ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಖಾಸಗೀಕರಣ ಕೈಬಿಡಲು ಒತ್ತಾಯ

ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಐಟಿಯು ಕಾರ್ಯಕರ್ತರು
Last Updated 18 ಜುಲೈ 2020, 10:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರೈಲ್ವೆ ಖಾಸಗೀಕರಣ ಕೈ ಬಿಡುವಂತೆ ಆಗ್ರಹಿಸಿ ‘ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌’ (ಸಿಐಟಿಯು) ಕಾರ್ಯಕರ್ತರು ಶನಿವಾರ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ ಮಾತನಾಡಿ, ‘ಕೊರೊನಾ ಲಾಕ್‌ಡೌನ್‌ನಿಂದಾಗಿ ನಾಲ್ಕು ತಿಂಗಳಿಂದ ದೇಶದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭ ದಲ್ಲಿ ಸಾರ್ವಜನಿಕ ಸಂಪತ್ತುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿರುವುದು ಖಂಡನೀಯ’ ಎಂದು ಹೇಳಿದರು.

‘ಜಗತ್ತಿನಲ್ಲೇ ಅತಿದೊಡ್ಡ ಸಂಪರ್ಕ ಜಾಲ ಹೊಂದಿರುವ ಭಾರತೀಯ ರೈಲ್ವೆಯನ್ನು ತುಂಡರಿಸಿ ಖಾಸಗೀಕರಣ ಮಾಡಲು ಕೇಂದ್ರ ತೀರ್ಮಾನಿಸಿದೆ. ರೈಲ್ವೆ ಖಾಸಗೀಕರಣಗೊಂಡರೆ ಪ್ರಯಾಣಿಕರಿಗೆ ಸಿಗುತ್ತಿದ್ದ ಶೇಕಡಾ 43ರಷ್ಟು ಸಬ್ಸಿಡಿ ರದ್ದಾಗಲಿದೆ. ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಂಡು ಖಾಸಗಿಯವರು ಲಾಭ ಮಾಡಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ರೈಲ್ವೆ ಖಾಸಗೀಕರಣದಿಂದ ಮಹಿಳೆಯರು, ದಲಿತರು, ಅಂಗವಿಕಲರು ಹಾಗೂ ಕ್ರೀಡಾಪಟುಗಳಿಗೆ ನೇಮಕಾತಿಗಳಲ್ಲಿ ಸಿಗುತ್ತಿದ್ದ ಮೀಸಲಾತಿಗಳು ರದ್ದಾಗಲಿವೆ. ಅಲ್ಲದೆ, ಸರಕು ಸಾಗಣೆ ವೆಚ್ಚ ಏರಿಕೆಯಾಗಲಿದೆ. ಇದರಿಂದ ಕೃಷಿ ಮತ್ತು ಕೈಗಾರಿಕಾ ವಲಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘109 ರೈಲು ನಿಲ್ದಾಣಗಳನ್ನು ಖಾಸಗಿಯವರ ನಿರ್ವಹಣೆಗೆ ಒಪ್ಪಿಸಿ, 151 ಖಾಸಗಿ ರೈಲುಗಳನ್ನು ಓಡಿಸುವ ನಿರ್ಧಾರದಿಂದ ಕೇಂದ್ರ ಹಿಂದೆ ಸರಿಯಬೇಕು. ಭಾರತೀಯ ರೈಲ್ವೆ ಭಾರತೀಯರ ಜೀವನಾಡಿ. ಅದನ್ನು ಖಾಸಗಿಯವರ ಕೈಗೆ ಕೊಟ್ಟು ಜನಸಾಮಾನ್ಯರ ಹಿತ ಬಲಿಕೊಡುತ್ತಿರುವುದು ಸರಿಯಲ್ಲ’ ಎಂದರು.

ಸಿಐಟಿಯು ಮುಖಂಡ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ‘ಖಾಸಗಿ ರೈಲುಗಳ ಟಿಕೆಟ್‌ ದರ ದುಬಾರಿಯಾಗಿದ್ದು, ಸಾಮಾನ್ಯ ಜನರು ಪ್ರಯಾಣಿಸಲು ಆಗುವುದಿಲ್ಲ. ಅತಿ ಕಡಿಮೆ ದರದಲ್ಲಿ ದೂರದ ಊರುಗಳಿಗೆ ಪ್ರಯಾಣ ಮಾಡಲು, ಸರಕು ಸಾಗಣೆಗೆ ರೈಲುಗಳು ಸಹಕಾರಿಯಾಗಿವೆ. ಖಾಸಗೀಕರಣಗೊಂಡರೆ ಎಲ್ಲವೂ ದುಬಾರಿಯಾಗುತ್ತದೆ ಎಂದು ಹೇಳಿದರು.

‘ದೇಶದ ಸಂಪತ್ತು ಮಾರಾಟ ಮಾಡಲು ಸರ್ಕಾರ ಲಾಕ್‌ಡೌನ್‌ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ವಿರೋಧ ಹತ್ತಿಕ್ಕಿ ಲಾಭದಾಯಕ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಲು ಕೇಂದ್ರ ಮುಂದಾಗಿದೆ. ದೇಶದ್ರೋಹಿ ಕೆಲಸ ಕೈ ಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ತಿಳಿಸಿದರು.

ಪ್ರತಿಭಟನಾಕರರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ಇಲ್ಲಿನ ರೈಲು ನಿಲ್ದಾಣದ ಅಧಿಕಾರಿಗೆ ಸಲ್ಲಿಸಿದರು.

ಮುಖಂಡರಾದ ಮಂಜುನಾಥ್, ನ್ಯಾತಪ್ಪ, ರಾಮಕೃಷ್ಣಪ್ಪ, ನರಸಿಂಹಯ್ಯ, ಬಿ.ಸಾವಿತ್ರಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT