ಬುಧವಾರ, ಜನವರಿ 29, 2020
30 °C
ಅಗಲಗುರ್ಕಿ ಬಿಜಿಎಸ್‌ ಆಂಗ್ಲ ಶಾಲೆಯಲ್ಲಿ ಜಾತಿ, ಭೇದ ಮರೆತು ತಾಯಂದಿರ ಕೈ ತುತ್ತು ಸವಿದು ಸಂಭ್ರಮಿಸಿದ ವಿದ್ಯಾರ್ಥಿಗಳು

ಧನ್ಯತೆಯ ಭಾವ ಮೂಡಿಸಿದ ‘ಮಾತೃ ಭೋಜನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದ ಹೊರವಲಯದ ಅಗಲಗುರ್ಕಿ ಬಿಜಿಎಸ್‌ ಆಂಗ್ಲ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಮಾತೃ ಭೋಜನ’ದಲ್ಲಿ ಜಾತಿ, ಭೇದ ಮರೆತು ವಿದ್ಯಾರ್ಥಿಗಳು ತಾಯಂದಿರ ಕೈ ತುತ್ತು ಸವಿದು ಸಂಭ್ರಮಿಸಿದರು.

ಮಕ್ಕಳಿಗಾಗಿ ಪೋಷಕರು ತರಕಾರಿ ಪಲಾವ್, ಕೇಸರಿ ಬಾತ್, ಉಪ್ಪಿಟ್ಟು, ಚಿತ್ರಾನ್ನ, ಮೊಸರನ್ನ, ಅನ್ನ ಸಾಂಬಾರ್ ಸೇರಿದಂತೆ ವಿವಿಧ ಬಗೆಯ ಅಡುಗೆ ಸಿದ್ಧಪಡಿಸಿಕೊಂಡು ಬಂದಿದ್ದರು. ಅವರಿವರೆನ್ನದೆ ಎಲ್ಲರೂ ಬಡಿಸಿದ ಊಟವನ್ನು ಸವಿದ ಮಕ್ಕಳ ಮೊಗದಲ್ಲಿ ಸಂತಸ ಮನೆ ಮಾಡಿದರೆ, ಊಣ ಬಡಿಸಿದ ತಾಯಂದಿರಲ್ಲಿ ಧನ್ಯತೆಯ ಭಾವ ಕಂಡುಬಂತು.

ಹಿರಿಯ ನಟಿ ಗಿರಿಜಾ ಲೋಕೇಶ್‌ ಅವರು ಮಕ್ಕಳಿಗೆ ಊಟ ಬಡಿಸುವ ಮೂಲಕ ಮಾತೃಭೋಜನಕ್ಕೆ ಚಾಲನೆ ನೀಡಿ ಮಾತನಾಡಿ, ‘ಮಕ್ಕಳಿಗೆ ಮಾತೃ ಪ್ರೇಮದ ಸವಿತುತ್ತು ಉಣಿಸುವ ಈ ಕಾರ್ಯಕ್ರಮ ತುಂಬಾ ವೈಶಿಷ್ಟ್ಯವಾಗಿದೆ. ನಮ್ಮ ಸಂಸ್ಕತಿಯಲ್ಲಿನ ತಾಯಿ ಮಕ್ಕಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವ ಅಗತ್ಯವಿದೆ’ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಪ್ರತಿ ಮನೆಯಲ್ಲಿ ತಾಯಿಯ ಪಾತ್ರ ಬಹುಮುಖ್ಯ. ಪ್ರತಿಯೊಬ್ಬರ ಆರೋಗ್ಯ ಕಾಪಾಡುವಲ್ಲಿ ನಿತ್ಯವೂ ತಾಯಿಯಾದವಳು ಶ್ರಮಿಸುತ್ತಾಳೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದುಡಿಯುತ್ತಾಳೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಹೋರಾಟ ಮಾಡುತ್ತಾಳೆ. ತಾಯಿಯು ಸರಿಯಾದ ಗಮನವನ್ನು ಮಕ್ಕಳ ಕಡೆ ಹರಿಸಿದರೆ ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಕೆಟ್ಟವರಾಗುತ್ತಾರೆ’ ಎಂದು ತಿಳಿಸಿದರು.

‘ಮಕ್ಕಳ ಬೆಳವಣಿಗೆಯಲ್ಲಿ ತಂದೆ ಮತ್ತು ತಾಯಿ ಇಬ್ಬರೂ ಸಮಾನವಾಗಿ ಪಾತ್ರವನ್ನು ವಹಿಸುತ್ತಾರೆ. ಯಾವುದೇ ಕಾರಣಕ್ಕೂ ಪೋಷಕರು ಮಕ್ಕಳ ಮುಂದೆ ಜಗಳವಾಡಬಾರದು.ಇಂದು ಎಲ್ಲಾ ತಾಯಂದಿರು ವೈವಿಧ್ಯಮಯ ಹಾಗೂ ರುಚಿಕರವಾದ ಅಡಿಗೆ ಮಾಡಿಕೊಂಡು ಜಾತಿ, ಮತ ಭೇದ ಬದಿಗಿಟ್ಟು ಶಾಲೆಯ ಮಕ್ಕಳಿಗೆ ಕೈತುತ್ತು ನೀಡಿ, ಊಟ ಮಾಡಿಸಿ ಜಾತ್ಯಾತಿತೆಯನ್ನು ಎತ್ತಿಹಿಡಿದಿದ್ದಾರೆ. ಇದೇ ಮಾತೃಭೋಜನದ ಬಹುಮುಖ್ಯ ಆಶಯ’ ಎಂದರು.

ಬಿಜಿಎಸ್ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ ಮಾತನಾಡಿ, ‘ಎಲ್ಲಾ ಶಾಲೆಗಳಂತೆ ನಮ್ಮ ಶಾಲೆ ಕೇವಲ ಅಂಕಪಟ್ಟಿ ವಿತರಿಸುವ ಸಂಸ್ಥೆಯಾಗಿಲ್ಲ. ನಾವು ಮಕ್ಕಳಿಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಾಗೂ ಸ್ವ-ಕೌಶಲದಿಂದ ಜೀವನವನ್ನು ಅತ್ಯಂತ ಸುಂದರವಾಗಿ ನಡೆಸುವ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಿದ್ದೇವೆ. ಪ್ರತಿಯೊಬ್ಬ ಮಗುವಿನ ಜೀವನ ರೂಪಿಸುವಲ್ಲಿ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಬಿಜಿಎಸ್ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಿವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ಅತಿಥಿಗಳೊಂದಿಗೆ ಪಂಕ್ತಿ ಭೋಜನ ಮಾಡಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು. ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಜಿ ನಾಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಸಮಾಜ ಸೇವಕ ತಪೋವನ ಶಿವಕೀರ್ತಿ, ಪ್ರಾಂಶುಪಾಲ ಡಿ.ಸಿ ಮೋಹನ್ ಕುಮಾರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು