ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಕ ಹೆಚ್ಚಳ: ಆಲೂಗಡ್ಡೆ ಬೆಲೆ ಕುಸಿತ

ಮಾರುಕಟ್ಟೆಯಲ್ಲಿ ಕೇಳೋರು ಇಲ್ಲ l ಬೆಳೆಗಾರರು ಕಂಗಾಲು
Last Updated 28 ಫೆಬ್ರವರಿ 2023, 5:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾಗಿ ಆಲೂಗಡ್ಡೆ ಬೆಳೆಯೂ ಒಂದು. ವರ್ಷಕ್ಕೆ ಎರಡು ಬಾರಿ ರೈತರು ಬೆಳೆದು ಮಾರಾಟ ಮಾಡಿ ಆದಾಯ ಗಳಿಸುತ್ತಾರೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಆಲೂಗಡ್ಡೆ ಬೆಳೆಗಾರರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯ, ನವೆಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಿದ ಬೇಸಿಗೆ ಆಲೂಗಡ್ಡೆ ಬೆಳೆಯ ಕೊಯ್ಲು ಈಗ ಆರಂಭವಾಗಿದೆ. ಬೆಳೆಗಾರರು ಬೆಳೆಯನ್ನು ಕೊಯ್ಲು ಮಾಡಿಸಿ, ರಾಶಿ ಹಾಕಿ ಮಾರುಕಟ್ಟೆಗೆ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಆಲೂಗಡ್ಡೆ ಆವಕದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ಬೆಲೆಯೂ ಪಾತಾಳಕ್ಕೆ ಕುಸಿಯುತ್ತಿದೆ.

ದಿನದಿನ ಬೆಲೆ ಕುಸಿತ: ಒಂದು ತಿಂಗಳ ಹಿಂದೆ ಸ್ಥಳೀಯ ಮಾರುಕಟ್ಟೆಯಲ್ಲಿ 50 ಕೆ.ಜಿ ಚೀಲದ ಗುಣಮಟ್ಟದ ಆಲೂಗಡ್ಡೆ ಮೂಟೆ ₹1000 ರಿಂದ ₹1400 ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಆದರೆ, ಹಿಂದಿನ ವಾರ ಒಂದು ಚೀಲದ ಆಲೂಗಡ್ಡೆ ಮೂಟೆ ₹800 ರಿಂದ ₹900 ರವರೆಗೆ ಮಾರಾಟವಾಗುತ್ತಿತ್ತು. ಆದರೆ, ಗುರುವಾರ ಮಾರುಕಟ್ಟೆಯಲ್ಲಿ ₹580 ರಿಂದ ₹650 ಗೆ ಮಾರಾಟವಾಗಿದೆ. ಆಲೂಗಡ್ಡೆ ಬೆಲೆ ದಿನದಿಂದ ದಿನಕ್ಕೆ ಈ ಪಾಟಿ ಕುಸಿಯುತ್ತಿರುವುದು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ.

ಆವಕದ ಪ್ರಮಾಣ ಹೆಚ್ಚಳ: ಜಿಲ್ಲೆಯ ರೈತರು ಪ್ರತಿ ವರ್ಷ ಸಾವಿರಾರು ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬೆಳೆ ಬೆಳೆಯುತ್ತಾರೆ. ಬೆಳೆಯನ್ನು ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮತ್ತು ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಈ ಎರಡು ಮಾರುಕಟ್ಟೆಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ರೈತರು ಆಲೂಗಡ್ಡೆ ತಂದು ಮಾರಾಟ ಮಾಡುತ್ತಾರೆ. ವಾರದಿಂದ ಈಚೆಗೆ ಮಾರುಕಟ್ಟೆಗೆ ಆಲೂಗಡ್ಡೆ ಆವಕದ ಪ್ರಮಾಣ ಹೆಚ್ಚಳ ಕಂಡಿರುವುದರಿಂದ ಬೆಲೆಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ಆಲೂಗಡ್ಡೆ ವ್ಯಾಪಾರಿಗಳು.

ಬೇಡಿಕೆಯೂ ಕಡಿಮೆ: ಈಗಾಗಲೇ ಆಲೂಗಡ್ಡೆ ಬೆಳೆಗೆ ರೈತರು ದುಬಾರಿ ಖರ್ಚು ಮಾಡಿದ್ದಾರೆ. ಬಹುತೇಕ ಕಡೆ ಆಲೂಗಡ್ಡೆ ಕೊಯ್ಲಿಗೆ ಶುರು ಮಾಡಿರುವ ರೈತರು ನೇರವಾಗಿ ಮಾರುಕಟ್ಟೆಗೆ ಸಾಗಿಸಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬೆಂಗಳೂರಿನಲ್ಲಿ ಮಾರಿದರೆ ದುಪ್ಪಟ್ಟು ಖರ್ಚು: ಸ್ಥಳೀಯ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕುಸಿದಿದೆ. ರೈತರೇ ಬೆಂಗಳೂರಿಗೆ ಆಲೂಗಡ್ಡೆ ಮಾರಲು ಹೊರಟರೆ, ದುಪ್ಪಟ್ಟು ಖರ್ಚು ಮಾಡಬೇಕು. ಬೆಂಗಳೂರಿನಲ್ಲಿ ಮೂರ್ನಾಲ್ಕು ದಿನ ತಂಗಬೇಕು. ಇತರೆ ಆಲೂಗಡ್ಡೆ ಬೆಳೆಗಾರರ ಜೊತೆ ಪೈಪೋಟಿ ನಡೆಸಬೇಕು. ವ್ಯಾಪಾರಸ್ಥರೊಂದಿಗೆ ಚೌಕಾಶಿ ಮಾಡಬೇಕು. ಮನವೊಲಿಸಬೇಕು. ವಸತಿ, ಊಟ ಅಲ್ಲದೆ ಇತರ ಖರ್ಚುಗಳನ್ನು ಸಹ ನಿಭಾಯಿಸಬೇಕು. ಸಾಗಣೆಗಾಗಿ ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಲೂಗಡ್ಡೆ ಬೆಳೆಗಾರರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT