ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಕೆರೆಗಳ ಒತ್ತುವರಿ ತೆರವಿಗೆ ಒತ್ತಾಯ

Last Updated 1 ಏಪ್ರಿಲ್ 2021, 7:52 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರದ ಹೊರವಲಯದ ಗೌಡನ ಕೆರೆ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಕೆರೆಗಳು, ರಾಜಕಾಲುವೆಗಳ ಒತ್ತುವರಿ ಹಾಗೂ ಕೆರೆಗಳಲ್ಲಿರುವ ಜಾಲಿ ಮರಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು ಎಂದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದರು.

ನಗರದಲ್ಲಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಶೀಲ್ದಾರ್ ಬಿ.ಎಸ್.ರಾಜೀವ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

‘ನಮ್ಮ ತಾಲ್ಲೂಕಿನ ಒಂಬತ್ತು ಕೆರೆಗಳಿವೆ. ಎಚ್.ಎನ್.ವ್ಯಾಲಿ ಯೋಜನೆಯಲ್ಲಿ ಕೆಲವು ಕೆರೆಗಳು ಮಾತ್ರ ಅಧಂಬರ್ಧ ಕಾಮಗಾರಿ ಮಾಡಿ ನಿಲ್ಲಿಸಿದ್ದಾರೆ. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸದೆ ನೀರು ಬಿಡಲು ತಯಾರಿ ನಡೆಸಿದ್ದಾರೆ. ರಾಜಕಾಲುವೆ ಒತ್ತುವರಿ ಅತಿಯಾಗಿರುವುದರಿಂದ ನೀರು ಹೋಗದೆ ಪೋಲಾಗುತ್ತಿದೆ. ನಮ್ಮ ತಾಲ್ಲೂಕಿನ ಬಹಳ ದೊಡ್ಡ ಕೆರೆಯಾದ ಭದ್ರನ ಕೆರೆಯಲ್ಲಿ ಬೆಳೆದಿರುವ ಮರಗಿಡಗಳು ಮತ್ತು ಜಾಲಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿಲ್ಲ. ಗೌಡನ ಕೆರೆಯನ್ನು ಬಲಾಢ್ಯರು ಒತ್ತುವರಿ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಯಾವ ಒತ್ತಡಕ್ಕೂ ಮಣಿಯದೇ ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು’ ಎಂದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಸ್ವಾಮಿ ಮಾತನಾಡಿ, ‘ಕೆರೆಗಳಲ್ಲಿ ಜಾಲಿ ತೆರವುಗೊಳಿಸುವ ಬಗ್ಗೆ ಈ ಹಿಂದೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು.

ಕ್ರಮಕ್ಕೆ ಆಗ್ರಹ: ‘ತಾಲ್ಲೂಕು ಕಚೇರಿ ಸೇರಿದಂತೆ ಕೆಲವು ಸರ್ಕಾರಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಿದೆ. ರೈತರ ಕೆಲಸ ಮಾಡಿಕೊಡಲು ಕಚೇರಿಗೆ ಅಲೆದಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳು ಹಾಗೂ ಅಧಿಕಾರಿಗಳು ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರಾಜೀವ್, ‘ತಾಲ್ಲೂಕು ಕಚೇರಿಯಲ್ಲಿ ಸರ್ವೆ ಇಲಾಖೆಯಲ್ಲಿ ಹಿಂದೆ ಸಿಬ್ಬಂದಿ ಕೊರತೆಯಿತ್ತು. ಈಗ ನಾಲ್ಕು ಜನ ಸಿಬ್ಬಂದಿ ಬಂದಿದ್ದು ಕೂಡಲೇ ಕೆರೆಗಳ ಸರ್ವೆ ಕಾರ್ಯಕ್ಕೆ ಮುಂದಾಗುತ್ತೇವೆ. ಯಾವುದೇ ಮುಲಾಜಿಲ್ಲದೆ ಒತ್ತುವರಿಗಳನ್ನು ತೆರವುಗೊಳಿಸಿ ಕೆರೆಗಳಿಗೆ ನೀರು ಬರುವಂತಹ ಕಾರ್ಯ ಮಾಡುತ್ತೇವೆ. ಹಾಗೂ ರೈತರ ಕೆಲಸಕ್ಕೆ ಹಣದ ಬೇಡಿಕೆ ಇಟ್ಟಂತಹ ಅಧಿಕಾರಿಗಳು ವಿರುದ್ಧ ಕ್ರಮ ಜರುಗಿಸಲಾಗುತ್ತದೆ’ ಎಂದರು.

ರಾಜ್ಯ ರೈತ ಸಂಘದ ಅರುಣ್ ಕುಮಾರ್, ಎಂ ನಾಗರಾಜ್, ಕೋಟೆ ಚನ್ನೇಗೌಡ, ನಾರಾಯಣಸ್ವಾಮಿ, ಲೋಕೇಶ್, ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಟಿ. ಶ್ರೀನಾಥ್, ವೆಂಕಟರಾಯಪ್ಪ, ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT