ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಗೌರಿ–ಗಣೇಶ ಮೂರ್ತಿಗಳ ಖರೀದಿ ಭರಾಟೆ

ಜಿಲ್ಲೆಯಾದ್ಯಂತ ಭಾನುವಾರ ಜೋರಾಗಿ ನಡೆದ ಹಬ್ಬದ ಖರೀದಿ
Published 17 ಸೆಪ್ಟೆಂಬರ್ 2023, 15:15 IST
Last Updated 17 ಸೆಪ್ಟೆಂಬರ್ 2023, 15:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿ ಹಬ್ಬ ಮುನ್ನಾದಿನವಾದ ಭಾನುವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ಕಾರಣ ಹೂವು, ಹಣ್ಣಿನ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿತ್ತು.

ನಗರದ ಸುತ್ತಲಿನ ಸಂಘ ಸಂಸ್ಥೆಗಳ ಜನರು ಮೂರ್ತಿ ಖರೀದಿಸಲು ವಾಹನಗಳ ಸಮೇತ ಬಂದಿದ್ದ ಕಾರಣ ಬಿ.ಬಿ.ರಸ್ತೆಯಲ್ಲಿ ಸಂಚಾರ ದಟ್ಟಣೆ ಇತ್ತು. ಬಜಾರ್ ರಸ್ತೆ, ಎಂ.ಜಿ.ರಸ್ತೆ, ಸಂತೆ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ಹಬ್ಬದ ವ್ಯಾಪಾರ ಬೆಳಿಗ್ಗೆಯಿಂದಲೇ ಆರಂಭಗೊಂಡಿತು. ಸಂಜೆಯ ಹೊತ್ತಿಗಾಗಲೇ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ಹಬ್ಬದ ವಹಿವಾಟು ರಾತ್ರಿಯ ತನಕವೂ ಮುಂದುವರಿದಿತ್ತು.

ರಸ್ತೆಯ ಇಕ್ಕೆಲಗಳಲ್ಲಿ ಹಣ್ಣು, ಹೂವು, ತೆಂಗಿನಕಾಯಿ, ಗರಿಕೆ ಪತ್ರೆ, ಬಾಳೆಕಂದು, ಮಾವಿನಸೊಪ್ಪು, ಸಿಹಿ ತಿನಿಸುಗಳ ತಾತ್ಕಾಲಿಕ ಅಂಗಡಿ ತೆರೆದ ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯುತ್ತಿದ್ದರು.

ಹೂ ಮಾರುಕಟ್ಟೆಯಲ್ಲಿ ಜನಜಂಗುಳಿ: ನಗರ ಕೆ.ವಿ.ಕ್ಯಾಂಪಸ್ ಬಳಿಯ ಹೂ ಮಾರುಕಟ್ಟೆಯು ಜನರಿಂದ ತುಂಬಿತುಳುಕಿತ್ತು. ಹಬ್ಬದ ಕಾರಣ ನೆರೆಯ ಜಿಲ್ಲೆಗಳ ಜನರೂ ಮಾರುಕಟ್ಟೆಗೆ ಹೂ ಖರೀದಿಗೆ ಬಂದಿದ್ದರು. 

ನಗರದ ವಿವಿಧ ಭಾಗಗಳ ಜನರು ಹಾಗೂ ಗ್ರಾಮೀಣ ಭಾಗಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವರು. ಭಾನುವಾರ ನಗರಕ್ಕೆ ಬಂದು ಗಣೇಶ ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. 

ಬಿಬಿ ರಸ್ತೆಯ ಇಕ್ಕೆಲಗಳಲ್ಲಿ ವೈವಿಧ್ಯಮಯ ಮೂರ್ತಿಗಳು ಮಾರಾಟಕ್ಕಿವೆ. ಮೂಷಿಕ, ಬಸವ, ಹಸು, ಜಿಂಕೆ, ಆನೆ, ಸಿಂಹ, ಸರ್ಪ, ನವಿಲಿನೊಂದಿಗೆ ವಿರಾಜಮಾನನಾದ ಗಣೇಶನ ವಿವಿಧ ಬಗೆಯ ಮೂರ್ತಿಗಳನ್ನು ವ್ಯಾಪಾರಿಗಳು ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ತಂದು ಮಾರಾಟಕ್ಕೆ ಇಟ್ಟಿದ್ದಾರೆ.

ಚಿಕ್ಕಬಳ್ಳಾಪುರ ನಗರವೊಂದರಲ್ಲಿ 25ಕ್ಕೂ ಹೆಚ್ಚು ವ್ಯಾಪಾರಿಗಳು ಪ್ರತಿವರ್ಷ ಸುಮಾರು 2,000 ಮೂರ್ತಿಗಳನ್ನು ಮಾರಾಟ ಮಾಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮುಂದಾಗಿರುವವರು ಪೆಂಡಾಲ್‌ಗಳು ಮತ್ತು ವೇದಿಕೆಗಳನ್ನು ಈಗಾಗಲೇ ಸಿದ್ಧಗೊಳಿಸಿದ್ದಾರೆ.  

ಅರ್ಧ ಅಡಿಯಿಂದ 20 ಅಡಿಗಳವರೆಗಿನ ಮೂರ್ತಿಗಳು ಸಹ ಚಿಕ್ಕಬಳ್ಳಾಪುರದ ರಸ್ತೆ ಬದಿಯಲ್ಲಿ ಮಾರಾಟಕ್ಕಿವೆ. ಮೂರ್ತಿಗಳ ಎತ್ತರ, ಮಾದರಿಗಳನ್ನು ಆಧರಿಸಿ ಬೆಲೆ ನಿಗದಿ ಆಗುತ್ತದೆ.

ವಹಿವಾಟಿಗೆ ಮಳೆ ಅಡ್ಡಿ: ಭಾನುವಾರ ಸಂಜೆ 6 ಗಂಟೆ ಸಮಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಭಾರಿ ಮಳೆ ಸುರಿಯಿತು. ಇದರಿಂದ ಗಣೇಶ ಮೂರ್ತಿಗಳ ವಹಿವಾಟಿನ ಮೇಲೆ ಪರಿಣಾಮ ಬೀರಿತು. ಮೂರ್ತಿಗಳ ಸಂರಕ್ಷಣೆ, ವಹಿವಾಟಿಗೆ ಮಳೆ ತೊಡಕಾಯಿತು. 

ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೂರ್ತಿ ಕೊಂಡೊಯ್ಯುತ್ತಿರುವ ಯುವಕರು
ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೂರ್ತಿ ಕೊಂಡೊಯ್ಯುತ್ತಿರುವ ಯುವಕರು

ಸಮಾಜ ಸೇವಕರು ಕಾಣಿ; ದುಬಾರಿ ಗಣೇಶ

ಈ ಬಾರಿ ಸಮಾಜ ಸೇವಕರು ರಾಜಕೀಯ ನಾಯಕರು ಕ್ಷೇತ್ರದಲ್ಲಿ ಕಾಣಿ ಆಗಿದ್ದಾರೆ. ಈ ಹಿಂದೆ ಇವರು ಗಣೇಶ ಹಬ್ಬದ ಸಮಯದಲ್ಲಿ ಮೂರ್ತಿಗಳನ್ನು ನೀಡುತ್ತಿದ್ದರು. ಆದರೆ ಈ ಬಾರಿ ಉತ್ಸವ ಸಮಿತಿಯವರೇ ಮೂರ್ತಿಗಳನ್ನು ಖರೀದಿಸಬೇಕಾಗಿದೆ. ಇದರಿಂದ ಗಣೇಶ ಮೂರ್ತಿಗಳು ದುಬಾರಿ ಆಗಿವೆ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಮುನಿ ಆಂಜನಪ್ಪ. ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬೆಲೆಯೂ ದುಬಾರಿ ಆಗಿದೆ. ಚುನಾವಣೆ ಮುಗಿದ ನಂತರ ಸಮಾಜ ಸೇವಕರು ಕಾಣಿ ಆಗಿದ್ದಾರೆ. ಯಾರೂ ಮೂರ್ತಿಗಳನ್ನು ಉಚಿತವಾಗಿ ನೀಡಿಲ್ಲ ಎಂದರು 

ರಸ್ತೆಗಳು ಬ್ಲಾಕ್; ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ಎಂ.ಜಿ. ರಸ್ತೆ ಗಂಗಮ್ಮನ ಗುಡಿ ರಸ್ತೆ ಬಜಾರ್ ರಸ್ತೆಯಲ್ಲಿ ತೀವ್ರ ಜನಸಂದಣಿ ಹೆಚ್ಚಿತ್ತು. ಸಂಚಾರ ದಟ್ಟಣೆಯಿಂದ ಜನರು ಹೈರಾಣಾದರು. ಬಜಾರ್ ರಸ್ತೆಯಲ್ಲಿ ವ್ಯಾಪಾರಿಗಳು ಅಂಗಡಿಗಳ ಮುಂಭಾಗ ಸರಕು ತುಂಬಿದ್ದ ವಾಹನಗಳು ನಿಲುಗಡೆ ಆಗಿದ್ದವು. ಬೆಳಿಗ್ಗೆಯಿಂದ ಸಂಜೆಯವರೆಗೂ ಇದೇ ಸ್ಥಿತಿ ಇತ್ತು.  ನಗರದ ರಸ್ತೆಗಳು ತೀವ್ರ ಕಿರಿದಾಗಿವೆ. ವಾಹನಗಳ ಓಡಾಟಕ್ಕೆ ತೊಂದರೆ ಆಗಿದೆ. ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ರಸ್ತೆಗಳ ವಿಸ್ತರಣೆಗೆ ಮುಂದಾಗಬೇಕು ಎಂದು ನಾಗರಿಕರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT