ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 ರೂಪಾಂತರಿ ಜೆಎನ್‌.1 ಸೋಂಕು: ಸಿದ್ಧವಾಗಿವೆ ಹಾಸಿಗೆಗಳು

ಹಳೇ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸೊಲೇಷನ್ ವಾರ್ಡ್
ಡಿ.ಎಂ.ಕುರ್ಕೆ ಪ್ರಶಾಂತ್
Published 24 ಡಿಸೆಂಬರ್ 2023, 6:30 IST
Last Updated 24 ಡಿಸೆಂಬರ್ 2023, 6:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋವಿಡ್–19 ರೂಪಾಂತರಿ ಜೆಎನ್‌.1 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಸರ್ಕಾರ ಸಹ ಕೋವಿಡ್ ನಿಯಂತ್ರಣಕ್ಕೆ ಮತ್ತು ಆ ಕುರಿತು ಪರಾಮರ್ಶಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಸಹ ಜೆಎನ್‌.1 ಸೋಂಕು ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಶನಿವಾರ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ, ಚಿಂತಾಮಣಿ ಮತ್ತಿತರ ಕಡೆಗಳಲ್ಲಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಕೋವಿಡ್‌ ಮೊದಲ ಮತ್ತು ಎರಡನೇ ಅಲೆ ಬಂದಾಗ ನಗರದ ಹಳೇ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಅಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಆಮ್ಲಜನಕ ಘಟಕಗಳನ್ನು ಇಲ್ಲಿ ನಿರ್ಮಿಸಲಾಯಿತು.

ಈಗ ಮತ್ತೆ ಜೆಎನ್.1 ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಹಳೇ ಆಸ್ಪತ್ರೆಯಲ್ಲಿಯೇ ಐಸೋಲೇಷನ್‌ಗೆ ವಾರ್ಡ್‌ಗಳು, ವೆಂಟಿಲೇಟರ್‌ಗಳನ್ನು ಸಿದ್ಧಗೊಳಿಸಲಾಗಿದೆ. ಇಲ್ಲಿ ಐಸೊಲೇಷನ್‌ ಮತ್ತು ವೆಂಟಿಲೇಟರ್ ಸೇರಿದಂತೆ 27 ಹಾಸಿಗೆಗಳು ಸಿದ್ಧವಿವೆ. ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳನ್ನು ಐಸೊಲೇಷನ್‌ಗೆ ಸಿದ್ಧಮಾಡಿಕೊಳ್ಳಲಾಗಿದೆ. ಇದಲ್ಲದೆ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌)ಯಡಿ ಶಿಡ್ಲಘಟ್ಟ ತಾಲ್ಲೂಕಿನ ಜಂಗಮ ಕೋಟೆಯಲ್ಲಿ 30 ಹಾಸಿಗೆ ಸಾಮರ್ಥ್ಯದ ಐಸೊಲೇಷನ್ ವಾರ್ಡ್ ಸಿದ್ಧಗೊಳಿಸಲಾಗಿದೆ. 

‘ಡಿ.21ರಂದು ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳು ಮತ್ತು ಆಸ್ಪತ್ರೆಗಳ ಮೇಲ್ವಿಚಾರಕರ ಸಭೆ ನಡೆಸಲಾಗಿದೆ. ವೈದ್ಯರು ಮತ್ತು ಸಿಬ್ಬಂದಿ ಮಾಸ್ಕ್ ಹಾಕಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಲಾಗಿದೆ. ಶುಕ್ರವಾರ (ಡಿ.22) ಹಳೇ ಜಿಲ್ಲಾ ಆಸ್ಪತ್ರೆಯಲ್ಲಿ ಮಾಕ್ ಡ್ರಿಲ್ ಸಹ ಮಾಡಲಾಗಿದೆ’ ಎಂದು ಡಿಎಚ್‌ಒ ಡಾ.ಎಸ್.ಎಸ್.ಮಹೇಶ್ ಕುಮಾರ್ ತಿಳಿಸಿದರು.

‘ಜ್ವರ, ಕೆಮ್ಮು, ನೆಗಡಿ, ಮೈಕೈನೋವಿನಿಂದ ಬಳಲುತ್ತಿದ್ದರೆ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಹೊರ ರಾಜ್ಯ ಮತ್ತು ವಿದೇಶಗಳಿಂದ ಜಿಲ್ಲೆಗೆ ಬಂದವರಲ್ಲಿ ರೋಗ ಲಕ್ಷಣಗಳು ಕಂಡು ಬಂದಿದ್ದರೆ ಪರೀಕ್ಷೆ ನಡೆಸಲಾಗುವುದು. ಈ ಬಗ್ಗೆ ಈಗಾಗಲೇ ಸಭೆ ನಡೆಸಿ ಆಶಾ ಕಾರ್ಯಕರ್ತೆಯರಿಗೆ ತಿಳಿವಳಿಕೆ ಮೂಡಿಸಿದ್ದೇವೆ ಎಂದು ಹೇಳಿದರು.

‌ಚಿಕ್ಕಬಳ್ಳಾಪುರ ಜಿಲ್ಲೆಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ಸಮೀಪದಲ್ಲಿಯೇ ಇದೆ. ಅಲ್ಲದೆ ಜಿಲ್ಲೆ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದೆ. ಈ ಎಲ್ಲ ಕಾರಣದಿಂದ ಸೋಂಕಿನ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚು ಮುತುವರ್ಜಿವಹಿಸಿದೆ.

ಜಿಲ್ಲೆಯಾದ್ಯಂತ ಚಳಿಯ ಪ್ರಮಾಣ ಹೆಚ್ಚಾಗಿದೆ. ಕೊರೊನಾ ರೂಪಾಂತರ ತಳಿಯಿಂದ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗಿದೆ. ಇದರಿಂದ ಸಹಜವಾಗಿಯೇ ಆರೋಗ್ಯ ಇಲಾಖೆಯವರ ಚಿಂತೆ ಮತ್ತಷ್ಟು ಹೆಚ್ಚಿಸಿದೆ. ಯಾರೇ ಕೆಮ್ಮು, ನೆಗಡಿ, ಶೀತ ಜ್ವರದಿಂದ ಬಳಲುತ್ತಿದ್ದರೆ ತಕ್ಷಣವೇ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಅದರಲ್ಲೂ ಮಕ್ಕಳು, ಹಿರಿಯ ನಾಗರಿಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಆಸ್ಪತ್ರೆಗಳಲ್ಲಿ ಐಸೊಲೇಷನ್ ವಾರ್ಡ್ ಚಿಕ್ಕಬಳ್ಳಾಪುರ ನಗರದ ಹಳೇ ಜಿಲ್ಲಾ ಆಸ್ಪತ್ರೆಯಲ್ಲಿ 20 ಐಸೊಲೇಷನ್ ಹಾಸಿಗೆಗಳು 7 ವೆಂಟಿಲೇಟರ್ ಹಾಸಿಗೆಗಳನ್ನು ಸಿದ್ಧಗೊಳಿಸಲಾಗಿದೆ. ಸೋಂಕಿನ ಪ್ರಕರಣಗಳು ಕಂಡು ಬಂದರೆ ಇಲ್ಲಿ ದಾಖಲಿಸಿಕೊಳ್ಳಲಾಗುವುದು. ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಐಸೊಲೇಷನ್‌ಗೆ 10 ಹಾಸಿಗೆಗಳು ಮತ್ತು ತುರ್ತು ಚಿಕಿತ್ಸೆಗಾಗಿ ಎರಡು ಐಸಿಯು ಹಾಸಿಗೆಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎಸ್.ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT