ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು ರಾಜಕೀಯದಲ್ಲಿ ಮುಸುಕಿನ ಗುದ್ದಾಟ: ಶಿವಶಂಕರ ವಿರುದ್ಧ ಪುಟ್ಟಸ್ವಾಮಿ

Published 17 ಜನವರಿ 2024, 7:02 IST
Last Updated 17 ಜನವರಿ 2024, 7:02 IST
ಅಕ್ಷರ ಗಾತ್ರ

ಗೌರಿಬಿದನೂರು: ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಮತ್ತು ಮಾಜಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಅವರ ನಡುವಿನ ಶೀತಲ ಸಮರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಯಾವಾಗ ಇದು ಬಹಿರಂಗ ಸ್ಫೋಟವಾಗುತ್ತದೆಯೊ ಎನ್ನುವುದು ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ. 

ಪಕ್ಷೇತರರಾಗಿ ಗೆಲುವು ಸಾಧಿಸಿದ ತರುವಾಯ ಪುಟ್ಟಸ್ವಾಮಿ ಗೌಡ ಅವರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದರು. ಲೋಕಸಭೆ ಚುನಾವಣೆಯ ಈ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಗೌಡರ ಬೆಂಬಲ ಕೋರುತ್ತಿದ್ದಾರೆ. ಮತ್ತೊಂದು ಕಡೆ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರಾದ ಶಿವಶಂಕರ ರೆಡ್ಡಿ ಅವರು ನಾಮನಿರ್ದೇಶನ, ಅಧಿಕಾರಿಗಳ ವರ್ಗಾವಣೆಯಲ್ಲಿ ಪ್ರಭಾವ ಬೀರುತ್ತಿದ್ದಾರೆ. 

ಇದು ಶಾಸಕರು ಮತ್ತು ಮಾಜಿ ಶಾಸಕರ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ. ಪುಟ್ಟಸ್ವಾಮಿಗೌಡ ಅಧಿಕಾರಿಗಳ ನೇಮಕದ ವಿಚಾರವಾಗಿ ನೀಡಿರುವ ಪಟ್ಟಿಗೆ ವ್ಯತಿರಿಕ್ತವಾಗಿ ಶಿವಶಂಕರ ರೆಡ್ಡಿ ಅವರು ಸಹ ಪಟ್ಟಿಗಳನ್ನು ನೀಡಿದ್ದಾರೆ. ಇದು ಇಬ್ಬರ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ. ಗೌರಿಬಿದನೂರು ವೃತ್ತ ನಿರೀಕ್ಷಕರು ಸೇರಿದಂತೆ ಕೆಲವು ಹುದ್ದೆಗಳ ವರ್ಗಾವಣೆಯಲ್ಲಿ ಶಿವಶಂಕರರೆಡ್ಡಿ ಅವರು ಪ್ರಭಾವ ಬೀರಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪುಟ್ಟಸ್ವಾಮಿಗೌಡ ಅವರು ತಮ್ಮದೇ ಆದ ಸಂಪರ್ಕದ ಮೂಲಕ ಅಧಿಕಾರಿಗಳನ್ನು ಮರುನಿಯೋಜನೆಗೆ ಕಾರಣರಾದರು. 

ಈ ಮುಸುಕಿನ ಗುದ್ದಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ. ಸಾಮಾನ್ಯವಾಗಿ ಶಾಸಕರು ನಗರಸಭೆಯ ನಾಮನಿರ್ದೇಶನ, ಸಹಕಾರ ಸಂಘಗಳಲ್ಲಿ ನಾಮನಿರ್ದೇಶನಕ್ಕೆ ಹೀಗೆ ನಾಮನಿರ್ದೇಶನ ಸ್ಥಾನಗಳಿಗೆ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಅಧಿಕಾರ ಕೊಡಿಸುತ್ತಾರೆ. ಇದು ಸಹಜವೂ ಹೌದು. ಪುಟ್ಟಸ್ವಾಮಿ ಗೌಡ ಅವರು ತಮ್ಮ ಬೆಂಬಲಿಗರಿಗೆ ಅಧಿಕಾರ ದೊರೆಕಿಸಿಕೊಡಲು ಸರ್ಕಾರ ಮಟ್ಟದಲ್ಲಿ ನಾಮನಿರ್ದೇಶನದ ಪಟ್ಟಿ ನೀಡಿದರೆ ಅದಕ್ಕೆ ಪ್ರತಿಯಾಗಿ ಶಿವಶಂಕರ ರೆಡ್ಡಿ ಸಹ ‘ಕಾಂಗ್ರೆಸ್’ ಎನ್ನುವ ಹಣೆಪಟ್ಟಿಯಲ್ಲಿ ಮತ್ತೊಂದು ಪಟ್ಟಿ ನೀಡುವ ಸಾಧ್ಯತೆ ಇದೆ. 

ಇದು ಶಾಸಕರು ಮತ್ತು ಮಾಜಿ ಶಾಸಕರ ನಡುವೆ ಮತ್ತೊಂದು ಸುತ್ತಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. 

ಕಾಂಗ್ರೆಸ್ ನಾಯಕರ ಭೇಟಿ: ಒಂದು ಕಡೆ ಮಾಜಿ ಶಾಸಕರು ವರ್ಗಾವಣೆ, ನಾಮ ನಿರ್ದೇಶನದಲ್ಲಿ ಮೂಗು ತೂರಿಸುತ್ತಿರುವುದಕ್ಕೆ ಅಸಮಾಧಾನಗೊಂಡಿರುವ ಶಾಸಕ ಪುಟ್ಟಸ್ವಾಮಿಗೌಡ ಅವರನ್ನು ಕಾಂಗ್ರೆಸ್‌ನ ಪ್ರಮುಖ ನಾಯಕರು ಭೇಟಿ ಮಾಡುತ್ತಿದ್ದಾರೆ. 

ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರರಾಗಿ 83,836 ಮತಗಳನ್ನು ಪಡೆದು ಗೆದ್ದಿರುವ ಗೌಡರ ಬೆಂಬಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವೂ ಹೌದು. ಕಾಂಗ್ರೆಸ್‌ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ರಕ್ಷಾ ರಾಮಯ್ಯ ಸಹ ಭೇಟಿಯಾಗಿ ಬೆಂಬಲ ಕೋರಿದ್ದಾರೆ. 

ಮತ್ತೊಂದು ಕಡೆ ಶಿವಶಂಕರ ರೆಡ್ಡಿ ಸಹ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. 

ಶಿವಶಂಕರ ರೆಡ್ಡಿ ಅವರಿಗೆ ಬೆಂಬಲ ನೀಡುವಿರಾ ಎನ್ನುವ ಪ್ರಶ್ನೆಗೆ ಪುಟ್ಟಸ್ವಾಮಿ ಗೌಡ ಅವರು, ‘ಶಿವಶಂಕರ ರೆಡ್ಡಿ ಅವರ ಬಗ್ಗೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರ ಬಗ್ಗೆ ಎಂದಿಗೂ ದ್ವೇಷ ಭಾವನೆ ಇಲ್ಲ. ಚುನಾವಣೆಯನ್ನೂ ಆ ರೀತಿಯಲ್ಲಿಯೇ ಎದುರಿಸಿದ್ದೇನೆ. ಕಾಂಗ್ರೆಸ್ ಪಕ್ಷವು ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುವೆ ಎಂದು ಹೇಳಿದರು. 

ಶಿವಶಂಕರ ರೆಡ್ಡಿ
ಶಿವಶಂಕರ ರೆಡ್ಡಿ

‘ಮಾಜಿ ಶಾಸಕರು ಜನಾಭಿಪ್ರಾಯ ಗೌರವಿಸಬೇಕು’

‘ನನ್ನ ರಾಜಕೀಯ ಬದುಕಿನಲ್ಲಿ ಎಂದಿಗೂ ವಿರೋಧಿಗಳನ್ನು ಅವಹೇಳನ ತೇಜೋವಧೆ ಮಾಡಿಲ್ಲ. ವಿಧಾನಸಭೆ ಚುನಾವಣೆಯ ವೇಳೆ ನನಗೆ ಮತಕೊಡಿ ಎಂದಿದ್ದೇನೆ ಹೊರತು ಶಿವಶಂಕರ ರೆಡ್ಡಿ ಅವರು ಸೇರಿದಂತೆ ಯಾರ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ. ಆದರೆ ಮಾಜಿ ಶಾಸಕರು ಜನಾಭಿಪ್ರಾಯವನ್ನು ಗೌರವಿಸಬೇಕು’ ಎಂದು ಶಾಸಕ ಕೆ.ಎಚ್.‍ಪುಟ್ಟಸ್ವಾಮಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಆಡಳಿತಕ್ಕೆ ವೇಗ ನೀಡಬೇಕು ಎನ್ನುವ ಕಾರಣಕ್ಕೆ ಆಯಾ ಶಾಸಕರು ವರ್ಗಾವಣೆ ಪ್ರಕ್ರಿಯೆಗಳನ್ನು ನಡೆಸುವರು. ಆದರೆ ಮಾಜಿ ಶಾಸಕರು ಈ ವರ್ಗಾವಣೆ ಸೇರಿದಂತೆ ತಾಲ್ಲೂಕಿನ ಕೆಲವು ಬೆಳವಣಿಗೆಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಅವರು ಸಲಹೆಗಳನ್ನು ನೀಡಿದರೆ ಖಂಡಿತವಾಗಿ ಸ್ವೀಕರಿಸಲಾಗುತ್ತದೆ. ಆದರೆ ಅವರ ನಿಲುವುಗಳು ಅಭಿವೃದ್ಧಿಗೆ ತೊಡಕು ಉಂಟು ಮಾಡುತ್ತಿವೆ ಎಂದು ದೂರಿದರು. 

ಅವರು ಮೂಡಿಸುವ ಗೊಂದಲಗಳನ್ನು ಸರಿಪಡಿಸಲು ಹೋದಾಗ ಅಭಿವೃದ್ಧಿಯ ಕಡೆ ಹೆಚ್ಚು ಗಮನ ನೀಡಲು ಕಷ್ಟಸಾಧ್ಯವಾಗುತ್ತದೆ. ಜನರು ನನಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಅರಿತುಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT