ಸೋಮವಾರ, ಮಾರ್ಚ್ 27, 2023
22 °C
ಚಿಕ್ಕಬಳ್ಳಾಪುರ ವೈಶಿಷ್ಟ್ಯ ಪದಗಳಲ್ಲಿ ಬಣ್ಣಿಸಲಾಗದು–ಸಮ್ಮೇಳನಾಧ್ಯಕ್ಷೆ ಸರಸಮ್ಮ

ಚಿಕ್ಕಬಳ್ಳಾಪುರ: ಸಡಗರದ ತಾಲ್ಲೂಕು ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದಲ್ಲಿ ಭಾನುವಾರ ಚಿಕ್ಕಬಳ್ಳಾಪುರ ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ನಂದಿ ರಂಗ ಮಂದಿರದ ಬಳಿ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಾಯಿತು. 

ನಂತರ ಇಲ್ಲಿಂದಲೇ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಯಿತು. ಬಿಬಿ ರಸ್ತೆಯ ಮೂಲಕ ಕಾರ್ಯಕ್ರಮ ನಡೆಯುವ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಸಾಗಿತು. ಈ ವೇಳೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ತುಂಬಿದ್ದವು. ಕಸಾಪ ಪದಾಧಿಕಾರಿಗಳು ನೃತ್ಯ ಸಹ ಮಾಡಿದರು.

ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹ ಹೆಜ್ಜೆ ಹಾಕಿದರು. ಪೇಟೆತೊಟ್ಟ ಸಮ್ಮೇಳನಾಧ್ಯಕ್ಷೆ ಎ.ಸರಸಮ್ಮ ಅವರನ್ನು ಜೀಪಿನಲ್ಲಿ ಮೆರವಣಿಗೆಯಲ್ಲಿ ನಂದಿ ತಿಮ್ಮಣ್ಣ ಪ್ರವೇಶ ದ್ವಾರದ ಮೂಲಕ ಕುಮುದೇಂದು ಮಹರ್ಷಿ ಪ್ರಧಾನ ವೇದಿಕೆಗೆ ಕರೆ ತರಲಾಯಿತು. 

ಸಮ್ಮೇಳನಾಧ್ಯಕ್ಷೆ ಎ.ಸರಸಮ್ಮ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ವೈಶಿಷ್ಟ್ಯಗಳನ್ನು ಪದಗಳಲ್ಲಿ ಬಣ್ಣಿಸಲು ಆಗದು. ಜಿಲ್ಲೆಯಲ್ಲಿ ಪೌರಾಣಿಕ ಸ್ಥಳಗಳು ವಿಶೇಷವಾಗಿವೆ. ಪ್ರವಾಸಿ ತಾಣಗಳು ಶಿಲ್ಪಕಲೆ, ಸಾಹಿತ್ಯ, ಕಲೆಗಳ ತವರೂರು ಚಿಕ್ಕಬಳ್ಳಾಪುರ ಎಂದು ಹೇಳಿದರು.

ಸಪ್ತನದಿಗಳು ಹರಿಯುವ ಬಯಲು ಸೀಮೆ ಬರಪೀಡಿತವಾಗಿತ್ತು. ರೈತರು ನಾನಾ ಕಷ್ಟಗಳನ್ನು ಅನುಭವಿಸುತ್ತಿದ್ದರು. ಆದರೆ ಈಗ ಮಳೆಯು ಕಾಲಕಾಲಕ್ಕೆ ಸುರಿದು ಉತ್ತಮ ಬೆಳೆ ಆಗುತ್ತಿದೆ. ರೈತರ ಮುಖದಲ್ಲಿ ನಗು ಇದೆ ಎಂದರು.

  ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ, ಬೇರೆ ಭಾಷಿಕರು, ಸರ್ವ ಜನಾಂಗದವರೂ ರಾಜ್ಯದಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ. ಕೋಡಿರಂಗಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಒಂದು ದೊಡ್ಡ ಜನಪರ ಪರಂಪರೆಯನ್ನು ಒಳಗೊಂಡಿದೆ. ಶ್ರಮವನ್ನು, ಬೆವರನ್ನು ಸುರಿಸಿದ ಪರಂಪರೆ ಇದೆ. ಸತ್ಯ, ನ್ಯಾಯ ಮತ್ತು ಸಮಾನತೆಗೆ ಹೆಸರಾದ ಸಾಹಿತ್ಯವಾಗಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದಕ್ಕೆ ಒಂದು ದನಿಯಾಗಿ ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸ ನೀಡಿದ ವಿ.ಜಯಪ್ರಕಾಶ್ ಮಾತನಾಡಿ, ನಾವು ಕನ್ನಡ ಬೆಳೆಸುತ್ತೇವೆ ಎನ್ನುವ ಪ್ರತಿಜ್ಞೆ ಮಾಡಬೇಕು. ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಮಕ್ಕಳಿಗೆ ಮಾಡಿಸಬೇಕು. ಪಠ್ಯಪುಸ್ತಕಗಳನ್ನು ಪರೀಕ್ಷಾ ದೃಷ್ಟಿಯಿಂದ ಮಾತ್ರ ಬಳಸುತ್ತಿದ್ದಿರಿ‌. ಇದರಿಂದ ಮಾತ್ರವೇ ಕನ್ನಡ ಬೆಳವಣಿಗೆ ಸಾಧ್ಯವೇ ಎನ್ನುವ ಬಗ್ಗೆ ಚಿಂತಿಸಬೇಕು ಎಂದರು.

ಕನ್ನಡ ರೇಡಿಯೊ ಆಲಿಸಿದರೆ ಕನ್ನಡ ಪದಗಳ ಬಗ್ಗೆ ತಿಳಿಯಲು ಮತ್ತು ಭಾಷೆಯ ಬಗ್ಗೆ ತಿಳಿವಳಿಕೆ ಮೂಡಲು ಸಹಾಯಕವಾಗುತ್ತದೆ. ಮಕ್ಕಳು ನಮ್ಮ ಮಾತುಗಳನ್ನು ಆಲಿಸುತ್ತವೆ. ಆ ಮೂಲಕ ಅಭಿರುಚಿ ಮತ್ತು ಭಾಷೆ ಬೆಳೆಯುತ್ತದೆ ಎಂದು ಹೇಳಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಆರ್.ರೆಡ್ಡಿ, ದಾಸ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಪುರದಗಡ್ಡೆ ಕೃಷ್ಣಪ್ಪ, ಪುಸ್ತಕ ಪ್ರಕಾಶಕ ಆರ್.ಶ್ರೀನಿವಾಸ್, ರಾಜೇಶ್, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕನ್ನಡಾಭಿಮಾನಿಗಳು ಹಾಜರಿದ್ದರು. ಕೆ.ಎಂ.ರೆಡ್ಡಪ್ಪ ಸ್ವಾಗತಿಸಿದರು.

**

ಐದು ನಿರ್ಣಯ

ಸಮ್ಮೇಳನದ ಸಮಾರೋಪದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ಐದು ನಿರ್ಣಯಗಳನ್ನು ಮಂಡಿಸಿದರು.  ತಾಲ್ಲೂಕಿನ  ಕೆರೆಗಳ ಶುದ್ಧೀಕರಣ ಮತ್ತು ಅಭಿವೃದ್ಧಿ, ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ, ಹೂ ಮತ್ತು ದ್ರಾಕ್ಷಿ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಕನ್ನಡ ಶಾಲೆಗಳ ಸಬಲೀಕರಣ ಮತ್ತು ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ಕನ್ನಡಿಗರನ್ನು ನೇಮಿಸಬೇಕು ಎಂದು ನಿರ್ಣಯಕೈಗೊಳ್ಳಲಾಯಿತು. 

***

ಅಧಿಕಾರಿಗಳ ಗೈರಿಗೆ ಬೇಸರ

ತಾಲ್ಲೂಕು ಸಮ್ಮೇಳನಕ್ಕೆ ಆಹ್ವಾನ ಪತ್ರಿಕೆಯಲ್ಲಿ ಅಧಿಕಾರಿಗಳ ಹೆಸರನ್ನು ಮುದ್ರಿಸಲಾಗಿತ್ತು. ಆದರೆ ಅಧಿಕಾರಿಗಳು ಮಾತ್ರ ಸಮ್ಮೇಳನಕ್ಕೆ ಗೈರಾಗಿದ್ದರು. ಇದು ಸಮ್ಮೇಳನದ ಸಂಘಟಕರು ಮತ್ತು ಕಸಾಪದ ಪದಾಧಿಕಾರಿಗಳ ಬೇಸರಕ್ಕೆ ಕಾರಣವಾಯಿತು. 

ತಮ್ಮ ಭಾಷಣದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ, ‘ನಮಗೆ ಕೆಲಸಗಳನ್ನು ಮಾಡಿಕೊಡಲು ಮತ್ತು ಸಹಕಾರ ನೀಡಲು ಜನರು ಇದ್ದಾರೆ. ಆದರೆ ಇಂತಹ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಬನ್ನಿ ಎನ್ನುವುದು ನಮ್ಮ ಕೋರಿಕೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು