ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ: ಗತ ಇತಿಹಾಸ ಸಾರುವ ಗಡಿಕಲ್ಲು

ಹಿಂದಿನ ಕಾಲದ ಗಡಿ ಗುರುತಿನ ಕುರುಹು
Published 21 ಮೇ 2024, 6:25 IST
Last Updated 21 ಮೇ 2024, 6:25 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಕನ್ನಪ್ಪನಹಳ್ಳಿ ಸುತ್ತಮುತ್ತ ಈಗ ತಮ್ಮ ಅಸ್ತಿತ್ವ ಕಳೆದುಕೊಂಡಿರುವ ಗಡಿಕಲ್ಲುಗಳಿವೆ. ತೆಲುಗಿನಲ್ಲಿ ‘ಪುಲಿಮೇರು’ ಎಂದು ಕರೆಯಲ್ಪಡುವ ಇದನ್ನು ಸರಹದ್ದು ಕಲ್ಲು ಎಂದೂ ಕರೆಯುತ್ತಾರೆ.

ಗ್ರಾಮ ಮತ್ತು ಹೊಲಗದ್ದೆಗಳಲ್ಲಿ ಶಿವಲಿಂಗ, ಸೂರ್ಯ ಮತ್ತು ಚಂದ್ರ, ಕೆಲವೊಮ್ಮೆ ಬಸವನ ಶಿಲ್ಪ ಹೊಂದಿರುವ ಕಲ್ಲುಗಳನ್ನು ಕಾಣಬಹುದು. ಈ ಬಗೆಯ ಕಲ್ಲುಗಳ ಮೇಲೆ ಕೆಲವೊಮ್ಮೆ ಬರಹ ಇರುವುದು ಉಂಟು. ಇಲ್ಲದಿರುವ ನಿದರ್ಶನವೂ ಉಂಟು. ಇವೇ ಗಡಿಕಲ್ಲುಗಳು.

ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಸರ್ವೇಶ್ವರ ದೇವಾಲಯ ಬಳಿಯೂ ಗಡಿಕಲ್ಲು ಇದೆ. ಇದನ್ನು ಲಿಂಗದಕಲ್ಲು ಎಂದೇ ಗ್ರಾಮಸ್ಥರು ಕರೆಯುತ್ತಾರೆ.

ಕಾಲಾಂತರದಲ್ಲಿ ಅಸ್ತಿತ್ವ ಮತ್ತು ಉದ್ದೇಶ ಕಳೆದುಕೊಂಡಂತೆ ಅನಾಥವಾದ ಈ ಕಲ್ಲುಗಳು ಆಯಾ ಪ್ರದೇಶದ ಜನರ ಭಾವನೆಗಳಿಗೆ ತಕ್ಕಂತೆ ರೂಪಾಂತರಗೊಂಡಿವೆ. ತಾಲ್ಲೂಕಿನ ಕನ್ನಪ್ಪನಹಳ್ಳಿಯಲ್ಲಿ ಈ ರೀತಿಯ ಒಂದು ಕಲ್ಲಿಗೆ ಪುಟ್ಟ ಗುಡಿ ನಿರ್ಮಿಸಲಾಗಿದೆ. ಗ್ರಾಮಸ್ಥರು ಮುನೇಶ್ವರಸ್ವಾಮಿ ಎಂದು ಪೂಜಿಸುತ್ತಿದ್ದಾರೆ. ಅದೇ ಗ್ರಾಮದ ಸುತ್ತ ಪಲ್ಲಿಚೇರ್ಲು ರಸ್ತೆ, ಸದ್ದಹಳ್ಳಿ ರಸ್ತೆ, ಬಿನ್ನಮಂಗಲ ರಸ್ತೆ ಹತ್ತಿರ ನಾಲ್ಕು ಗಡಿಕಲ್ಲುಇಂದಿನ ಸೀಮೋಲ್ಲಂಘನಕ್ಕೆ ಮೂಕ ಸಾಕ್ಷಿಗಳಾಗಿ ನಿಂತಿವೆ.

ಆಡಳಿತಕ್ಕೆ ಅನುಕೂಲವಾಗುವಂತೆ ಒಂದು ಹಳ್ಳಿ ನಿರ್ದಿಷ್ಟವಾದ ಜಮೀನನ್ನೋ ನಿರ್ದೇಶಿಸಿ ಅವುಗಳ ವ್ಯಾಪಕತೆ ಸೂಚಿಸುವ ಸಲುವಾಗಿ ಈ ಕಲ್ಲುಗಳನ್ನು ಹಾಕುತ್ತಿದ್ದರು. ಇದರಿಂದ ಯಾರ ಜಮೀನನ್ನೂ ಮತ್ತೆ ಬೇರೆ ಯಾರೂ ಅತಿಕ್ರಮಿಸುವುದು ಸಾಧ್ಯವಿರಲಿಲ್ಲ.

ಈ ಕಲ್ಲುಗಳನ್ನು ಶಾಸನಗಳಲ್ಲಿ ‘ಲಿಂಗ ಮುದ್ರೆಕಲ್ಲು’, ‘ವಾಮನ ಮುದ್ರೆಕಲ್ಲು’, ‘ಸೀಮೆಗಲ್ಲು’, ‘ಮೇರೆಗಲ್ಲು’, ‘ಚತುಷ್ಕೋಣಶಿಲಾ’ ಮುಂತಾಗಿ ಕರೆಯಲಾಗುತ್ತದೆ.

‘ಯಾವ ವ್ಯಕ್ತಿಗೆ, ಸಂಸ್ಥೆಗೆ ದತ್ತಿ ಬಿಟ್ಟಿರುತ್ತದೆಯೋ ಆ ವ್ಯಕ್ತಿ, ಸಂಸ್ಥೆ, ಧಾರ್ಮಿಕ ಅಂಶಗಳು ಈ ಗಡಿಕಲ್ಲು ಮೇಲೆ ಕಂಡು ಬರುತ್ತವೆ. ಶೈವಧರ್ಮದವರಿಗೆ ಬಿಟ್ಟ ದತ್ತಿ ಸೂಚಿಸಲು ಶಿವಲಿಂಗ, ಬಸವ, ಸೂರ್ಯ ಚಂದ್ರ ಇರುವ ಶಿಲೆ, ವೈಷ್ಣವ ಧರ್ಮದವರಿಗೆ ನೀಡಿದ ದತ್ತಿಸೂಚಿಸಲು ವಾಮನನ ಚಿತ್ರವಿರುವ ಕಲ್ಲು, ಜೈನರಿಗೆ ಬಿಟ್ಟ ದತ್ತಿ ನಿರ್ದೇಶಿಸಲು ತೀರ್ಥಂಕರ ಅಥವಾ ಯಕ್ಷಿಯಾದ ಪದ್ಮಾವತಿ ಶಿಲ್ಪದ ವಿವರ ಹೊಂದಿರುವ ಶಿಲೆ ಕಾಣುತ್ತದೆ. ಇವುಗಳು ಸಾಮಾನ್ಯವಾಗಿ ಎರಡು ಮೂರು ಅಡಿ ಎತ್ತರ ಇರುತ್ತದೆ. ಇವುಗಳ ಮೇಲೆ ಬರಹ ಇರುವುದಿಲ್ಲ. ಈ ಸೀಮಾ ಕಲ್ಲು ಸಹಾಯದಿಂದ ಯಾವ ಜಮೀನು ಯಾವ ಧರ್ಮದವರಿಗೆ ಕೊಟ್ಟದ್ದು ಎಂಬ ವಿಷಯ ತಿಳಿಯಬಹುದು’ ಎನ್ನುತ್ತಾರೆ ಶಾಸನತಜ್ಞ ಡಾ.ಆರ್.ಶೇಷಶಾಸ್ತ್ರಿ.

ಯಾವ ಜಮೀನು ಯಾರಿಗೆ ಸೇರಿದ್ದು ಎಂಬುದು ಗಣಕೀಕೃತಗೊಂಡಿರುವ ಸಂದರ್ಭದಲ್ಲಿ ಗಡಿಕಲ್ಲು ಕೇವಲ ಹಿಂದಿನ ಕಾಲದ ಗಡಿ ಗುರುತಿನ ಕುರುಹಾಗಿ, ಇತಿಹಾಸ ನೆನಪಿಸುವ ಚಿಹ್ನೆಯಾಗಿ ಅಲ್ಲಲ್ಲಿ ಉಳಿದಿವೆ.

 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT