ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಕಸಕ್ಕೆ ಬೆಂಕಿ; ನಗರ ತುಂಬುತ್ತಿದೆ ಹೊಗೆ

ಬೆಂಕಿ ಹಚ್ಚುವವರ ವಿರುದ್ಧ ಕ್ರಮಕೈಗೊಳ್ಳದ ನಗರಸಭೆ ‍ಪರಿಸರ ಅಧಿಕಾರಿಗಳು
Last Updated 30 ಜನವರಿ 2023, 10:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿಯೇ ಕಸಕ್ಕೆ ಬೆಂಕಿ ಹಚ್ಚುವ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಈ ಬಗ್ಗೆ ಕ್ರಮವಹಿಸಬೇಕಾದ ಮತ್ತು ಕಸಕ್ಕೆ ಬೆಂಕಿ ಹಚ್ಚುವವರ ವಿರುದ್ಧ ಕ್ರಮಕೈಗೊಳ್ಳಬೇಕಾದ ನಗರಸಭೆ ಪರಿಸರ ವಿಭಾಗದ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಕೆಲವು ವೇಳೆ ನಗರದ ಪ್ರಮುಖ ವೃತ್ತಗಳು, ಬಡಾವಣೆಗಳಲ್ಲಿಯೇ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ನಗರದ ಹೊರ ವಲಯದ ರಸ್ತೆ ಬದಿಯಲ್ಲಿ ಅವ್ಯಾಹತವಾಗಿ ಕಸ ಬೀಳುತ್ತಿದ್ದು ಇಲ್ಲಿಯೂ ಬೆಂಕಿ ಹೆಚ್ಚಲಾಗುತ್ತಿದೆ.

ಕಸಕ್ಕೆ ಬೆಂಕಿ ಹಚ್ಚುವುದನ್ನು ನಿರ್ಬಂಧಿಸಿ ಈ ಹಿಂದೆಯೇ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜನವಸತಿ ಅಥವಾ ಬಯಲು ಪ್ರದೇಶದಲ್ಲಿ ಕಸಕ್ಕೆ ಬೆಂಕಿ ಹಾಕುವಂತಿಲ್ಲ. ಆದೇಶ ಉಲ್ಲಂಘಿಸಿ ಬೆಂಕಿ ಹಚ್ಚಿದರೆ ವಾಯುಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯಿದೆ 1981ರ ಪ್ರಕಾರ ₹ 5 ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ. ಜೈಲು ಶಿಕ್ಷೆಯೂ ಇದೆ. ಈ ಕಾಯ್ದೆಯು ಚಿಕ್ಕಬಳ್ಳಾಪುರ ನಗರದಲ್ಲಿ ಎಷ್ಟರ ಮಟ್ಟಿಗೆ ಜಾರಿಯಾಗುತ್ತಿದೆ, ಕಸಕ್ಕೆ ಬೆಂಕಿ ಹಚ್ಚಿದವರ ಮೇಲೆ ಕ್ರಮವಹಿಸಲಾಗಿದೆಯೇ ಎಂದು ನೋಡಿದರೆ ಬೇಸರ ಮೂಡುತ್ತದೆ.

ಹೊಗೆ ಮೂಡಿಸಿದ ಆತಂಕ: ನಗರದ ಶಿಡ್ಲಘಟ್ಟ ವೃತ್ತದ ಜೀವನ್ ಆಸ್ಪತ್ರೆ ಮುಂಭಾಗದ ಖಾಲಿ ನಿವೇಶನದಲ್ಲಿನ ಕಸಕ್ಕೆ ಭಾನುವಾರ ಕಿಡಿಗೇಡಿ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿಯ ಕೆನ್ನಾಲಿಗೆ ಹೆಚ್ಚಿ ಖಾಲಿ ನಿವೇಶನವನ್ನು ಹೆಚ್ಚು ಆವರಿಸಿದೆ. ಈ ಪರಿಣಾಮ ದಟ್ಟ ಹೊಗೆ ಮೂಡಿತ್ತು. ಇಡೀ ವಾತಾವರಣ ಹೊಗೆಯಿಂದಲೇ ತುಂಬಿತ್ತು. ಜೀವನ ಆಸ್ಪತ್ರೆಯ ಕೊಠಡಿಗಳನ್ನು ಹೊಗೆ ದಟ್ಟವಾಗಿ ಆವರಿಸಿತ್ತು.

ಯಾವುದಾದರೂ ಅವಘಡವಾಗಿದೆಯೇ ಎನ್ನುವ ಮಟ್ಟಕ್ಕೆ ಬಿಬಿ ರಸ್ತೆಯಲ್ಲಿ ದಟ್ಟವಾಗಿ ಹೊಗೆ ಕಾಣಿಸಿಕೊಂಡಿತ್ತು. ಬೆಂಕಿ ಹಚ್ಚಿದವರಿಗೆ ಹಿಡಿಶಾಪ ಹಾಕುತ್ತಲೇ ಜನರು ಸಾಗಿದರು. ಜೀವನ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಉಸಿರುಗಟ್ಟುವಂತೆ ಮಾಡಿತ್ತು.

ಆಸ್ಪತ್ರೆಯ ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್, ಹೋಟೆಲ್, ಬೇಕರಿಗಳು ಸಹ ಇವೆ. ಹೊಗೆಯ ದೂಳು ಹೋಟೆಲ್‌ಗಳನ್ನು ಮತ್ತಿತ್ತು. ‘ಯಾರು ಹೀಗೆ ಬೆಂಕಿ ಹಚ್ಚಿದರೊ ಗೊತ್ತಿಲ್ಲ. ಉಸಿರಾಡುವುದಕ್ಕೆ ಸಮಸ್ಯೆ ಆಗಿದೆ. ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳು, ರೋಗಿಗಳು ಇದ್ದಾರೆ. ಬೆಂಕಿ ಹಚ್ಚಿದವರಿಗೆ ಕನಿಷ್ಠ ಪ್ರಜ್ಞೆಯಾದರೂ ಬೇಡವೇ’ ಎಂದು ಸುತ್ತಮುತ್ತಲಿನ ಅಂಗಡಿಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು.

ಹೊರವಲಯದಲ್ಲಿಯೂ ಬೆಂಕಿ: ನಗರದ ಹೊರವಲಯದ ಗೌರಿಬಿದನೂರು ರಸ್ತೆ, ಹಳೇ ಆರ್‌ಟಿಒ ಕಚೇರಿಯ ಬಳಿಯ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ.

2021ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ್ದ ವಾಯು ಮಾಲಿನ್ಯ ಅತ್ಯಲ್ಪ ಪ್ರಮಾಣದಲ್ಲಿರುವ ಹಾಗೂ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ರಾಷ್ಟ್ರದಲ್ಲಿಯೇ ಚಿಕ್ಕಬಳ್ಳಾಪುರ ನಗರ ನಾಲ್ಕನೇ ಸ್ಥಾನ ಪಡೆದಿತ್ತು. ಹೀಗೆ ಕಸಕ್ಕೆ ಬೆಂಕಿ ಹಚ್ಚುವ ಕೆಲಸಗಳು ಅತಿಯಾದರೆ ಪ್ರಶಸ್ತಿ ಇರಲಿ ಉತ್ತಮಗಾಳಿಯೂ ದೊರೆಯುವುದಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT