ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ |ರಾತ್ರಿ ವೇಳೆ ಬಂದು ಹಿಪ್ಪುನೇರಳೆ ಸೊಪ್ಪನ್ನು ತಿನ್ನುತ್ತಿರುವ ಕೀಟಗಳು

Last Updated 22 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಬಸವಪಟ್ಟಣ ಗ್ರಾಮದ ಸತೀಶ ಎಂಬುವರ ಹಿಪ್ಪುನೇರಳೆ ತೋಟದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಕಾಣಿಸಿಕೊಂಡ ಕೀಟಗಳು ಸೊಪ್ಪು ತಿಂದು ಹಾಳು ಮಾಡುತ್ತಿದ್ದವು. ಇವರ ಪಕ್ಕದಲ್ಲಿರುವ ರೈತ ಸಂತೋಷ್ ಅವರ ಹಿಪ್ಪುನೇರಳೆ ತೋಟದಲ್ಲಿಯೂ ಸಹ ಇದೇ ರೀತಿಯಾಗಿ ಕೀಟಗಳು ಧಾಳಿ ನಡೆಸಿವೆ.

ಇದನ್ನು ಕಂಡು ರೈತರು ಗಾಬರಿಗೊಂಡಿದ್ದಾರೆ. ಹಗಲಿನ ಸಮಯದಲ್ಲಿ ಕಾಣಿಸದೇ ಕೇವಲ ರಾತ್ರಿ ವೇಳೆ ಧಾಳಿ ನಡೆಸುವ ಈ ಕೀಟಗಳಿಂದ ಹೇಗೆ ಬೆಳೆಯನ್ನು ಉಳಿಸಿಕೊಳ್ಳುವುದು ಎಂದು ಚಿಂತಿತರಾಗಿದ್ದಾರೆ.

ಹಿಪ್ಪುನೇರಳೆ ಗಿಡವನ್ನು ವಿವಿಧ ಬಗೆಯ ರೋಗ ಮತ್ತು ಕೀಟಗಳು ಆಗಾಗ ಬಾಧಿಸುತ್ತವೆ. ಇದರಿಂದ ಸೊಪ್ಪಿನ ಇಳುವರಿ ಕುಂಠಿತವಾಗುವುದಲ್ಲದೆ ರೇಷ್ಮೆಹುಳುವಿಗೆ ಗುಣಮಟ್ಟದ ಸೊಪ್ಪಿನ ಲಭ್ಯತೆ ಕಡಿಮೆಯಾಗುತ್ತದೆ. ಇದೀಗ ಕೊರೊನಾ ಲಾಕ್ ಡೌನ್ ಪರಿಣಾಮವಾಗಿ ರೇಶ್ಮೆ ಗೂಡಿನ ಧಾರಣೆ ಕುಸಿದಿದ್ದು, ಒಂದೆಡೆ ರೇಷ್ಮೆ ಬೆಳೆಗಾರ ನಷ್ಟದಲ್ಲಿದ್ದರೆ, ಮತ್ತೊಂದೆಡೆ ಈ ಕೀಟ ಬಾಧೆ ಶುರುವಾಗಿ ರೈತರು ಆತಂಕಗೊಂಡಿದ್ದಾರೆ.

ರೇಷ್ಮೆಹುಳು ಅತಿ ಸಂವೇದನಾಶೀಲ ಕೀಟವಾಗಿದ್ದು ವಾತಾವರಣದ ಏರಿಳಿತಕ್ಕೆ ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಹಾಗೆಯೇ ಸಸ್ಯ ಸಂರಕ್ಷಣೆಯಲ್ಲಿ ಬಳಸುವ ರಾಸಾಯನಿಕಗಳಿಂದ ಕಲುಷಿತಗೊಂಡ ಸೊಪ್ಪನ್ನು ತಿಂದರೂ ಹುಳುವಿನ ಜೀವನಚಕ್ರದಲ್ಲಿ ವ್ಯತ್ಯಾಸವುಂಟಾಗುತ್ತದೆ. ಹಾಗಾಗಿ ಈ ಕೀಟಗಳನ್ನು ಸಾಯಿಸಲು ಕೀಟನಾಶಕಗಳನ್ನು ಬಳಸುವಂತಿಲ್ಲ.

ವಿಜ್ಞಾನಿಗಳ ಸಲಹೆ:ಜಿಕೆವಿಕೆಯ ಕೀಟ ಶಾಸ್ತ್ರ ವಿಭಾಗದ ವಿಜ್ಞಾನಿಗಳಾದ ಕೆ.ವಿ.ಪ್ರಕಾಶ್, ಡಾ.ಡಿ.ರಾಜಣ್ಣ ಮತ್ತು ಯು.ಸಹನ ಈ ಕೀಟಗಳನ್ನು ಬೇರುಹುಳುವಿನ ದುಂಬಿಗಳು ಎಂದು ಗುರುತಿಸಿದ್ದು, ಅವುಗಳ ಬಗ್ಗೆ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.

ಬೇರುಹುಳುವಿನ ವೈಜ್ಞಾನಿಕ ಹೆಸರು ಹೋಲೊಟ್ರೈಕಿಯ ಸೆರ್ರಟ. ಬೇರುಹುಳು ಮೊಟ್ಟೆ, ಮರಿ, ಕೋಶ ಹಾಗೂ ದುಂಬಿ ಎಂಬ ನಾಲ್ಕು ಹಂತಗಳನ್ನು ಹೊಂದಿದ್ದು, ಮೊಟ್ಟೆ, ಮೂರು ಹಂತದ ಮರಿಹುಳುಗಳು, ಕೋಶ ಮತ್ತು ದುಂಬಿ ಯಾವಾಗಲೂ ಭೂಮಿಯ ಒಳಗೆ ಇದ್ದು ಉಳುಮೆ ಮಾಡುವಾಗ ಅಥವ ಗಿಡಗಳನ್ನು ಕೀಳುವಾಗ ಮಾತ್ರ ಕಂಡುಬರುತ್ತವೆ.

ದುಂಬಿಗಳು ಬೇಸಿಗೆಯಲ್ಲಿ ಮೊದಲನೆ ಮಳೆ ಬಿದ್ದಾಗ ಕೆಲವು ದಿನಗಳು ಸಂಜೆಯ ಸುಮಾರು 7.30 ರ ಸಮಯಕ್ಕೆ ಭೂಮಿಯಿಂದ ಹೊರ ಬರುತ್ತವೆ. ಈ ರೀತಿ ಹೊರಬಂದ ಗಂಡು-ಹೆಣ್ಣು ದುಂಬಿಗಳು ಕೆಲವು ಬಗೆಯ ಮರಗಳ ಮೇಲೆ ಕುಳಿತು ಮಿಲನ ಹೊಂದಿ, ಎಲೆಗಳನ್ನು ತಿಂದು ಬೆಳಗಾಗುವುದರೊಳಗೆ ಪುನಃ ಭೂಮಿಯೊಳಗೆ ಸೇರುತ್ತವೆ. ರಾತ್ರಿ ವೇಳೆ ಹಿಪ್ಪುನೇರಳೆಯಲ್ಲಿ ನೂರಾರು ದುಂಬಿಗಳು ಏಕಕಾಲದಲ್ಲಿ ಎಲೆಗಳನ್ನು ತಿನ್ನುವುದರಿಂದ ಕೆಲವೊಮ್ಮೆ ಆರ್ಥಿಕ ನಷ್ಟವುಂಟಾಗುವುದು.

ಬೇರುಹುಳುಗಳು ತಮ್ಮ ಜೀವಿತಾವಧಿಯ ಬಹುತೇಕ ಸಮಯವನ್ನು ಭೂಮಿಯ ಒಳಗೆಯೇ ಕಳೆಯುವುದರಿಂದ ಸಾಮಾನ್ಯವಾಗಿ ರೇಷ್ಮೆ ಬೆಳೆಗಾರರಿಗೆ ಬೇರುಹುಳುವಿನ ಪರಿಚಯವಿರುವುದಿಲ್ಲ. ಬಾಧೆಗೊಳಗಾದ ಹಿಪ್ಪುನೇರಳೆ ಗಿಡದಲ್ಲಿ ದುಂಬಿಗಳನ್ನು ಕಂಡು ರೈತರು ಗಾಬರಿಗೊಳ್ಳುವುದಲ್ಲದೆ ಇವು ತಮ್ಮ ತೋಟಕ್ಕೆ ಎಲ್ಲಿಂದ ಬಂದವು ಎಂದು ಆಶ್ಚರ್ಯಗೊಳ್ಳುತ್ತಾರೆ.

ಗುಂಪುಗಳಲ್ಲಿ ಇರುವ ದುಂಬಿಗಳನ್ನು ಕೈಬಲೆಗಳ ಸಹಾಯದಿಂದ ರಾತ್ರಿ 7.30 ರಿಂದ 9 ಗಂಟೆಯವರೆಗೆ ಹಿಡಿದು ನಾಶಪಡಿಸಬೇಕು. ಈ ಕಾರ್ಯವನ್ನು ಗ್ರಾಮದ ಎಲ್ಲಾ ರೇಷ್ಮೆ ಬೆಳೆಗಾರರು ಆಸಕ್ತಿಯಿಂದ ಒಟ್ಟಾಗಿ ಕೈಗೊಳ್ಳುವುದರಿಂದ ಹೆಚ್ಚು ದುಂಬಿಗಳನ್ನು ಹಿಡಿದು ನಾಶಮಾಡಬಹುದು. ಈ ರೀತಿ ಮೂರು ಅಥವ ನಾಲ್ಕು ವರ್ಷಗಳು ಸಾಮೂಹಿಕವಾಗಿ ದುಂಬಿಗಳನ್ನು ಹಿಡಿದರೆ ನಂತರದ ದಿನಗಳಲ್ಲಿ ಆ ಪ್ರದೇಶಗಳಲ್ಲಿ ಬೇರುಹುಳುವಿನ ಬಾಧೆ ನಿಯಂತ್ರಣಕ್ಕೆ ಬರುತ್ತದೆ.

***
ಈಗಾಗಲೇ ರೇಷ್ಮೆ ಬೆಳೆಗಾರರು ಸಾಕಷ್ಟು ನಷ್ಟದಲ್ಲಿದ್ದಾರೆ. ಇಂಥಹ ವಿಷಮ ಸ್ಥಿತಿಯಲ್ಲಿ ಕೀಟಗಳು ಏಕಾಏಕಿ ಬಂದು ರಾತ್ರಿವೇಳೆ ಹಿಪ್ಪುನೇರಳೆ ಸೊಪ್ಪನ್ನು ತಿನ್ನುತ್ತಿರುವುದು ಇನ್ನಷ್ಟು ತೊಂದರೆಗೆ ಕಾರಣವಾಗಿದೆ. ವಿಜ್ಞಾನಿಗಳು ರೇಷ್ಮೆ ಬೆಳೆಗಾರರಿಗೆ ನೆರವಾಗಬೇಕು. ಈ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು.
-ಭಕ್ತರಹಳ್ಳಿ ಬೈರೇಗೌಡ, ರೈತ ಸಂಘದ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT