮೀ ಮಳೆಯಾಗಿದೆ. 18 ಮಿ.ಮೀ ಮಳೆ ಕೊರತೆಯಾಗಿದೆ. ಮೇ ತಿಂಗಳಿನಲ್ಲಿ ಚದುರಿದಂತೆ ಮಳೆಯಾಗುತ್ತಿತ್ತು, ರೈತರು ಭೂಮಿ ಉಳುಮೆ ಮಾಡಿ ಗೊಬ್ಬರ ಹಾಕಿ ಬಿತ್ತನೆಗ ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 27,089 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ರಾಗಿ, ತೊಗರಿ, ನೆಲಗಡಲೆ, ಮುಸುಕಿನ ಜೋಳ, ಅವರೆ, ಅಲಸಂದೆ ಪ್ರಮುಖ ಬೆಳೆಗಳಾಗಿದೆ. ರಾಗಿ 14,810 ಹೆಕ್ಟೇರ್, ಮುಸುಕಿನ ಜೋಳ 4,780, ಭತ್ತ 829 ಹೆಕ್ಟೇರ್ ಸೇರಿದಂತೆ ಒಟ್ಟು 20,814 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯಗಳ ಬಿತ್ತನೆ ಗುರಿ ಇದೆ. ನೆಲಗಡಲೆ 4,250 ಹೆಕ್ಟೇರ್, ಎಳ್ಳು, ಸಾಸಿವೆ, ಹುಚ್ಚೆಳ್ಳು ಸೇರಿದಂತೆ ಒಟ್ಟು 4,317 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆ. ತೊಗರಿ 1,575 ಹೆಕ್ಟೇರ್, ಅವರೆ 850, ಅಲಸಂದೆ 264, ಹುರಳಿ 420 ಹೆಕ್ಟೇರ್ ಸೇರಿದಂತೆ 2,895 ಹೆಕ್ಟೇರ್ ದ್ವಿದಳ ಧಾನ್ಯಗಳ ಬಿತ್ತನೆಯ ಗುರಿ ಇದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ 2019-20ರಲ್ಲಿ 35,928 ಹೆಕ್ಟೇರ್ ಬಿತ್ತನೆಯ ಗುರಿ ಹೊಂದಲಾಗಿತ್ತು. 2020-21 ರಲ್ಲಿ 33,118 ಹೆಕ್ಟೇರ್, 2021-22ರಲ್ಲಿ 30,858, 2022-23 ರಲ್ಲಿ 32,761, 2023-24ರಲ್ಲಿ 30,062, 2024-25ರಲ್ಲಿ 27,089 ಹೆಕ್ಟೇರ್ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ.

ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ, ತೊಗರಿ, ನೆಲಗಡಲೆ ಬಿತ್ತನೆ ಬೀಜ ಸಂಗ್ರಹವಿದ್ದು, ವಿತರಣೆ ಮಾಡಲಾಗುತ್ತಿದೆ. ರಾಗಿ 276 ಕ್ವಿಂಟಲ್, ತೊಗರಿ 18.9 ಕ್ವಿಂಟಲ್, ನೆಲಗಡಲೆ 150 ಕ್ವಿಂಟಲ್ ಬಿತ್ತನೆ ಬೀಜಗಳು ತಾಲ್ಲೂಕಿಗೆ ಸರಬರಾಜಾಗಿವೆ. ಕೈವಾರ, ಕಸಬಾ, ಅಂಬಾಜಿದುರ್ಗಾ, ಮುರುಗಮಲ್ಲ, ಬಟ್ಲಹಳ್ಳಿ, ಕೆಂಚಾರ್ಲಹಳ್ಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.

ತಾಲ್ಲೂಕಿನ ಕೈವಾರ, ಕಸಬಾ, ಅಂಬಾಜಿದುರ್ಗಾ ಹೋಬಳಿಗಳಲ್ಲಿ ರಾಗಿ ಮುಖ್ಯ ಬೆಳೆಯಾಗಿದೆ. ಪೂರಕವಾಗಿ ಅವರೆ, ತೊಗರಿ, ಹಲಸಂದೆ, ಹುರುಳಿ ಬೆಳೆಯುತ್ತಾರೆ. ಮುರುಗಮಲ್ಲ, ಮುಂಗಾನಹಳ್ಳಿ, ಚಿಲಕಲನೇರ್ಪು ಹೋಬಳಿಯಲ್ಲಿ ನೆಲಗಡಲೆ, ತೊಗರಿ ಪ್ರಮುಖ ಬೆಳೆಗಳಾಗಿವೆ. ಹಾಗಾಗಿ ರೈತರು ಭೂಮಿಯನ್ನು ಹದ ಮಾಡಿ ಬಿತ್ತನೆಗಾಗಿ ಕಾಯುತ್ತಿದ್ದಾರೆ.

ರಸಗೊಬ್ಬರ ಕೊರತೆ ಇಲ್ಲ: ಕೃಷಿ ಇಲಾಖೆ

ಮುಂಗಾರು ಹಂಗಾಮಿಗೆ ಅಗತ್ಯ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜವನ್ನು ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ. ಬಿತ್ತನೆಗೆ ಇನ್ನೂ ಸಾಕಷ್ಟು ಕಾಲಾವಧಿ ಇದೆ. ಯಾವುದೇ ರಸಗೊಬ್ಬರದ ಕೊರತೆ ಇಲ್ಲ. ರೈತರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.

ಮುಂಗಾರು ಮಳೆ, ಕೃಷಿ, ಬಿತ್ತನೆ ಕುರಿತು ಮಾಹಿತಿ ಹಂಚಿಕೊಳ್ಳಲು ರೈತಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ವಾಟ್ಸ್‌ಆಪ್ ಗ್ರೂಪ್‌ಗಳನ್ನು ಮಾಡಲಾಗಿದೆ. ಕಾಲ ಕಾಲಕ್ಕೆ ಅಗತ್ಯ ಮಳೆ, ಬೆಳೆಯ ವಿವಿರ, ಸಲಹೆ, ಸೂಚನೆಗಳನ್ನು ಗ್ರೂಪ್‌ಗೆ ಆಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಕೃಷಿಯ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ರವಾನೆಯಾಗುತ್ತದೆ ಎಂದರು.

ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಸೂಕ್ತ ಕ್ರಮಕೈಗೊಳ್ಳಬೇಕು. ರಸಗೊಬ್ಬರಗಳನ್ನು ಹೆಚ್ಚಿನ ದರಕ್ಕೆ ಕಾಳಸಂತೆ ಮಾರಾಟಕ್ಕೆ ಅವಕಾಶ ನೀಡಬಾರದು. ಕೃಷಿ ಇಲಾಖೆಯ ಅಧಿಕಾರಿಗಳು ರಸಗೊಬ್ಬರ ಅಂಗಡಿಗಳ ಮೇಲೆ ನಿಗಾವಹಿಸಬೇಕು.
ಸೀಕಲ್ ರಮಣಾರೆಡ್ಡಿ. ತಾಲ್ಲೂಕು ಘಟಕದ ಅಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT