ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ಹೆಸರಿಗಷ್ಟೇ ಆಸ್ಪತ್ರೆ, ಚಿಕಿತ್ಸೆಗಳಿಗೆ ತಾಪತ್ರೆ!

ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯ ನೆಪದಲ್ಲಿ ರೋಗಿಗಳಿಗೆ ಅಲೆದಾಟದ ಶಿಕ್ಷೆ
Last Updated 7 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಗುಡಿಬಂಡೆ: ಪಟ್ಟಣದಲ್ಲಿರುವ ಸಾರ್ವಜನಿಕರ ಆಸ್ಪತ್ರೆ 100 ಹಾಸಿಗೆಗಳ ದೊಡ್ಡ ಆಸ್ಪತ್ರೆ ಎನಿಸಿಕೊಂಡು, ಸಾರ್ವಜನಿಕ ಆರೋಗ್ಯ ಸೇವೆಗೆ ಬೇಕಾದ ಅನೇಕ ಮೂಲಸೌಕರ್ಯಗಳನ್ನು ಹೊಂದಿದರೂ ಇಲ್ಲಿಗೆ ಬರುವ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಗುವಷ್ಟು ಚಿಕಿತ್ಸೆಗಳು ಮಾತ್ರ ಲಭ್ಯವಾಗುತ್ತಿವೆ ಎಂಬ ಅಳಲು ಸಾರ್ವಜನಿಕರದ್ದು.

ಕೊರೊನಾ ಭೀತಿಯಿಂದಾಗಿ ಕಳೆದ ದಿನಗಳಿಂದ ಎಲ್ಲೆಡೆ ಖಾಸಗಿ ಕ್ಲಿನಿಕ್‌ಗಳು ಬಾಗಿಲು ಮುಚ್ಚಿದ್ದು, ಗ್ರಾಮೀಣ ಪ್ರದೇಶಗಳ ಜನರು ಕೂಡ ಇದೇ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಜತೆಗೆ ತಜ್ಞ ವೈದ್ಯರ ಕೊರತೆಯ ನೆಪ ಹೇಳಿ ಜಿಲ್ಲಾ ಆಸ್ಪತ್ರೆ, ಬೆಂಗಳೂರಿಗೆ ಕಳುಹಿಸುವ ಪರಿಪಾಠ ಇಲ್ಲಿ ಬೆಳೆಯುತ್ತಿದೆ. ಈ ವಿಚಾರ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬ ಆಕ್ರೋಶ ರೋಗಿಗಳಿಂದ ವ್ಯಕ್ತವಾಗುತ್ತಿದೆ.

ಈ ಆಸ್ಪತ್ರೆಯಲ್ಲಿ ತಲಾ ಎರಡು ಹಾಸಿಗೆಗಳ ಡಯಾಲಿಸಿಸ್ ಘಟಕ ಮತ್ತು ತುರ್ತು ನಿಗಾ ಘಟಕ (ಐಸಿಯು) ವ್ಯವಸ್ಥೆ ಇದೆ. ಒಂದು ವೆಂಟಿಲೇಟರ್‌ ಇದೆ. ಡಿಜಿಟಲ್ ಎಕ್ಸರೇ ಯಂತ್ರದ ಸೌಲಭ್ಯವಿದೆ.

ಆಸ್ಪತ್ರೆಗೆ 11 ವೈದ್ಯರ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಪ್ರಸ್ತುತ ಒಂಬತ್ತು ವೈದ್ಯರ ನೇಮಕಾತಿಯಾಗಿದೆ. ಅವರಲ್ಲಿ ತಲಾ ಒಬ್ಬರು ಆಡಳಿತಾಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿಯಾಗಿದ್ದಾರೆ. ಇನ್ನುಳಿದಂತೆ ಏಳು ವೈದ್ಯರ ಸೇವೆ ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವಂತಾಗಿದೆ.

20 ನರ್ಸ್‌ಗಳ ಹುದ್ದೆಗಳ ಪೈಕಿ ಬೆರಳೆಣಿಕೆ ಹುದ್ದೆಗಳು ಭರ್ತಿ ಮಾಡಲಾಗಿದೆ. ಜತೆಗೆ ಕೆಲವರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.

ಪ್ರತಿದಿನ ಆಸ್ಪತ್ರೆಗೆ 700 ಜನರು ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಜತೆಗೆ ದಿನದ 24 ಗಂಟೆ ಒಳ ರೋಗಿಗಳ ಶೂಶ್ರಷೆ ನಡೆಯಬೇಕು. ಸಿಬ್ಬಂದಿ, ತಜ್ಞ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಯನ್ನು ಸುಸೂತ್ರವಾಗಿ ನಿರ್ವಹಿಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ ಎಂದು ವೈದ್ಯರು ಅಳಲು ತೋಡಿಕೊಳ್ಳುತ್ತಾರೆ.

**
ಸಾಗ ಹಾಕುವ ವೈದ್ಯರು
ತಾಲ್ಲೂಕು ಅಸ್ಪತ್ರೆಯಲ್ಲಿ ಸರ್ಕಾರದಿಂದ ಎಲ್ಲಾ ಸವಲತ್ತುಗಳನ್ನು ನೀಡಲಾಗಿದೆ. ಆದರೂ ವೈದ್ಯರು ವಿವಿಧ ಕಾರಣಗಳು ತಿಳಿಸಿ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಗಳಿಗೆ ಕಳುಹಿಸುತ್ತಿರುವುದು ತುಂಬ ನೋವಿನ ಸಂಗತಿಯಾಗಿದೆ.
-ಅಮರಾವತಿ,ಬ್ರಾಹ್ಮಣರಹಳ್ಳಿ ನಿವಾಸಿ

**
ನೆಮ್ಮದಿ ಕಳೆಯುವ ವ್ಯವಸ್ಥೆ
ಅತೀ ಹಿಂದುಳಿದ ಹಾಗೂ ಸತತ ಬರಗಾಲದಿಂದ ತತ್ತರಿಸುತ್ತಿರುವ ತಾಲ್ಲೂಕಿನಲ್ಲಿ ಜನರಿಗೆ ನೆಮ್ಮದಿಯಿಂದ ಬದುಕುವ ವಾತಾವರಣ ಇಲ್ಲ. ಜತೆಗೆ ಹದಗೆಟ್ಟ ಆರೋಗ್ಯ ವ್ಯವಸ್ಥೆಯಿಂದಾಗಿ ಜನರು ಆರೋಗ್ಯದಿಂದ ಕೂಡ ಇರಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಆಸ್ಪತ್ರೆಗೆ ತಜ್ಞ ವೈದ್ಯರನ್ನ ನೇಮಕ ಮಾಡುವ ಕೆಲಸ ಮಾಡಲಿ.
-ಎನ್.ಆನಂದಪ್ಪ,ಕಡೇಹಳ್ಳಿ ನಿವಾಸಿ

*
ಕೊರೊನಾ ಭೀತಿ ಕಾರಣಕ್ಕೆ ಆಸ್ಪತ್ರೆ ಹೊರಗಡೆ ಫೀವರ್ ಕೇಂದ್ರ ತೆರೆಯಲಾಗಿದೆ. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಿಕರಿಗೆ ಮಾತ್ರ ದಾಖಲು ಮಾಡಿಕೊಳ್ಳಲಾಗುತ್ತಿದೆ.
-ಡಾ.ಉಷಾ, ಆಸ್ಪತ್ರೆ ಆಡಳಿತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT