ಭಾನುವಾರ, ಮಾರ್ಚ್ 7, 2021
28 °C
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದಿರುವ ಶರನ್ನವರಾತ್ರಿ ಉತ್ಸವದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿಮತ

ಸಂಸ್ಕೃತಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ನಮಗೆ ರಕ್ತಗತವಾಗಿ ಬಂದ ಸ್ನೇಹ, ಸೌಹಾರ್ದ ಎಂಬ ಮಾನವ ಅಂತಃಕರಣದ ಸ್ಫುರಣೆಯಿಂದ ಕಾಲದ ಕೈಯಲ್ಲಿ ಅನೇಕ ಸ್ಥಿತ್ಯಂತರಗಳಾದರೂ ದೇಶದ ಪರಂಪರೆಗೆ ಮುಕ್ಕಾಗದಂತೆ ಉಳಿದು ಬಂದಿದೆ. ಇಂತಹ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆದಿರುವ ಶರನ್ನವರಾತ್ರಿ ಉತ್ಸವದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

‘ಸಂಸ್ಕಾರ ಮತ್ತು ಸಂಸ್ಕೃತಿ ಸಮಾಜದ ಆಧಾರ ಸ್ತಂಭಗಳು. ಪ್ರೀತಿ ಮತ್ತು ಸೇವೆ ದೇಶದ ಭವ್ಯ ಪರಂಪರೆಯನ್ನು ಅನೂಚಾನವಾಗಿ ಮುನ್ನಡೆಸುವ ಚಕ್ರಗಳಾಗಿವೆ. ಆಚರಣೆಗಳು ಜನರನ್ನು ಒಂದುಗೂಡಿಸುತ್ತವೆ. ಸೌಹಾರ್ದದಿಂದ ಸಹಕಾರ ದೊರೆತರೆ ಅದರಿಂದ ಸಾಧನೆ ಸಿದ್ಧಿಸುತ್ತದೆ’ ಎಂದು ತಿಳಿಸಿದರು.

ಉಡುಪಿ ಪೇಜಾವರ ಪೀಠದ ಪೀಠಾಧಿಪತಿ ವಿಶ್ವಪ್ರಸನ್ನ ಸ್ವಾಮೀಜಿ ಮಾತನಾಡಿ, ‘ಮಾನವ ಜನ್ಮ ಪಂಚ ಮಹಾ ಋಣಗಳಿಂದ ಬಾಧಿತವಾಗಿದೆ. ಅವುಗಳನ್ನು ನಿವಾರಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ತಾನು ಮತ್ತು ತನ್ನ ನೆಲೆಯನ್ನು ಅರಿತು ಪವಿತ್ರ ನರಜನ್ಮವನ್ನು ದಯಪಾಲಿಸಿದ ಪರಮಾತ್ಮನಿಗೆ ಋಣಿಯಾಗಿ ಸಮಾಜದ ಸೇವೆ ಸಲ್ಲಿಸಿದರೆ ಪಂಚ ಋಣಗಳೆಂಬ ಮಹಾ ಸೂತಕಗಳು ಪರಿಹಾರವಾಗುತ್ತವೆ’ ಎಂದರು.

ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ಭಗವಾನ್ ಸತ್ಯಸಾಯಿ ಬಾಬಾ ಅವರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಒಂದು ಕ್ರಾಂತಿಯ ಮಾದರಿಯಲ್ಲಿದೆ. ನಿಸ್ವಾರ್ಥ ಪರರಾಗಿ ಮಾನವ ಸೇವೆಯನ್ನು ಮಾಡುತ್ತಾ ಮಾಧವನ ಅನುಗ್ರಹ ಪಡೆಯಲು ಇದು ಒಂದು ಪಥವಾಗಿದೆ. ನಾವು ಸಲ್ಲಿಸುವ ಕಿಂಚಿತ್ ಸೇವೆಯು ನಮ್ಮ ಬದುಕಿನಲ್ಲಿ ಪುಣ್ಯ ಸಂಚಯನ ಮಾಡಲಿದೆ’ ಎಂದು ಹೇಳಿದರು.

ಸತ್ಯಸಾಯಿ ಬಾಬಾ ಅವರ ಸಂದೇಶ ವಾಹಕ ಮಧುಸೂದನ ಸಾಯಿ ಮಾತನಾಡಿ, ‘ಭಾರತವು ತ್ಯಾಗ, ಪುಣ್ಯ ಮತ್ತು ತಪೋ ಭೂಮಿ. ಇಲ್ಲಿನ ಪ್ರತಿಯೊಂದು ಕಾರ್ಯ, ಕ್ರಮ, ಆಚರಣೆ, ಆಚಾರ- ವಿಚಾರಗಳಿಗೂ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ನಮ್ಮ ಭವ್ಯ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೆ ದಾಟಿಸುವ ಸಲುವಾಗಿಯೇ ಹಬ್ಬಹರಿದಿನಗಳು ಆಚರಣೆಯಲ್ಲಿವೆ’ ಎಂದು ತಿಳಿಸಿದರು.

ಹೈದರಾಬಾದಿನ ಗಣೇಶ ಪೀಠದ ಮುಖ್ಯಸ್ಥ ವಿದ್ಯಾ ಗಣೇಶಾನಂದ ಸ್ವಾಮೀಜಿ, ನವದೆಹಲಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿ ಕೋಟೇಶ್ವರ ಶರ್ಮಗಾರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.