ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಬಡ್ಡಿ ಮನ್ನಾ; 1,498 ರೈತರು ಸುಸ್ತಿದಾರರು

2023 ಡಿ.31ಕ್ಕೆ ಸುಸ್ತಿ ಆಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ
Published 19 ಫೆಬ್ರುವರಿ 2024, 6:30 IST
Last Updated 19 ಫೆಬ್ರುವರಿ 2024, 6:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದ ಸಹಕಾರ ಸಂಸ್ಥೆಗಳ ಮೂಲಕ ಸಾಲ ಪಡೆದು 2023 ಡಿ.31ಕ್ಕೆ ಸುಸ್ತಿ ಆಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಅಸಲು ಪಾವತಿಸಿದಲ್ಲಿ ಅದರ ಮೇಲಿನ ಬಡ್ಡಿ ಮನ್ನಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಪ್ರಕಾರ ಜಿಲ್ಲೆಯಲ್ಲಿ 1,498 ರೈತರು ಸಾಲ ಪಾವತಿಸದೆ ಸುಸ್ತಿದಾರರಾಗಿದ್ದಾರೆ. ಜಿಲ್ಲೆಯಲ್ಲಿ ಪಿಕಾರ್ಡ್ ಬ್ಯಾಂಕುಗಳಲ್ಲಿ, ಡಿಸಿಸಿ ಹಾಗೂ ಅದರ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಯೋಜನೆಗೆ ಇಷ್ಟು ರೈತರು ಒಳಪಡಲಿದ್ದಾರೆ.

ಹೀಗೆ ಡಿಸಿಸಿ ಬ್ಯಾಂಕ್, ವಿಎಸ್‌ಎಸ್‌ಎನ್‌ ಬ್ಯಾಂಕುಗಳು, ಪಿಕಾರ್ಡ್ ಬ್ಯಾಂಕುಗಳಲ್ಲಿ 1,498 ರೈತರು ₹ 22.67 ಕೋಟಿ ಅಸಲನ್ನು ಪಾವತಿಸಬೇಕಾಗಿದೆ. ಈ ರೈತರು ಸುಸ್ತಿದಾರರಾದ ಕಾರಣ ಸರ್ಕಾರವು ₹ 16.28 ಕೋಟಿ ಬಡ್ಡಿಯನ್ನು ಈ ಸಹಕಾರ ಸಂಸ್ಥೆಗಳಿಗೆ ತುಂಬಲಿದೆ.

ಜಿಲ್ಲೆಯ ಡಿಸಿಸಿ ಬ್ಯಾಂಕು ಹಾಗೂ ಅದರ ವ್ಯಾಪ್ತಿಯಲ್ಲಿ ವಿಎಸ್‌ಎಸ್‌ಎನ್‌ಗಳಲ್ಲಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಪಡೆದು ತೀರಿಸಲಾಗದೇ 2023ರ ಅಂತ್ಯಕ್ಕೆ ಒಟ್ಟು 101 ಮಂದಿ ರೈತರು ಸುಸ್ತಿ ಆಗಿದ್ದಾರೆ. 101 ರೈತರು ಒಟ್ಟು ₹ 8.12 ಕೋಟಿ ಅಸಲುಮರು ಪಾವತಿಸಿದರೆ ಅದಕ್ಕೆ ಸರ್ಕಾರ ಡಿಸಿಸಿ ಬ್ಯಾಂಕು ಹಾಗೂ ವಿಎಸ್‌ಎಸ್‌ಎನ್‌ಗಳಿಗೆ ಒಟ್ಟು ₹ 2.17 ಕೋಟಿ ಬಡ್ಡಿ ಹಣ ತುಂಬಲಿದೆ. 

ಇದೇ ಪ್ರಕಾರ ಜಿಲ್ಲೆಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕುಗಳಲ್ಲಿ (‌ಪಿಕಾರ್ಡ್ ಬ್ಯಾಂಕು) 1,397 ರೈತರು ಸುಸ್ತಿದಾರರಾಗಿದ್ದಾರೆ. ಇವರೂ ಸಹ 2023ರ ಅಂತ್ಯಕ್ಕೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲವನ್ನು ಮರು ಪಾವತಿಸಿಲ್ಲ. 1,397 ರೈತರಿಂದ ಪಿಕಾರ್ಡ್ ಬ್ಯಾಂಕುಗಳಿಗೆ ಬರೋಬ್ಬರಿ ₹ 13.55 ಕೋಟಿ ಸಾಲ ಮರು ಪಾವತಿ ಆಗಬೇಕಿದೆ. ಅಸಲು ಪಾವತಿಸಿದರೆ ಸರ್ಕಾರ ಅದಕ್ಕೆ ಬಡ್ಡಿಯಾಗಿ ಒಟ್ಟು ₹ 14.11 ಕೋಟಿ ತುಂಬಿ ಕೊಡಲಿದೆ.

ರಾಜ್ಯದಲ್ಲಿ ತೀವ್ರ ಮಳೆ-ಬೆಳೆ ಕೊರತೆಯಿಂದ ಈ ವರ್ಷ ಬರಗಾಲ ಆವರಿಸಿದೆ. ರೈತರು ತೀವ್ರ ಸಂಕಷ್ಟದಲ್ಲಿರುವ ಕಾರಣ 2023ಕ್ಕೆ ಸುಸ್ತಿ ಆಗಿರುವ ರೈತರು ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಅಸಲು ಕಟ್ಟಿದರೆ ಅದರ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು.

ಆ ಪ್ರಕಾರ ಸಹಕಾರ ಇಲಾಖೆಯು ಜ.21 ರಂದು ಸಹಕಾರ ಸಂಸ್ಥೆಗಳ ಮೂಲಕ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಸಾಲ ಪಡೆದು ಸುಸ್ತಿ ಆಗಿರು ವ ರೈತರು ಸಾಲ ಮರು ಪಾವತಿ ಮಾಡಿದರೆ ಅದರ ಮೇಲಿನ ಬಡ್ಡಿ ಮನ್ನಾ ಮಾಡುವ ಕುರಿತು ಆದೇಶ ಹೊರಡಿಸಿದೆ. ಸಾಲ ಮರು ಪಾವತಿ ಮಾಡಿದರೆ ಜಿಲ್ಲೆಯ ಸಹಕಾರ ಸಂಸ್ಥೆಗಳಲ್ಲಿ ಸಾಲ ಪಡೆದಿರುವ 1,498 ರೈತರಿಗೆ ಬಡ್ಡಿ ಮನ್ನಾ ಲಾಭವಾಗಲಿದೆ. ಅದರಲ್ಲೂ ಸುಸ್ತಿದಾರರಾಗಿರುವ ರೈತರನ್ನು ಋಣಮುಕ್ತರನ್ನಾಗಿ ಮಾಡಿ ಮುಂದಿನ ತಮ್ಮ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆದು ಅರ್ಹತೆಗಳಿಸಲು ಸರ್ಕಾರ ಅಸಲು ತೀರಿಸಿದರೆ ಬಡ್ಡಿ ಮನ್ನಾ ಯೋಜನೆ ರೂಪಿಸಿ ಅನುಷ್ಟಾನಕ್ಕೆ ಮುಂದಾಗಿದೆ.

ಬಡ್ಡಿ ಮನ್ನಾ ಯೋಜನೆಯು ಕೃಷಿಯೇತರ ಸಾಲಗಳಿಗೆ ಅನ್ವಯವಾಗುವುದಿಲ್ಲ. ಜೊತೆಗೆ ಪಿಕಾರ್ಡ್ ಹಾಗೂ ಡಿಸಿಸಿ ಬ್ಯಾಂಕ್ ಹೊರತುಪಡಿಸಿ ಇತರೇ ಸಹಕಾರ ಸಂಸ್ಥೆಗಳಲ್ಲಿ ಪಡೆದ ಸಾಲಗಳಿಗೆ ಅನ್ವಯಿಸುವುದಿಲ್ಲ. ನಬಾರ್ಡ್ ಗುರುತಿಸಿದ ಕೃಷಿ, ಕೃಷಿ ಸಂಬಂಧಿಸಿದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳಿಗೆ ಅಂದರೆ ಲಘ ನೀರಾವರಿ, ಭೂ ಅಭಿವೃದ್ದಿ, ಸಾವಯುವ ಕೃಷಿ, ಪಶುಸಂಗೋಪಾನೆ ಹಾಗೂ ಹೈನುಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಕೃಷಿ ಯಾಂತ್ರೀಕರಣ, ಪ್ಲಾಂಟೇಷನ್ ಹಾಗೂ ತೋಟಗಾರಿಕಾ ಅಭಿವೃದ್ಧಿ ಉದ್ದೇಶಗಳಿಗೆ ಪಡೆದ ಸಾಲದ ಮೇಲಿನ ಬಡ್ಡಿ ಮನ್ನಾ ಆಗಲಿದೆ. 

ಅಸಲು ಪಾವತಿಸಿ ಸೌಲಭ್ಯ ಪಡೆಯಿರಿ
ಶೇ 3ರ ಬಡ್ಡಿದರಲ್ಲಿ ₹ 15 ಲಕ್ಷದವರೆಗೆ ನಾವು ಸಾಲವನ್ನು ಕೊಡಬಹುದು. ₹ 15 ಲಕ್ಷದವರೆಗೆ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಇಷ್ಟು ಪ್ರಮಾಣ ಸಾಲ ನೀಡುವುದು ಪಿಕಾರ್ಡ್ ಬ್ಯಾಂಕ್ ಮಾತ್ರ ಎಂದು ಚಿಕ್ಕಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕಾಳೇಗೌಡ ತಿಳಿಸಿದರು. ಸುಸ್ತಿದಾರ ರೈತರು‌ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಆಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ ಸಾಲ ವಸೂಲಿಯಲ್ಲಿ ಚಿಕ್ಕಬಳ್ಳಾಪುರ ಬ್ಯಾಂಕ್ ಮೊದಲ ಸ್ಥಾನದಲ್ಲಿ ಇದೆ. ನಮ್ಮ ಬ್ಯಾಂಕ್ ಶೇ 65ರಿಂದ 70ರಷ್ಟು ಸಾಲ ವಸೂಲಿ ಮಾಡುತ್ತಿದೆ. ಈ ಸುಸ್ತಿದಾರರು ಸಹ ಅಸಲು ಪಾವತಿಸಿದೆ ಶೇ 85ರಿಂದ 90ರಷ್ಟು ಸಾಲ ವಸೂಲಿ ಆಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT