ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಸಮಾವೇಶಗಳ ಅಬ್ಬರ, ಕೂಲಿ ಕಾರ್ಮಿಕರಿಗೆ ಬರ, ರೈತರಿಗೆ ಸಂಕಷ್ಟ

Last Updated 26 ಮಾರ್ಚ್ 2023, 6:13 IST
ಅಕ್ಷರ ಗಾತ್ರ

ಗೌರಿಬಿದನೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಸಮಾವೇಶ, ಸಮಾರಂಭ ಮತ್ತು ಸಭೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿವೆ.

ಕ್ಷೇತ್ರದಲ್ಲಿ ನಡೆಯುತ್ತಿರುವ ಸಾಲು-ಸಾಲು ಪ್ರಚಾರಗಳು ಮತ್ತು ಸಮಾರಂಭಗಳಿಗೆ ಸ್ಥಳೀಯ ಮುಖಂಡರು ಗ್ರಾಮೀಣ ಪ್ರದೇಶದ ಜನರನ್ನು ಕರೆದೊಯ್ಯುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರು ಸಿಗದಂತಾಗಿದೆ. ಇದು ರೈತಾಪಿ ವರ್ಗ ಮತ್ತು ಮೇಸ್ತ್ರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಸಮಾರಂಭ, ಸಮಾವೇಶಗಳಲ್ಲಿ ಜನಬೆಂಬಲ ಮತ್ತು ಶಕ್ತಿ ಪ್ರದರ್ಶನಕ್ಕಾಗಿ ರಾಜಕೀಯ ನಾಯಕರು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನೇ ಆಶ್ರಯಿಸಿದ್ದಾರೆ.

ಸಮಾವೇಶದ ದಿನಗಳಂದು ಬೂತ್ ಮಟ್ಟದ ಕಾರ್ಯಕರ್ತರು ಕೂಲಿ ಕೆಲಸಕ್ಕೆ ತೆರಳುವ ಗ್ರಾಮಗಳ ಮಹಿಳೆ ಮತ್ತು ಪುರುಷರನ್ನು ತಡೆದು ಅವರಿಗೆ ದಿನಕ್ಕೆ ₹200-₹500 ಹಣ ನೀಡಿ ತಮ್ಮ ರಾಜಕೀಯ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿದ್ದಾರೆ. ಜತೆಗೆ ಮಹಿಳೆಯರು ಮತ್ತು ಪುರಷರಿಗೆ ಸೀರೆ, ಬಳೆ, ಪಂಚೆ, ಕುಕ್ಕರ್, ಮದ್ಯ, ಮಾಂಸ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡುವುದಾಗಿ ಆಮಿಷ ಒಡ್ಡುತ್ತಿದ್ದಾರೆ.

ನಿತ್ಯ ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಿಗೆ ಸಿಮೆಂಟ್ ಕೆಲಸ, ವೆಲ್ಡಿಂಗ್, ಮರಗೆಲಸ, ಪೇಂಟಿಂಗ್, ಟೈಲ್ಸ್ ಜೋಡಣೆ, ಹಾರ್ಡ್ ವೇರ್ ಅಂಗಡಿ, ತರಕಾರಿ ಮತ್ತು ಹಣ್ಣು ಸರಬರಾಜು, ರೈಸ್‌ ಮಿಲ್‌ಗಳು, ಇಟ್ಟಿಗೆ ಕಾರ್ಖಾನೆಗಳು, ಹಮಾಲಿ ಕೆಲಸ, ತರಕಾರಿ, ತರಕಾರಿ ಮತ್ತು ಹಣ್ಣು ಕೀಳುವುದು, ಔಷಧ ಸಿಂಪಡಣೆ, ರೇಷ್ಮೆ ಸಾಕಾಣಿಕೆ, ಕಳೆ ತೆಗೆಯುವುದು, ಹೂವು ಬಿಡಿಸುವುದು, ಬೆಳೆಗಳಿಗೆ ಕಟಾವಿಗೆ ಕೂಲಿ ಕಾರ್ಮಿಕರೇ ಸಿಗದಂತಾಗಿದೆ.

ಕಾರ್ಮಿಕರು ಸಿಗದೆ ಹೈರಾಣು: ಇದರಿಂದ ನಗರ ಪ್ರದೇಶಗಳಲ್ಲಿ ಮೇಸ್ತ್ರಿಗಳು ಮತ್ತು ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದವರು ಕಾರ್ಮಿಕರು ಸಿಗದೆ ಹೈರಾಣಾಗುತ್ತಿದ್ದು, ರಾಜಕೀಯ ‌ನಾಯಕರ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ‌. ವಾರದಲ್ಲಿ ಮೂರ್ನಾಲ್ಕು ದಿನಗಳ ಕಾಲ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಕಾರ್ಮಿಕರು ಮನೆಯಲ್ಲಿದ್ದರೂ ಕೂಲಿ ಕೆಲಸಕ್ಕೆ ಹೋಗುತ್ತಿಲ್ಲ. ರಾಜಕೀಯ ಮುಖಂಡರು ಮನೆಬಾಗಿಲಿಗೆ ಬಂದು ಹಬ್ಬದ ಉಡುಗೊರೆಗಳನ್ನು ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಹಿಡಿದು ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಪೂರಕವಾಗಿ ಪ್ರತಿ ತಿಂಗಳಿನಲ್ಲಿ ಕನಿಷ್ಠ ಎರಡು ಹಬ್ಬ ಆಚರಿಸಲಾಗುತ್ತಿದ್ದು, ಪಕ್ಷಗಳ ಮುಖಂಡರು ಮತ್ತು ಸಮಾಜ ಸೇವಕರು ಚುನಾವಣಾ ಪ್ರಚಾರಕ್ಕಾಗಿ ಗ್ರಾಮಕ್ಕೆ ಭೇಟಿ‌ ನೀಡಿ ಮತದಾರರ ‌ಮನವೊಲಿಕೆಗೆ ಸೀರೆ, ಪಂಚೆ, ಕುಕ್ಕರ್, ಕಿಚನ್ ಸೆಟ್, ಆಹಾರ ಕಿಟ್, ಹಣ ಸೇರಿದಂತೆ ಇತರ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಇದರಿಂದಾಗಿ ಚುನಾವಣೆ ಮುಗಿಯುವವರೆಗೆ ಕೂಲಿ ಕೆಲಸಕ್ಕೆ ಹೋಗುವುದೇ ಅನುಮಾನವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

*
ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ
ಒಂದು ತಿಂಗಳಿನಿಂದ ಜಮೀನಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಸ್ಥಳೀಯ ಕೂಲಿ ಕಾರ್ಮಿಕರನ್ನು ಹುಡುಕುವುದೇ ದೊಡ್ಡ ಸಾಹಸವಾಗಿದೆ. ಚುನಾವಣೆಗಳು ಮುಗಿಯುವವರೆಗೂ ರೈತಾಪಿ ವರ್ಗದವರಿಗೆ ಸಂಕಷ್ಟ ತಪ್ಪಿದ್ದಲ್ಲ. ಆದರೂ ಕೂಲಿ ಕಾರ್ಮಿಕರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡುತ್ತಿರುವ ರಾಜಕೀಯ ನಾಯಕರು ಗೆದ್ದ ಬಳಿಕ ಕಾರ್ಮಿಕರತ್ತ ತಿರುಗಿಯೂ ನೋಡುವುದಿಲ್ಲ.
–ದೇವರಾಜಪ್ಪ, ಕೃಷಿಕ

*
ದಿನದ ಕೂಲಿ ಸಿಗುತ್ತೆ ಅಷ್ಟೇ
ವರ್ಷದ 360 ದಿನಗಳೂ ಕೂಲಿ ಮಾಡುವುದೇ ನಮ್ಮ ಕಾಯಕ. ಇದರ ನಡುವೆ ಪ್ರತೀ 5 ವರ್ಷಕ್ಕೊಮ್ಮೆ ಬರುವ ಚುನಾವಣೆ ವೇಳೆ ನಾಯಕರು ಮನೆ ಬಾಗಿಲಿಗೆ ಬಂದು ಉಡುಗೊರೆ ಕೊಡುತ್ತಿದ್ದಾರೆ. ಜತೆಗೆ ಹಣ ಕೊಟ್ಟು ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದಾರೆ. ರಾಜಕೀಯ ನಾಯಕರಿಗೆ ಕಾರ್ಯಕ್ರಮ ಯಶಸ್ವಿಯಾಗುತ್ತವೆಯೋ ಇಲ್ಲವೊ ಗೊತ್ತಿಲ್ಲ. ಆದರೆ, ನಮಗೆ ಒಂದು ದಿನದ ಕೂಲಿ ಹಣ ಸಿಗುತ್ತದೆ.
–ತಿಪ್ಪಣ್ಣ, ಕೂಲಿ ಕಾರ್ಮಿಕ

*
ಒಬ್ಬ ಪೇಂಟರ್ ಸಿಗಲಿಲ್ಲ!
ಮನೆಗೆ ಬಣ್ಣ ಬಳಿಸಲು 15 ದಿನಗಳಿಂದ ಕನಿಷ್ಠ ಒಬ್ಬ ಪೇಂಟರ್‌ಗಾಗಿ ಹುಡುಕಿದರೂ, ಸಿಗಲಿಲ್ಲ. ಹೀಗಾಗಿ ನಾನೇ ಕೆಲಸ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ ಕಾರಣ ಪಕ್ಷದ ಮುಖಂಡರು ಮತ್ತು ಸಮಾಜ ಸೇವಕರು ಕೂಲಿ ಕಾರ್ಮಿಕರಿಗೆ ವರದಾನವಾಗಿದ್ದಾರೆ.
–ಎಂ.ಟಿ.ಹನುಮಂತರೆಡ್ಡಿ, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT