ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ್ದರು!
1936ರ ಮೇ ತಿಂಗಳಲ್ಲಿ ಮದರಾಸ್ ಪ್ರವಾಸದಲ್ಲಿದ್ದ ಗಾಂಧೀಜಿ ಅವರಿಗೆ ರಕ್ತದ ಒತ್ತಡ ಹೆಚ್ಚಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ವೇಳೆ ಕೂಡ ಮಹಾತ್ಮರ ವಿಶ್ರಾಂತಿಗೆ ನಂದಿ ಗಿರಿಧಾಮವೇ ಸೂಕ್ತ ಎಂದು ಅವರ ಪರಿವಾರದವರು ನಿರ್ಧರಿಸಿದರು. ಗಾಂಧೀಜಿ ಅವರು 1936ರ ಮೇ 10 ರಂದು ಬೆಂಗಳೂರಿಗೆ ಬಂದು ಕುಮಾರಕೃಪಾ ಭವನದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಬಳಿಕ ಎರಡನೇ ಬಾರಿಗೆ ನಂದಿ ಬೆಟ್ಟದತ್ತ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ಗಾಂಧೀಜಿ ಅವರನ್ನು ಡೋಲಿ ಮೂಲಕ ಬೆಟ್ಟದ ಮೇಲೆ ಕರೆದೊಯ್ಯಲು ಸುಲ್ತಾನ್ ಪೇಟೆಯಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಸೇರಿದಂತೆ ಅನೇಕ ಗಣ್ಯರು ಕಾಯುತ್ತಿರುತ್ತಾರೆ. ಆದರೆ ಗಾಂಧೀಜಿ ಅವರು ಬೆಟ್ಟದ ದಕ್ಷಿಣ ದಿಕ್ಕಿನಲ್ಲಿ ಕುಡುವತಿ ಗ್ರಾಮದ ಬಳಿ ಇದ್ದ ಮಣ್ಣಿನ ರಸ್ತೆ ಮೂಲಕ ಅನಾರೋಗ್ಯದ ನಡುವೆಯೇ ಕಾಲ್ನಡಿಗೆಯಲ್ಲೇ 1478 ಮೀಟರ್ ಎತ್ತರದ ಬೆಟ್ಟ ಏರಿದರು.