ಭಾನುವಾರ, ಆಗಸ್ಟ್ 9, 2020
21 °C
ವಿರೋಧ ಪಕ್ಷದ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ತಿರುಗೇಟು

ಹಗರಣಗಳಿಂದಲೇ ಕಾಂಗ್ರೆಸ್‌ನವರು ಅಧಿಕಾರ ಕಳೆದುಕೊಂಡದ್ದು: ಡಾ.ಕೆ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

K Sudhakar

ಚಿಕ್ಕಬಳ್ಳಾಪುರ: ‘ತಮ್ಮ ಆಡಳಿತದಲ್ಲಿ ಬರೀ ಹಗರಣಗಳನ್ನೇ ಮಾಡಿರುವ ಕಾಂಗ್ರೆಸ್‌ನವರಿಗೆ ಕಾಮಾಲೆ ರೋಗದವರಿಗೆ ಕಾಣೋದೆಲ್ಲ ಹಳದಿ ಎನ್ನುವಂತಾಗಿದೆ. ಅವರು ಆ ಕಾಯಿಲೆಯಿಂದ ಹೊರ ಬರಲಿ. ಇಲ್ಲದಿದ್ದರೆ ಯಾರೆಲ್ಲ ಎಲ್ಲೆಲ್ಲಿ ಹೋಗಿ ಬಂದಿದ್ದಾರೆ ಎಂದು ಹೇಳಬೇಕಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಎಷ್ಟು ಹಗರಣಗಳನ್ನು ಮಾಡಿಲ್ಲ? ಕೇಂದ್ರದಲ್ಲಿ ಅವರು ಅಧಿಕಾರ ಕಳೆದುಕೊಂಡದ್ದೇ ಹಗರಣಗಳ ಕಾರಣಕ್ಕೆ. ಮೊಸರಿನಲ್ಲಿ ಕಲ್ಲು ಹುಡುಕುವುದು ಬಿಡಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಆರೋಗ್ಯ ಇಲಾಖೆಯವರು ಪಿಪಿಇ ಕಿಟ್‌ ಮತ್ತು ಸ್ಯಾನಿಟೈಸರ್‌ ಖರೀದಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಸಿಲ್ಲ. ಕೋವಿಡ್‌ ಆರಂಭವಾದಾಗ ಪಿಪಿಇ ಕಿಟ್‌ ಮತ್ತು ಸ್ಯಾನಿಟೈಸರ್‌ಗೆ ಜಾಗತಿಕ ಮಟ್ಟದಲ್ಲಿ ತುಂಬಾ ಬೇಡಿಕೆ ಇತ್ತು. ಹಾಗಾಗಿ ಸ್ವಲ್ಪ ಹೆಚ್ಚಿನ ಬೆಲೆ ಕೊಟ್ಟಿರಬಹುದು’ ಎಂದರು.

ಇದನ್ನೂ ಓದಿ: 

‘ಆರೋಗ್ಯ ಇಲಾಖೆಯವರು ಮತ್ತು ಕೋವಿಡ್‌ ಕಾರ್ಯಪಡೆ ಸದಸ್ಯರು ಅತ್ಯಂತ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಪಡೆಯಲ್ಲಿ ಐದು ಸಚಿವರು, ತಜ್ಞರಿದ್ದಾರೆ. ಕಾಂಗ್ರೆಸ್‌ನವರು ವಾಸ್ತವಗಳನ್ನು ತಿಳಿದುಕೊಂಡು ಮಾತನಾಡಲಿ’ ಎಂದು ಹೇಳಿದರು.

‘ಕೋವಿಡ್‌ ನಿಯಂತ್ರಿಸುವ ನಿಟ್ಟಿನಲ್ಲಿ ಶನಿವಾರ ಕೂಡ ಲಾಕ್‌ಡೌನ್‌ ಜಾರಿಗೆ ಮಾಡಬೇಕು ಎಂಬ ಕೂಗಿದೆ. ಕೊನೆಪಕ್ಷ ಬೆಂಗಳೂರಿನಲ್ಲಾದರೂ ಸ್ವಲ್ಪ ದಿನಗಳ ಮಟ್ಟಿಗೆ ಲಾಕ್‌ಡೌನ್‌ ಮಾಡುವಂತೆ ತಜ್ಞರು ಹೇಳುತ್ತಿದ್ದಾರೆ. ಈ ಬಗ್ಗೆ ಪರಾಮರ್ಶೆ ಮಾಡುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು