ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಆಸರೆಯಿಲ್ಲದೆ ಬದುಕು ಕಷ್ಟ: ಮಕ್ಕಳ ನೋವು

ಕೋವಿಡ್‌ನಿಂದ ಮೃತಪಟ್ಟ ಎನ್‌.ರಾಘವೇಂದ್ರ ಕುಮಾರ್
Last Updated 16 ಜೂನ್ 2021, 5:39 IST
ಅಕ್ಷರ ಗಾತ್ರ

ಗೌರಿಬಿದನೂರು: ಬಾಲ್ಯದಿಂದಲೂ ಅಪ್ಪನ ದುಡಿಮೆ, ಅಮ್ಮನ ಆಸರೆಯಿಂದ ಕಷ್ಟದ ನಡುವೆಯೂ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೆವು. ಕುಟುಂಬಕ್ಕೆ ಬೆನ್ನೆಲುಬಾಗಿದ್ದ ಅಪ್ಪನ ಅಗಲಿಕೆಯಿಂದ ಭವಿಷ್ಯದ ಬಗ್ಗೆ ಭರವಸೆಯೇ ಇಲ್ಲ ಎಂದು ನೋವು ತೋಡಿಕೊಳ್ಳುವರು ನಿಹಾರಿಕಾ ಮತ್ತು ಉಜ್ವಲ.

ಗೌರಿಬಿದನೂರಿನಲ್ಲಿ 15 ವರ್ಷಗಳಿಂದ ಬಾಡಿಗೆ ಅಂಗಡಿಯಲ್ಲಿ ಹೋಟೆಲ್‌ ನಡೆಸುತ್ತ ನಿತ್ಯ 200ಕ್ಕೂ ಹೆಚ್ಚು ಮನೆಗಳಿಗೆ ಹಾಲು ಪೂರೈಸುತ್ತ ಕುಟುಂಬವನ್ನು ಮುನ್ನಡೆಸುತ್ತಿದ್ದ ಎನ್‌.ರಾಘವೇಂದ್ರ ಕುಮಾರ್ ಕೋವಿಡ್ ಎರಡನೇ ಅಲೆಯ ಸೋಂಕಿನಿಂದ ಮೃತರಾಗಿದ್ದಾರೆ. ರಾಘವೇಂದ್ರ ಕುಮಾರ್ ಅವರ ಇಬ್ಬರು ಹೆಣ್ಣು ಮಕ್ಕಳು ಈಗ ದಿಕ್ಕು ತೋಚದೆ ಗೋಳಿಡುತ್ತಿದ್ದಾರೆ.

ಏ.8 ರಂದು ಅಪ್ಪನಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಕೂಡಲೇ ಸ್ಥಳೀಯ ಸರ್ಕಾರಿ ‌ಆಸ್ಪತ್ರೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದರು. ಆರೋಗ್ಯದಲ್ಲಿ ಏರುಪೇರಾದ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದೇವು. ಅಪ್ಪ ಹುಷಾರಾಗಿ ಮನೆಗೆ ಬರುತ್ತಾರೆ ಎಂದುಕೊಂಡಿದ್ದೆವು. ನಮಗೆ ಅಪ್ಪನ ನಿಧನ ಸುದ್ಧಿ ಕೇಳಿ ಬದುಕು ಕಮರಿಹೋಯಿತು.

ಅಪ್ಪನ ಅಗಲಿಕೆಯಿಂದ ಕಂಗಾಲಾಗಿರುವ ನಾವು ಎಂದಿನಂತೆ ಹೋಟೆಲ್ ವೃತ್ತಿ ಮಾಡಲು ಕಷ್ಟವಾಗುತ್ತಿದೆ. ನನ್ನ ಶಿಕ್ಷಣ ಮುಗಿದ ಬಳಿಕ ಕೆಲಸಕ್ಕೆ ಸೇರಿ ಅಮ್ಮ ಮತ್ತು 10ನೇ ತರಗತಿ ಓದುತ್ತಿರುವ ತಂಗಿ ಉಜ್ವಲಳನ್ನು ಸಾಕುವ ಜವಾಬ್ದಾರಿ ಹೊತ್ತಿದ್ದೇನೆ ಎನ್ನುತ್ತಾರೆ 2ನೇ ವರ್ಷದ ಅರೆ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಹಿರಿಯ ಪುತ್ರಿ ನಿಹಾರಿಕ.

ಕಷ್ಟದ ದಿನಗಳಲ್ಲಿಯೇ ಶ್ರಮಿಕ ವೃತ್ತಿಯಿಂದ ಬದುಕು ಹಸನು‌ ಮಾಡಿಕೊಂಡಿದ್ದ ನಮಗೆ ಪತಿಯ ಅಗಲಿಕೆಯಿಂದ ಮಕ್ಕಳ‌ ಭವಿಷ್ಯದ ‌ಬಗ್ಗೆ ಚಿಂತೆ ಆಗಿದೆ. ನನ್ನ ಅನಾರೋಗ್ಯದ ನಡುವೆ ಇಬ್ಬರು‌ ಹೆಣ್ಣು ಮಕ್ಕಳಿಗೆ ವ್ಯಾಸಂಗ ಮಾಡಿಸಿ ಅವರ ಬದುಕು ರೂಪಿಸುವುದೇ ದೊಡ್ಡ ಸವಾಲಾಗಿದೆ. ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಅವರು ಇಂದು ನಮ್ಮಿಂದ ದೂರವಾಗಿದ್ದಾರೆ.

ವಿಧಿಯಾಟದಲ್ಲಿ ನಮ್ಮಂತಹ ಬಡ ಕುಟುಂಬಗಳು ನೋವಿನ ಕಡಲಲ್ಲಿ ಮುಳುಗುವ ಪರಿಸ್ಥಿತಿ ನಿಜಕ್ಕೂ ದುರ್ದೈವ. ಕುಟುಂಬ ನಿರ್ವಹಣೆ ಹಾಗೂ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಹಾಗೂ ದಾನಿಗಳ ಸಹಕಾರ
ನಿರೀಕ್ಷಿಸುತ್ತಿದ್ದೇವೆ ಎನ್ನುತ್ತಾರೆ ರಾಘವೇಂದ್ರ ಕುಮಾರ್ ಅವರ ಪತ್ನಿ ಶೋಭಾರಾಣಿ.

ಕೋವಿಡ್ 2ನೇ ಅಲೆಯ ಪರಿಣಾಮವಾಗಿ ಈ ಕುಟುಂಬದ ಬದುಕೇ ಕಷ್ಟಕ್ಕೆ ಸಿಲುಕಿದೆ. ಒಂದು ಕಡೆ ಅನಾರೋಗ್ಯ ಎದುರಿಸುತ್ತಿರುವ ಮನೆಯೊಡತಿ. ಮತ್ತೊಂದು ಕಡೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಹೆಣ್ಣು ಮಕ್ಕಳು ಬದುಕಿನ ದಾರಿ ಕಾಣದೆ ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT