ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Assembly Elections 2023| ಹೊಂದಾಣಿಕೆ ರಾಜಕಾರಣ ತಪ್ಪಿಸಿತೇ ಅವಕಾಶ?

ಚಿಕ್ಕಬಳ್ಳಾಪುರ ರಾಜಕಾರಣದ ರಂಗು ಕಡಿಮೆ ಮಾಡಿದ ರಾಜಕೀಯ ಆಲಿಂಗನ
Last Updated 17 ಮಾರ್ಚ್ 2023, 10:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶತ್ರುಗಳೂ ಇಲ್ಲ’–ಈ ಮಾತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಉತ್ತಮವಾಗಿ ಅನ್ವಯವಾಗುತ್ತದೆ. ಯಾರು ಪರಸ್ಪರ ರಾಜಕೀಯವಾಗಿ ಎದುರಾಳಿಗಳಾಗಿ ಹೋರಾಟ ನಡೆಸಿರುತ್ತಾರೊ ಅಂತಿಮವಾಗಿ ‘ಹೊಂದಾಣಿಕೆ ರಾಜಕಾರಣ’ಕ್ಕೆ ಮೊರೆ ಹೋಗಿದ್ದಾರೆ. ಈ ಆಲಿಂಗನ ಕ್ಷೇತ್ರದಲ್ಲಿ ರಾಜಕಾರಣದ ರಂಗು ಕಡಿಮೆಯಾಗಲೂ ಕಾರಣವಾಗಿದೆ.

ಅಧಿಕಾರ, ಆಸ್ತಿಗಳ ರಕ್ಷಣೆ, ಸಮುದಾಯ, ತಾವು ನಂಬಿದ್ದ ಪಕ್ಷದಲ್ಲಿ ಸಮರ್ಥ ನಾಯಕತ್ವದ ಕೊರತೆ–ಹೀಗೆ ನಾನಾ ಕಾರಣಗಳಿಂದ ಹೊಂದಾಣಿಕೆ ರಾಜಕಾರಣ ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಮಟ್ಟದಲ್ಲಿಯೇ ಇದೆ.

ಈ ಹೊಂದಾಣಿಕೆ ರಾಜಕಾರಣದಿಂದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್, ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗುವ ಅವಕಾಶಗಳನ್ನು ಕಳೆದುಕೊಂಡರೇ ಎನ್ನುವ ಚರ್ಚೆ ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಈಗ ಜೋರಾಗಿ ನಡೆದಿದೆ.

‘ಪ್ರಭಾವಿ ನಾಯಕರು’ ಎನಿಸಿದ್ದ ಈ ಇಬ್ಬರು ಮುಖಂಡರು ಈಗ ಸಚಿವ ಡಾ.ಕೆ.ಸುಧಾಕರ್ ಅವರಲ್ಲಿ ‘ನಾಯಕತ್ವ’ ಕಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಿಗಮಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದಿದ್ದಾರೆ.

ಒಂದು ವೇಳೆ ಕೆ.ವಿ.ನವೀನ್ ಕಿರಣ್ ಕಾಂಗ್ರೆಸ್‌ನಲ್ಲಿ ಇದಿದ್ದರೆ ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾಗುವ ಅವಕಾಶಗಳು ಇದ್ದವು. ಕೆ.ವಿ.ನಾಗರಾಜ್ ಜೆಡಿಎಸ್‌ನಲ್ಲಿ ಇದಿದ್ದರೆ ಜೆಡಿಎಸ್ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಿತ್ತು ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ಜನ ಸಾಮಾನ್ಯರು ನುಡಿಯುತ್ತಿದ್ದಾರೆ.

ಬಲಿಜ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಸಿ.ವಿ.ವೆಂಕಟರಾಯಪ್ಪ ಅವರ ಮೊಮ್ಮಗ ನವೀನ್ ಕಿರಣ್ ಅವರನ್ನು ಕ್ಷೇತ್ರದಲ್ಲಿ ಪ್ರಮುಖವಾಗಿರುವ ಬಲಿಜ ಸಮುದಾಯವು ಪಕ್ಷಾತೀತವಾಗಿ ನಾಯಕ ಎಂದು ಒಪ್ಪಿತ್ತು.

ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣ ನವೀನ್ ಕಿರಣ್ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 29,433 ಮತ ಪಡೆದಿದ್ದರು. 2019ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿ ಆಂಜನಪ್ಪ ಪರ ಪ್ರಚಾರ ನಡೆಸಿದ್ದರು. ಈ ಎರಡೂ ಚುನಾವಣೆಗಳಲ್ಲಿ ಡಾ.ಕೆ.ಸುಧಾಕರ್ ವಿರುದ್ಧ ತೀವ್ರವಾದ ವಾಗ್ದಾಳಿಗಳನ್ನು ನಡೆಸಿದ್ದರು ನವೀನ್ ಕಿರಣ್. ಇಂತಹ ನಾಯಕ 2020ರ ಡಿಸೆಂಬರ್‌ನಲ್ಲಿ ಸಚಿವ ಡಾ.ಕೆ.ಸುಧಾಕರ್ ಮೂಲಕ ಬಿಜೆಪಿ ಸೇರಿದರು. ಅಂದು ತೀವ್ರವಾಗಿ ಸುಧಾಕರ್ ಅವರನ್ನು ಟೀಕಿಸುತ್ತಿದ್ದವರು ಇಂದು ‘ನಮ್ಮ ನಾಯಕ’ ಎಂದು ಅಭಿಮಾನದ ಮಾತುಗಳನ್ನಾಡುತ್ತಿದ್ದಾರೆ. ನವೀನ್ ಕಿರಣ್, ಸುಧಾಕರ್ ಪರವಾಗಿ ವಾಲಿದ್ದಕ್ಕೆ ಇಂದಿಗೂ ಕ್ಷೇತ್ರಗಳಲ್ಲಿ ಮತ್ತು ಬಲಿಜ ಜನಾಂಗದಲ್ಲಿ ನಾನಾ ರೀತಿಯ ಅಂತೆ ಕಂತೆಗಳ ಚರ್ಚೆ ಇದೆ.

ನವೀನ್ ಕಿರಣ್ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯಾಗಿದ್ದರೆ ಬಲಿಜ ಸಮುದಾಯದ ಜತೆಗೆ ಬಹುಸಂಖ್ಯಾತ ಅಹಿಂದ ಮತಗಳು ಅವರಿಗೆ ಅನುಕೂಲ ತರುತ್ತಿತ್ತು ಎನ್ನುವ ಮಾತುಗಳಿವೆ.

ಜೆಡಿಎಸ್‌ನ ಅಗ್ರ ನಾಯಕನಿಗೆ ನಿಗಮದ ಹುದ್ದೆ

ಒಂದು ಸಮಯದಲ್ಲಿ ಒಕ್ಕಲಿಗ ಸಮುದಾಯದ ಕೆ.ವಿ.ನಾಗರಾಜ್, ಜಿಲ್ಲೆಯ ಜೆಡಿಎಸ್‌ನ ಅಗ್ರಗಣ್ಯ ನಾಯಕ ಎನಿಸಿದ್ದರು. 30ಕ್ಕೂ ಹೆಚ್ಚು ವರ್ಷಗಳ ಕಾಲ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರ ನಾಯಕತ್ವವನ್ನು ಒಪ್ಪಿದ್ದರು. ಜೆಡಿಎಸ್‌ನಿಂದ ಕೋಚಿಮುಲ್ ನಿರ್ದೇಶಕ, ಅಧ್ಯಕ್ಷರಾಗಿ ಆಯ್ಕೆಯಾದವರು. ಜಿಲ್ಲಾ ಜೆಡಿಎಸ್ ಅಧ್ಯಕ್ಷರೂ ಆಗಿದ್ದರು.

ಆದರೆ 2018ರ ಚುನಾವಣೆಯಲ್ಲಿ ತಮಗೆ ಪಕ್ಷವು ಟಿಕೆಟ್ ನೀಡಲಿಲ್ಲ, ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವ ಭರವಸೆ ಸಹ ಈಡೇರಿಸಲಿಲ್ಲ ಎಂದು ಬೇಸರಗೊಂಡು ಕಾಂಗ್ರೆಸ್ ಸೇರಿದರು. ನಂತರ ಡಾ.ಕೆ.ಸುಧಾಕರ್ ಬಿಜೆಪಿ ಸೇರಿದ ಮೇಲೆ ಅವರನ್ನು ಹಿಂಬಾಲಿಸಿದರು. ಮೊದಲಿಗೆ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರಾಗಿದ್ದ ನಾಗರಾಜ್, ಈಗ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ.

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಅವರ ಪುತ್ರ ಎಚ್‌.ಡಿ.ರೇವಣ್ಣ ಅವರ ಜತೆ ಇಂದಿಗೂ ನಾಗರಾಜ್ ಸಂಬಂಧ ಉತ್ತಮವಾಗಿದೆ. ಕಳೆದ ವರ್ಷ ನಡೆದ ಅವರ ಪುತ್ರನ ವಿವಾಹಕ್ಕೆ ದೇವೇಗೌಡರೇ ಬಂದಿದ್ದರು.

ಕೆ.ವಿ.ನಾಗರಾಜ್ ಜೆಡಿಎಸ್‌ನಲ್ಲಿ ಇದಿದ್ದರೆ ಈ ಬಾರಿ ಅವರು ಅಭ್ಯರ್ಥಿಯಾಗುವ ಅವಕಾಶಗಳು ಹೆಚ್ಚಿದ್ದವು ಎನ್ನುವ ಮಾತುಗಳು ಜೆಡಿಎಸ್ ಕಾರ್ಯಕರ್ತರು ಮತ್ತು ಇತರೆ ಪಕ್ಷಗಳ ಮುಖಂಡರಿಂದಲೇ ಕೇಳಿ ಬರುತ್ತಿವೆ.

ಹೀಗೆ ತಮ್ಮ ಎದುರಾಳಿಗಳಾಗಿದ್ದ ನಾಯಕರನ್ನು ಡಾ.ಕೆ.ಸುಧಾಕರ್ ರಾಜಕೀಯ ಚಾಣಾಕ್ಷತೆಯ ಮೂಲಕ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾರೆ. ಇದು ಡಾ.ಕೆ.ಸುಧಾಕರ್ ಅವರ ಚುನಾವಣಾ ಗೆಲುವಿಗೂ ಕಾರಣವಾಗುತ್ತಿದೆ. ಒಬ್ಬರ ಮೇಲೊಬ್ಬರು ರಾಜಕೀಯವಾಗಿ ವಾಗ್ದಾಳಿ ನಡೆಸುತ್ತಿದ್ದ ಮುಖಂಡರ ನಡುವೆ ಬಾಂಧವ್ಯ ಏರ್ಪಟ್ಟಿದ್ದು ಚಿಕ್ಕಬಳ್ಳಾಪುರ ರಾಜಕಾರಣದ ರಂಗು ಕಡಿಮೆ ಆಗುವಂತೆಯೂ ಮಾಡಿದೆ.

‘ಕೈ’ಗೆ ನಾಯಕತ್ವದ ಕೊರತೆ

ಕಾಂಗ್ರೆಸ್‌ಗೆ ಡಾ.ಕೆ. ಸುಧಾಕರ್ ರಾಜೀನಾಮೆ ನೀಡಿದ ನಂತರ ಕ್ಷೇತ್ರದಲ್ಲಿ ಕೈ ಪಾಳಯ ‘ಕವಲು’ ದಾರಿಯಲ್ಲಿದೆ. ಉಪಚುನಾವಣೆ ನಂತರವೂ ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವದ ಕೊರತೆ ಕಾಡುತ್ತಿದೆ. ಈ ಬಾರಿ ಟಿಕೆಟ್‌ಗೆ ಸ್ಥಳೀಯ ರಾಜಕೀಯ ನಾಯಕರಿಂದಲೇ ರಕ್ಷಾ ರಾಮಯ್ಯ, ಕೊತ್ತೂರು ಮಂಜುನಾಥ್ ಹೆಸರುಗಳು ಜೋರಾಗಿಯೇ ಕೇಳಿ ಬಂದಿದ್ದು ಇದಕ್ಕೆ ನಿದರ್ಶನ. ನಾಯಕತ್ವದ ಕೊರತೆ ಸಹಜವಾಗಿಯೇ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಗೊಂದಲಕ್ಕೆ ನೂಕಿದೆ.

ಕಾಂಗ್ರೆಸ್ ಮುಖಂಡರ ಬಣ ರಾಜಕಾರಣದಿಂದ ಪಕ್ಷವು ‘ಮನೆಯೊಂದು ಮೂರು ಬಾಗಿಲು’ ಎನ್ನುವ ಸ್ಥಿತಿಯಲ್ಲಿದೆ. ಒಬ್ಬೊಬ್ಬರಾಗಿಯೇ ಕಾಂಗ್ರೆಸ್ ಮನೆಯನ್ನು ತೊರೆಯುತ್ತಿದ್ದಾರೆ. ರಾಜಕೀಯವಾಗಿ ‘ಮೆಲುಗೈ’ ಸಾಧಿಸಲು ಕಾಂಗ್ರೆಸ್‌ ನಾಯಕರಲ್ಲೇ ನಡೆದಿರುವ ಕಸರತ್ತು ಅವರ ಹಿಂಬಾಲಕರನ್ನು ಅತಂತ್ರಕ್ಕೆ ನೂಕುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT