ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜಾ ಸೊಪ್ಪಿದೆ ಬನ್ನಿ ಆಂಟಿ...

ದರಬೂರು ಗ್ರಾಮದಲ್ಲಿ ಗಮನ ಸೆಳೆದ ‘ಚಿಣ್ಣರ ಸಂತೆ’
Last Updated 20 ಡಿಸೆಂಬರ್ 2019, 14:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:  ಬನ್ನಿ ಅಂಕಲ್‌.. ಬನ್ನಿ ಆಂಟಿ... ಬನ್ನಿ ಸರ್‌... ಇಲ್ಲಿದೆ ಕಡಿಮೆ ಬೆಲೆಗೆ ತರಕಾರಿ, ಮನೆಲ್ಲೇ ಮಾಡಿದ ತಿಂಡಿ ಇದೆ ನೋಡಿ, ಹಣ್ಣು, ಸೊಪ್ಪು ಚೆನ್ನಾಗಿದೆ ಬನ್ರೀ... ಹೀಗೆ ಗ್ರಾಹಕರನ್ನು ಕೈಬೀಸಿ ಚಿಣ್ಣರು ಆಕರ್ಷಿಸಿಸುತ್ತಿದ್ದಂತೆ ಮಧ್ಯಾಹ್ನದ ಹೊತ್ತಿಗೆ ಸಂತೆಯಲ್ಲಿದ್ದ ಬಹುತೇಕ ತರಕಾರಿಗಳು ಖಾಲಿ....

ತಾಲ್ಲೂಕಿನ ಮಂಡಿಕಲ್ಲು ಹೋಬಳಿಯ ದರಬೂರು ಗ್ರಾಮದಲ್ಲಿ ಗಣಿತ ಕಲಿಕೆಯ ಭಾಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಚಿಣ್ಣರ ಸಂತೆ’ಯಲ್ಲಿ ಕಂಡ ದೃಶ್ಯವಿದು.

ಮಕ್ಕಳು ಹಳ್ಳಿಯ ರೈತರು ಬೆಳೆದ ತರಕಾರಿಗಳ ಜತೆಗೆ ತಿಂಡಿ ತಿನಿಸುಗಳನ್ನು ಸಂತೆಯಲ್ಲಿಟ್ಟು ಪೈಪೋಟಿಯಲ್ಲಿ ಗ್ರಾಹಕರನ್ನು ಸೆಳೆಯಲು ನಡೆಸಿದ ಕಸರತ್ತು ಪೋಷಕರನ್ನು ಸಂತಸ ಉಂಟು ಮಾಡಿತ್ತು. ಗ್ರಾಮಸ್ಥರು ಚಿಣ್ಣರ ಸಂತೆಗೆ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಮಕ್ಕಳ ಸಂತೆಯಲ್ಲಿ ಆಲೂಗಡ್ಡೆ, ಈರುಳ್ಳಿ, ಕುಂಬಳಕಾರಿ, ಕ್ಯಾರೆಟ್‌, ಬೀನ್ಸ್‌, ಸೌತೆಕಾಯಿ, ಮೆಣಸಿನಕಾಯಿ, ಬದನೆಕಾಯಿ ಸೇರಿದಂತೆ ತರಕಾರಿ, ಸೊಪ್ಪು, ಬಾಳೆಹಣ್ಣು, ನಿಂಬೆಹಣ್ಣು, ತೆಂಗಿನ ಕಾಯಿ, ಮೊಳಕೆ ಕಟ್ಟಿದ ಧಾನ್ಯಗಳಿಂದ ತಯಾರಿಸಿದ ಸಲಾಡ್, ಜಾಮೂನು, ಚುರುಮುರಿ, ಬೊಂಡಾ ಮಾರಾಟ ಮಾಡಲಾಯಿತು.ಗ್ರಾಹಕರನ್ನು ಸೆಳೆಯಲು ಮಕ್ಕಳು ನಾನಾ ಕಸರತ್ತು ಮಾಡಿದರು. ನುರಿತ ವ್ಯಾಪಾರಿಗಳಂತೆ ಕಾರ್ಯನಿರ್ವಹಿಸಿದರು.

ಮಕ್ಕಳ ಸಂಭ್ರಮವಂತೂ ಮುಗಿಲುಮುಟ್ಟಿತ್ತು. ಮಾರಾಟವೂ ಸಹ ಜೋರಾಗಿತ್ತು. ಗ್ರಾಹಕರೂ ಕೂಡ ಮುಗಿಬಿದ್ದು ತರಕಾರಿ, ವಿವಿಧ ಸಾಮಗ್ರಿ ಖರೀದಿಸಿದರು. ಕಡಿಮೆ ಬೆಲೆ ಹಾಗೂ ತಾಜಾ ಹಣ್ಣು ತರಕಾರಿಗಳು ಬೇಗ ಮಾರಾಟವಾಗಿ ಮಧ್ಯಾಹ್ನದ ಹೊತ್ತಿಗೆ ಚಿಣ್ಣರ ಪುಟ್ಟ ಕೈಗಳ ತುಂಬ ಹಣ ಎಣಿಸುವ ದೃಶ್ಯ ಕಾಣಿಸಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕೂಡ ಸಂತೆ ಬಂದು ವಿಶೇಷವಾದ ಪಠ್ಯೇತರ ಚಟುವಟಿಕೆ ಕಂಡು ಖುಷಿಪಟ್ಟರು.

ಶಿಕ್ಷಕ ಗಂಗಾಧರ್ ಮಾತನಾಡಿ, ‘ಮಕ್ಕಳಿಗೆ ವ್ಯವಹಾರದ ಜ್ಞಾನವನ್ನು ಕಲಿಸುವ ಉದ್ದೇಶದಿಂದ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ. ಹಳ್ಳಿ ಭಾಗದ ಸಂತೆ ನಗರ ಭಾಗದ ಮಕ್ಕಳಿಗೆ ನೋಡಲು ಸಿಗದು. ಇನ್ನು ಅನುಭವಿಸುವುದಂತೂ ದೂರದ ಮಾತಾಯಿತು. ನಗರದ ಸೂಪರ್ ಮಾರುಕಟ್ಟೆಯ ನಡುವೆ ಮರೆತುಹೋಗುತ್ತಿರುವ ಸಂತೆಯ ಸಂಸ್ಕೃತಿಯನ್ನು ಪಠ್ಯೇತರ ಚಟುವಟಿಕೆಯ ಭಾಗವಾಗಿ ಮರುಸೃಷ್ಟಿಸುವ ಪ್ರಯತ್ನ ಇದಾಗಿದೆ’ ಎಂದರು.

ಶಾಲಾ ಅಭಿವೃದ್ಧಿ ಸಮಿತಿಯ ವೆಂಕಟರೆಡ್ಡಿ, ಡಿ.ಟಿ.ನಾಗರಾಜ, ಗುಚ್ಛ ಸಂಪನ್ಮೂಲ ವ್ಯಕ್ತಿ ಮಂಜುನಾಥ, ಶಿಕ್ಷಕರಾದ ವೆಂಕಟರಮಣಪ್ಪ, ಲೋಕೇಶ್, ಗಂಗಾಧರ, ಶ್ರೀ ನಿವಾಸ, ಮಾಲ ರವರು ಮತ್ತು ಶಾಂತ ಟ್ರಸ್ಟ್ ನ ರವಿಕುಮಾರ್ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT