ಮಂಗಳವಾರ, ಮಾರ್ಚ್ 21, 2023
23 °C
ಗೌರಿಬಿದನೂರಿನಲ್ಲಿ ನಡೆದ ಒಂಬತ್ತನೇ ಅಕ್ಷರ ಜಾತ್ರೆ

ಗಡಿಭಾಗ ಭಾಷಾ ಸಾಮರಸ್ಯ ಅನಿವಾರ್ಯ: ನಗರಗೆರೆ ಎನ್. ರಮೇಶ್

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ನಗರದ ಡಾ.ಎಚ್. ಎನ್ ಕಲಾಮಂದಿರದ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಒಂಬತ್ತನೇ ಸಾಹಿತ್ಯ ಸಮ್ಮೇಳನ ನಡೆಯಿತು. 

ಸಮ್ಮೇಳನದ ಸರ್ವಾಧ್ಯಕ್ಷ ನಗರಗೆರೆ ಎನ್. ರಮೇಶ್ ಮಾತನಾಡಿ, ಗಡಿ‌ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಅದರ ಮೌಲ್ಯ ಕಾಪಾಡುವ ಜತೆಗೆ ನೈಸರ್ಗಿಕ ‌ಮೂಲಗಳನ್ನು ಸಂರಕ್ಷಿಸುವುದು ಅತ್ಯವಶ್ಯಕ. ರಾಜ್ಯದ ಗಡಿಭಾಗದಲ್ಲಿ ಅನ್ಯ ಭಾಷೆಗಳ‌ ವೈಷಮ್ಯವಿಲ್ಲದೆ ಭಾಷಾ ಸಾಮರಸ್ಯದೊಂದಿಗೆ ಕನ್ನಡ ಭಾಷೆಯನ್ನು ಎಲ್ಲರಿಗೂ ಕಲಿಸಿ ಬೆಳೆಸುವ ಪ್ರಾಮಾಣಿಕ ‌ಪ್ರಯತ್ನ ಮಾಡಬೇಕು ಎಂದು ಹೇಳಿದರು.

ತಾಲ್ಲೂಕು ಅಧ್ಯಕ್ಷ ಟಿ. ನಂಜುಂಡಪ್ಪ ಮಾತನಾಡಿ, ‘ಕನ್ನಡ ನಾಡು ನುಡಿ, ನೆಲ, ಜಲದ ಸಂರಕ್ಷಣೆಗೆ ಗಡಿ ಭಾಗದ ತಾಲ್ಲೂಕು ಕೇಂದ್ರಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಅತ್ಯವಶಕವಾಗಿವೆ. ರಾಜ್ಯದಲ್ಲಿ ಉದ್ಯೋಗವನ್ನು ಅರಸಿ ಬಂದು‌ ನೆಲೆಸಿರುವ ಅನ್ಯ ಭಾಷೆಯ ಜನತೆ ಕಡ್ಡಾಯವಾಗಿ ಕನ್ನಡ ಕಲಿತು ಗೌರವಿಸಬೇಕು. ಕನ್ನಡಕ್ಕೆ ಲಭಿಸಿರುವ ಶಾಸ್ತ್ರೀಯ ಸ್ಥಾನಮಾನವು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ. ಎಲ್ಲೆಡೆ ಕನ್ನಡ ಭಾಷೆಯನ್ನು ಬಳಕೆ ಮಾಡುವ ಮೂಲಕ ಅದರ ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಕನ್ನಡ ಭಾಷೆಯನ್ನು ಕರಗತ ಮಾಡಿಕೊಂಡು ಉಳಿಸಿ ಬೆಳೆಸಬೇಕು’ ಎಂದು ಹೇಳಿದರು.

ಇದಕ್ಕೂ ಮುನ್ನ ಭಾರತ ಸೇವಾದಳದ ಕಾರ್ಯದರ್ಶಿ ಎನ್. ಬಾಲಪ್ಪ ಅವರ ನೇತೃತ್ವದಲ್ಲಿ ಬೆಳಿಗ್ಗೆ ಗ್ರೇಡ್ 2 ತಹಶೀಲ್ದಾರ್ ಆಶಾ, ಸಮ್ಮೇಳನಾಧ್ಯಕ್ಷ ಪ್ರೊ.ಎನ್. ರಮೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ. ನಂಜುಂಡಪ್ಪ, ನಗರಸಭೆ ಅಧ್ಯಕ್ಷೆ ಎಸ್. ರೂಪ ಅನಂತರಾಜು ‌ಸೇರಿದಂತೆ ಅನೇಕ ಸಾಹಿತ್ಯ ಅಭಿಮಾನಿಗಳ ಸಮ್ಮುಖದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ತು ಧ್ವಜಾರೋಹಣ ‌ಮಾಡುವ ಮೂಲಕ ಸಮ್ಮೇಳನಕ್ಕೆ ಶುಭ ಕೋರಿದರು.

ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಎತ್ತಿನ ಬಂಡಿಯಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರವನ್ನಿರಿಸಿದ ಮೆರವಣಿಗೆಗೆ ಸಮ್ಮೇಳನಾಧ್ಯಕ್ಷ ಪ್ರೊ.ಎನ್. ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಪ್ರೊ. ಕೋಡಿರಂಗಪ್ಪ ಸೇರಿದಂತೆ ಇತರ ಗಣ್ಯರು ಚಾಲನೆ ನೀಡಿದರು. 

ನೂರಾರು ಮಂದಿ ಸಾಹಿತ್ಯಾಭಿಮಾನಿಗಳು, ಗಣ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕನ್ನಡಪರ ಘೋಷಣೆಗಳನ್ನು ಕೂಗುತ್ತಾ ವಾಲ್ಮಿಕಿ ವೃತ್ತದಿಂದ ಅಂಬೇಡ್ಕರ್ ವೃತ್ತ, ಎನ್.ಸಿ. ನಾಗಯ್ಯ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಜನಪದ ಕಲಾ ತಂಡಗಳೊಂದಿಗೆ ಸಾಗಿ ಡಾ.ಎಚ್.ಎನ್. ಕಲಾಮಂದಿರದ ಬಳಿ ಸೇರಿದರು.

ವಿಚಾರಗೋಷ್ಠಿಯಲ್ಲಿ ಗೌರಿಬಿದನೂರು ‌ಸಾಹಿತ್ಯ ಸಂಪದ ವಿಚಾರವಾಗಿ ಪ್ರೊ.ಕೆ.ವಿ. ಪ್ರಕಾಶ್, ಕೆಎನ್ಎಸ್ ಕೃತಿಗಳ ಬಗ್ಗೆ ಕೆ.ಪಿ.ನಾರಾಯಣಪ್ಪ, ಮನತಣಿಸುವ ವಚನಗಳ ಬಗ್ಗೆ ಎ.ಬಿ‌. ಶೈಲಜಾ, ಇಂದಿನ ಮಹಿಳಾ ಸಮಾಜದ ತುರ್ತು ಸವಾಲುಗಳ ಬಗ್ಗೆ ಆಶಾ ಜಗದೀಶ್ ಮಾತನಾಡಿದರು. ಕವಿಗೋಷ್ಠಿಯಲ್ಲಿ ಸುಮಾರು 15 ಕವಿಗಳು ತಮ್ಮ ಕವನ ವಾಚನ‌ ಮಾಡಿದರು.

ಸಮಾರೋಪ ಸಮಾರಂಭಕ್ಕೂ ಮುನ್ನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹಾಗೂ ಗಣ್ಯರನ್ನು ಅಭಿನಂದಿಸಲಾಯಿತು. ಬಳಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸೌರಭ ನಡೆಯಿತು.

ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಪ್ರೊ. ಕೋಡಿರಂಗಪ್ಪ, ನಿಕಟಪೂರ್ವ ಅಧ್ಯಕ್ಷ ವಿ.ರವೀಂದ್ರನಾಥ್, ನಗರಸಭೆ ಆಯುಕ್ತೆ ಡಿ.ಎಂ. ಗೀತಾ,  ಸಿ.ಆರ್. ನರಸಿಂಹಮೂರ್ತಿ, ಆರ್. ಅಶೋಕ್ ಕುಮಾರ್, ವೇಣು, ಡಾ.ಎಚ್.ಎಸ್. ಶಶಿಧರ್, ಮರಳೂರು ಹನುಮಂತರೆಡ್ಡಿ, ವೈ.ಎಲ್. ಹನುಮಂತರಾವ್, ಆರ್. ವೀರಣ್ಣ, ಜಿ. ಚಂದ್ರಶೇಖರ್, ಸಿ. ನಾಗರತ್ನಮ್ಮ, ನಾಗರಾಜಪ್ಪ, ಎಂ.ಆರ್. ನಾಗರಾಜರಾವ್ , ಡಿ.ಜೆ. ಚಂದ್ರಮೋಹನ್, ಎಚ್.ಎನ್. ಪ್ರಕಾಶ್ ರೆಡ್ಡಿ, ಶ್ರೀಕಾಂತ್, ಎನ್.ಜಿ. ರೆಡ್ಡಪ್ಪ, ಕೆ.ಎನ್. ಪ್ರವೀಣ್, ಶ್ರೀರಾಮಪ್ಪ, ಅಮೃತಕುಮಾರ್, ಪ್ರೊ.ಕೆ.ವಿ. ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅನ್ಯ ಭಾಷೆಗಳ ವ್ಯಾಮೋಹ ಬೇಡ

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ‘ಬಹುಭಾಷೆ ಹಾಗೂ ವರ್ಗದ ಜನತೆಗೆ ಆಸರೆಯಾಗಿರುವ ಕರುನಾಡಿನಲ್ಲಿ ಕನ್ನಡವನ್ನು ಗೌರವಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ಪರಕೀಯ ಭಾಷೆಗಳ‌ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡಿಕೊಂಡು ಮಾತೃ ಭಾಷೆಯ ‌ಮಮಕಾರವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಹೇಳಿದರು.

ಸ್ಥಳೀಯವಾಗಿ ಆಯೋಜನೆ ‌ಮಾಡುವ ಸಾಹಿತ್ಯ, ಭಾಷೆ, ಕಲೆ, ನಾಗರಿಕತೆಯನ್ನು ಒಳಗೊಂಡ ಸಮ್ಮೇಳನಗಳು ಅತ್ಯವಶ್ಯಕ. ಸಮಾಜದಲ್ಲಿ ಬಹು ಭಾಷೆಗಳ ಸಂಸ್ಕೃತಿ ಮತ್ತು ಭಾಷೆಯನ್ನು ಅಳಿಸಿ ಏಕಪಕ್ಷೀಯ ಮಾಡುವ ಹುನ್ನಾರಗಳಿಗೆ ಪ್ರತಿರೋಧ ಮಾಡುವ ಮೂಲಕ ಅವುಗಳನ್ನು ಉಳಿಸುವ ಪ್ರಯತ್ನ ಮಾಡಬೇಕು. ನಾಡಿನ ಎಲ್ಲರೂ ಸರ್ವಧರ್ಮ ಪರಿಪಾಲಿಸುವ ಜತೆಗೆ ಭಾಷೆ ಉಳಿಸುವ ಪ್ರಯತ್ನಕ್ಕೆ ಸಾಕ್ಷಿಯಾಗಬೇಕು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು