ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಕಸಿದುಕೊಳ್ಳುತ್ತಿರುವ ಗಣಿಗಾರಿಕೆ

ಮಡಬಹಳ್ಳಿ, ನರಸಾಪುರದಲ್ಲೂ ಅಕ್ರಮ ಕ್ವಾರಿಗಳು
Last Updated 24 ಫೆಬ್ರುವರಿ 2021, 4:07 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿಯ ಮಡಬಹಳ್ಳಿ, ಅಂಬಾಜಿ ದುರ್ಗ ಹೋಬಳಿಯ ನರಸಾಪುರದಲ್ಲೂ ಅಕ್ರಮ ಕ್ವಾರಿಗಳು ಕಾರ್ಯಾಚರಣೆ ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಅಪಾಯ ಸಂಭವಿಸಬಹುದು ಎಂಬ ಆತಂಕ ಆ ಭಾಗಗಳ ನಾಗರಿಕರಲ್ಲಿ ಇದೀಗ ಹೆಚ್ಚಾಗಿದೆ.

ಅಕ್ರಮ ಗಣಿಗಾರಿಕೆ ಈ ಗ್ರಾಮಗಳ ಜನರ ಬದುಕನ್ನೇ ಕಸಿದುಕೊಳ್ಳುತ್ತಿದೆ. ಹೊಲ, ಮನೆಗಳನ್ನು ತೊರೆದು ವಲಸೆ ಹೋಗವಂತಹ ಪರಿಸ್ಥಿತಿ ಎದುರಾಗಿದೆ. ಚಿಂತಾಮಣಿ ತಾಲ್ಲೂಕಿನ ಮಡಬಹಳ್ಳಿ ಗ್ರಾಮದ ಬೆಟ್ಟದಲ್ಲಿ ಬೆಂಗಳೂರಿನ ಉದ್ಯಮಿಗಳು ಅಕ್ರಮವಾಗಿ ನಡೆಸುತ್ತಿರುವ ಗಣಿಗಾರಿಕೆಯಿಂದ ಮಡಬಹಳ್ಳಿ, ನೆರ್ನಕಲ್ಲು, ಮಾದರಕಲ್ಲು ಗ್ರಾಮಗಳ ಜನರ ಮತ್ತು ಜಾನುವಾರುಗಳ ಬದುಕು ಅಸಹನೀಯವಾಗಿದೆ.

ಮಬಹಳ್ಳಿ ಗ್ರಾಮದ ಸರ್ವೆ ನಂ.1ರಲ್ಲಿ 360 ಎಕರೆ ಸಮೃದ್ಧ ಬೆಟ್ಟವಿತ್ತು. ಗಿಡಮರಗಳು ಸಮೃದ್ಧವಾಗಿ ಬೆಳೆದಿದ್ದವು. ಸುತ್ತಮುತ್ತಲ ಗ್ರಾಮಗಳ ಜನರು ಕುರಿ–ಮೇಕೆ ಹಾಗೂ ಜಾನುವಾರುಗಳನ್ನು ಮೇಯಿಸುತ್ತಿದ್ದರು. ಪ್ರಾಣಿ ಪಕ್ಷಿಗಳು ವಾಸ ಮಾಡುತ್ತಿದ್ದವು. ಗಣಿ ಉದ್ಯಮದಿಂದಾಗಿ ಇದೆಲ್ಲ ನಾಶವಾಗಿದೆ. ಜನರ ಪ್ರತಿಭಟನೆ, ಹೋರಾಟಕ್ಕೂ ಬೆಲೆ ಇಲ್ಲದಂತಾಗಿದೆ.

‘ಬೆಂಗಳೂರಿನ ಎಸ್.ರವಿರಾಜ್ ಭಟ್ ಅವರಿಗೆ 8 ಎಕರೆ, ಗಿರಿಜಾ ವಿ.ಮಿರ್ಜಿ ಎಂಬುವವರಿಗೆ 16 ಎಕರೆ ಪ್ರದೇಶವನ್ನು ಗಣಿಗಾರಿಕೆಗಾಗಿ 2011ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಜೂರು ಮಾಡಿದೆ. ಗ್ರಾಮ ಪಂಚಾಯಿತಿ ನಿರಾಕ್ಷೇಪಣಾ ಪತ್ರ ಪಡೆಯುವುದು ಸೇರಿದಂತೆ ಎಲ್ಲ ಷರತ್ತು, ನೀತಿ ನಿಯಮಗಳನ್ನು ಗಾಳಿಗೆ ತೂರಿ, ಗ್ರಾಮಸ್ಥರ ಗಮನಕ್ಕೂ ಬರದಂತೆ ಅನುಮತಿ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನೂ ಪಡೆದುಕೊಂಡಿದ್ದಾರೆ’ ಎನ್ನುತ್ತಾರೆ ಸ್ಥಳೀಯ ಹೋರಾಟಗಾರ ಸುರೇಶ್.

‘ಪ್ರತಿದಿನ ಸಂಜೆ 100ರಿಂದ 150 ಸಿಡಿಮದ್ದುಗಳನ್ನು ಸಿಡಿಸುತ್ತಾರೆ. ಅದರಿಂದ ಹೊರಬರುವ ಶಬ್ದ, ದೂಳಿನಿಂದ ಬದುಕು ನರಕಸದೃಶವಾಗಿದೆ. ಸುತ್ತಮುತ್ತಲ ಗ್ರಾಮಗಳ ಜನು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ರಾತ್ರಿ ಹೊತ್ತು ಜನರ ನಿದ್ರೆ ದೂರವಾಗಿದೆ. ಕಿಟಕಿ ಬಾಗಿಲು ತೆರೆದಿದ್ದರೆ ಮನೆಗಳಿಗೂ ದೂಳು ನುಗ್ಗುತ್ತದೆ. ಮನೆಯಲ್ಲಿನ ಪಾತ್ರೆಗಳು, ಸಾಮಾನು ಸರಂಜಾಮುಗಳು ನೆಲಕ್ಕೆ ಉರುಳುತ್ತವೆ. ಗೋಡೆಗಳು ಬಿರುಕು ಬಿಟ್ಟಿವೆ. ದೇವಸ್ಥಾನದ ಗೋಪುರ ಸಹ ಬಿರುಕು ಬಿಟ್ಟಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಬೆಟ್ಟದಲ್ಲಿ ₹35 ಲಕ್ಷ ವೆಚ್ಚದಲ್ಲಿ 2 ಚೆಕ್ ಡ್ಯಾಂ ಸ್ಥಾಪಿಸಲಾಗಿತ್ತು. ಗಣಿಗಾರಿಕೆಯಿಂದ ಒಂದು ತೊಟ್ಟು ನೀರು ಬರುತ್ತಿಲ್ಲ. ಶಾಲೆಯ ಕಟ್ಟಡವೂ ಬಿರುಕುಬಿಟ್ಟಿದೆ. ಅನೇಕ ವರ್ಷಗಳಿಂದ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಿದ್ದರೂ ಕ್ರಮ ಕೈಗೊಂಡಿಲ್ಲ. ಇಲ್ಲೂ ಯಾವುದಾದರೂ ಅನಾಹುತ ಆಗುವವರೆಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ’ ಎನ್ನುತ್ತಾರೆ ಮುಖಂಡ ನಾರಾಯಣಸ್ವಾಮಿ.

‘ಗಣಿಗಾರಿಕೆ ದೂಳಿನಿಂದ ಯಾವುದೇ ಬೆಳೆಗಳು ಬೆಳೆಯುತ್ತಿಲ್ಲ. ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗಿವೆ. ಸಿಡಿಮದ್ದುಗಳ ಚೂರುಗಳು ಬಹುದೂರದವರೆಗೂ ಬಿದ್ದಿರುತ್ತವೆ. ಕುರಿ, ಮೇಕೆಗಳು ಹುಲ್ಲನ್ನು ಮೇಯುತ್ತಿರುವಾಗ ಆ ಚುರುಗಳು ಸೇರಿದರೆ ಸತ್ತುಹೋಗುತ್ತವೆ’ ಎನ್ನುತ್ತಾರೆ ನೆರನಕಲ್ಲು ಕೃಷ್ಣಪ್ಪ.

‘ಪ್ರತಿಭಟನೆ ಮಾಡುವವರ ವಿರುದ್ಧ ಗೂಂಡಾಗಳಿಂದ ಬೆದರಿಕೆ ಹಾಕಿಸುವುದು. ಪೊಲೀಸರ ಮೂಲಕ ಬೆದರಿಕೆ, ಹೊರಗಡೆಯಿಂದ ಜನರನ್ನು ಕರೆದುಕೊಂಡು ಬಂದು ಹೋರಾಟಗಾರರ ಮೇಲೆ ಛೂ ಬಿಡುವುದು ಮಾಡುತ್ತಿದ್ದಾರೆ’ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT