ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಜಾಗೃತಿ ಸಮಿತಿ ರಚನೆಗೆ ಗ್ರಹಣ

ಗಡಿ ಜಿಲ್ಲೆಯಲ್ಲಿ ಕನ್ನಡ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿನ್ನಡೆ
ಡಿ.ಎಂ.ಕುರ್ಕೆ ಪ್ರಶಾಂತ್
Published 30 ನವೆಂಬರ್ 2023, 6:44 IST
Last Updated 30 ನವೆಂಬರ್ 2023, 6:44 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾಗಿದೆ. ಆದರೆ ಇಂದಿಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕನ್ನಡ ಜಾಗೃತಿ ಸಮಿತಿಗಳು ರಚನೆಯಾಗಿಲ್ಲ. ವಿಶೇಷವಾಗಿ ಇದು ಗಡಿ ಜಿಲ್ಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳ ಅನುಷ್ಠಾನದ ವಿಚಾರದಲ್ಲಿ ಪರಿಣಾಮಗಳನ್ನು ಬೀರುತ್ತಿದೆ. ಜಾಗೃತ ಸಮಿತಿಗಳು ರಚನೆ ಆಗಬೇಕು ಎನ್ನುವ ಒತ್ತಾಯ ಕನ್ನಡ ಸಂಘಟನೆಗಳು, ನಾಡು, ನುಡಿ ಪರವಾದ ಹೋರಾಟಗಾರರದ್ದಾಗಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಸರ್ಕಾರದ ಭಾಷಾ ನೀತಿಯ ಅನುಷ್ಠಾನದಲ್ಲಿ ಜನರೂ ಪಾಲ್ಗೊಳ್ಳುವಂತೆ ನೋಡಿಕೊಳ್ಳುವ ಉದ್ದೇಶದಿಂದ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಕನ್ನಡ ಜಾಗೃತಿ ಸಮಿತಿಗಳು ರಚಿಸಲಾಗುತ್ತದೆ. 

ಈ ಹಿಂದಿನಿಂದಲೂ ಸಮಿತಿಗಳು ಮರೆವಿನ ಕಾಯಿಲೆಗೆ ತುತ್ತಾಗಿವೆ. ತಮ್ಮ ಕರ್ತವ್ಯ ಮತ್ತು ಅಸ್ತಿತ್ವವನ್ನೇ ಮರೆತಿವೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರು ನೇಮಕವಾಗಿಲ್ಲ. ಆದ ಕಾರಣ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕನ್ನಡ ಜಾಗೃತ ಸಮಿತಿಗಳ ರಚನೆಗೆ ಗ್ರಹಣ ಬಡಿದಿದೆ. 

ರಾಜ್ಯ ಸರ್ಕಾರ 1997ರಲ್ಲಿ ಕನ್ನಡ ಜಾಗೃತಿ ಸಮಿತಿಗಳ ಪರಿಕಲ್ಪನೆಗೆ ಚಾಲನೆ ನೀಡಿತ್ತು. ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ), ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ, ನಾಮ ನಿರ್ದೇಶನಗೊಂಡ ಅಧಿಕಾರೇತರ ಸದಸ್ಯರು (ಐದು ಜನ), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಸದಸ್ಯರಾಗಿರುತ್ತಾರೆ.

ತಾಲ್ಲೂಕು ಕನ್ನಡ ಜಾಗೃತಿ ಸಮಿತಿಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಅಧ್ಯಕ್ಷರಾಗಿರುತ್ತಾರೆ. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ನಾಮನಿರ್ದೇಶನಗೊಳ್ಳುವ ಅಧಿಕಾರೇತರ ಸದಸ್ಯರು (ಐದು ಜನ), ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸದಸ್ಯರಾಗಿರುತ್ತಾರೆ.

ಅದರಂತೆ ಲೆಕ್ಕ ಹಾಕಿದರೆ ಜಿಲ್ಲೆಯಲ್ಲಿ ಆರು ಕನ್ನಡ ಜಾಗೃತಿ ಸಮಿತಿಗಳು ಸಕ್ರಿಯವಾಗಿರಬೇಕಿತ್ತು. ದುರಂತವೆಂದರೆ ಒಂದೇ ಒಂದು ಸಮಿತಿ ಕೂಡ ಅಸ್ತಿತ್ವದಲ್ಲಿ ಇಲ್ಲ.   

ನೆರೆಯ ಆಂಧ್ರಪ್ರದೇಶಕ್ಕೆ ಗಡಿ ಹಂಚಿಕೊಂಡಿರುವ ಜಿಲ್ಲೆಯ ಮೇಲೆ ತೆಲುಗು ಭಾಷೆಯ ದಟ್ಟ ಪ್ರಭಾವ ಇದೆ. ಇಂತಹ ನೆಲದಲ್ಲಿ ಕನ್ನಡದ ವಾತಾವರಣ ಕಾಪಿಟ್ಟುಕೊಳ್ಳುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳಷ್ಟೇ, ಕನ್ನಡ ಜಾಗೃತಿ ಸಮಿತಿಗಳ ಮೇಲಿದೆ 

ಪ್ರತಿ ಕನ್ನಡ ಜಾಗೃತಿ ಸಮಿತಿಗಳು ವರ್ಷದಲ್ಲಿ ಮೂರು ತಿಂಗಳಿಗೊಮ್ಮೆ ಒಂದರಂತೆ ವಾರ್ಷಿಕವಾಗಿ ನಾಲ್ಕು ಸಭೆಗಳನ್ನು ನಡೆಸಬೇಕು. ಆಡಳಿತದಲ್ಲಿ ಕನ್ನಡ ಯಾವುದೇ ಕಚೇರಿಯಲ್ಲಿ ಸಮರ್ಪಕವಾಗಿ ಬಳಕೆಯಾಗದೆ ಇರುವುದು ತಿಳಿದು ಬಂದಾಗ ಆ ವಿಚಾರವನ್ನು ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತಂದು, ನಿಗದಿಪಡಿಸಿದ ದಿನಾಂಕದಂದು ಅವರೊಂದಿಗೆ ಪರಿಶೀಲನೆಗೆ ಹೋಗುವ ಕೆಲಸವನ್ನು ಸಮಿತಿ ಸದಸ್ಯರು ಮಾಡಬೇಕು.  

ಬ್ಯಾಂಕ್‌ಗಳಲ್ಲಿ ಕರಾರು ಪತ್ರ, ಸಾಲದ ಅರ್ಜಿಗಳು, ರಸೀದಿಗಳು ಯಾವ ಭಾಷೆಯಲ್ಲಿ ಬಳಕೆಯಾಗುತ್ತಿದೆ. ನಗರದಲ್ಲಿ ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಯಾಗುತ್ತಿದೆಯೇ–ಹೀಗೆ ಕನ್ನಡ ಭಾಷೆಯ ವಿಚಾರವಾಗಿ ಸಮಿತಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು.

ಈ ಹಿಂದೆ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಗೆ 2017ರ ಜುಲೈನಲ್ಲಿ ಮತ್ತು ಟಿ.ಎಸ್.ನಾಗಾಭರಣ ಅಧ್ಯಕ್ಷರಾಗಿದ್ದ ವೇಳೆ 2022ರ ಆಗಸ್ಟ್ 17ರಂದು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಿದ್ದು ಬಿಟ್ಟರೆ ಈವರೆಗೆ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ಒಂದೇ ಒಂದು ಚಟುವಟಿಕೆಯನ್ನು ಜಾಗೃತಿ ಸಮಿತಿಗಳು ಪರಿಣಾಮಕಾರಿಯಾಗಿ ನಡೆಸಿದ ಉದಾಹರಣೆಗಳಿಲ್ಲ.

ಗಡಿಭಾಗದ ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಲಿಯುವ ಮಕ್ಕಳೇ ಇಲ್ಲದಂತಹ ಸ್ಥಿತಿ ಇದೆ. ವಿದ್ಯಾರ್ಥಿಗಳಲ್ಲಿ ಕನ್ನಡ ಓದುವ, ಬರೆಯುವವರ ಪ್ರಮಾಣ ಕುಸಿಯುತ್ತಿದೆ. ಈ ಬಗ್ಗೆ ಪ್ರಾಧಿಕಾರ ಗಮನ ಹರಿಸಬೇಕಿತ್ತು. ಕನ್ನಡ ಬಳಕೆ ಹೆಚ್ಚಿಸುವ ಕೆಲಸ ಮಾಡಬೇಕಿತ್ತು. ಆ ಕೆಲಸ ನಡೆಯಲೇ ಇಲ್ಲ ಎನ್ನುವುದು ಪ್ರಜ್ಞಾವಂತರ ಅಳಲು.

‘ನಾನು ಈ ಹಿಂದೆ ಜಿಲ್ಲಾ ಸಮಿತಿ ಸದಸ್ಯನಾಗಿದ್ದೆ. ಕಾಟಾಚಾರಕ್ಕೆ ಸದಸ್ಯ ಸ್ಥಾನ ನೀಡಿದ್ದರು. ನಾವು ಹೇಳಿದ್ದನ್ನು ಒಬ್ಬರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಜಾಗೃತ ಸಮಿತಿಗಳು ಕಾಟಾಚಾರಕ್ಕೆ ಎನ್ನುವಂತೆ ಇರುತ್ತವೆ’ ಎಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಮಾಜಿ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು. 

‘ಸರ್ಕಾರ ಸಮಿತಿ ರಚನೆಗೆ ಮನಸ್ಸು ಮಾಡಲಿ’ ನಾವು ಜಾಗೃತ ಸಮಿತಿ ಸದಸ್ಯರಾಗಿದ್ದ ವೇಳೆ ಬ್ಯಾಂಕುಗಳಿಗೆ ಭೇಟಿ ನೀಡಿ ಕನ್ನಡದ ಬಳಕೆ ಮಾಡುವಂತೆ ತಿಳಿಸುತ್ತಿದ್ದೆವು. ಜಾಹೀರಾತು ಫಲಕ ಅಂಗಡಿಗಳ ನಾಮಫಲಕದಲ್ಲಿ ಕನ್ನಡ ಇಲ್ಲದಿದ್ದರೆ ಈ ಬಗ್ಗೆ ತಿಳಿಸುತ್ತಿದ್ದೆವು. ಈಗ ಜಾಗೃತ ಸಮಿತಿ ರಚನೆ ಆಗಿಲ್ಲ. ಸರ್ಕಾರ ಸಮಿತಿ ರಚನೆಗೆ ಮನಸ್ಸು ಮಾಡಬೇಕು ಎಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಮಾಜಿ ಸದಸ್ಯ ಎಸ್‌.ಎನ್.ಅಮೃತಕುಮಾರ್ ತಿಳಿಸುವರು. ಗಡಿ ಜಿಲ್ಲೆಗಳಲ್ಲಿ ಜಾಗೃತ ಸಮಿತಿಗಳ ಅಗತ್ಯ ಹೆಚ್ಚಿದೆ. ಆದ್ದರಿಂದ ಸರ್ಕಾರ ಆದಷ್ಟು ಬೇಗ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸಬೇಕು. ಆ ಮೂಲಕ ಜಾಗೃತ ಸಮಿತಿ ರಚನೆಗಳ ರಚನೆಗೆ ಮುನ್ನುಡಿ ಬರೆಯಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT