ಸೋಮವಾರ, ಆಗಸ್ಟ್ 15, 2022
28 °C
ಚಿಕ್ಕಬಳ್ಳಾಪುರ ರಾಜಕಾರಣಕ್ಕೆ ಪ್ರವೇಶ: ರಕ್ಷಾ ರಾಮಯ್ಯ

ಸಂದರ್ಶನ | ತಂದೆಯ ನಿರ್ದೇಶನ, ತೀರ್ಮಾನದಂತೆ ನಾನು ಮುಂದುವರಿಯುವೆ -ರಕ್ಷಾ ರಾಮಯ್ಯ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ನಮ್ಮ ತಂದೆಯ ನಿರ್ದೇಶನ ಮತ್ತು ತೀರ್ಮಾನದಂತೆ ನಾನು ಮುಂದುವರಿಯುವೆ’– 2023ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವರು ಎನ್ನುವ ಮಾತುಗಳು ನಿಮ್ಮ ಬಗ್ಗೆ ಕೇಳಿ ಬರುತ್ತಿವೆಯಲ್ಲ ಎನ್ನುವ ಪ್ರಶ್ನೆಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರ ಉತ್ತರವಿದು. 

ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಮತ್ತು ಅವರ ತಂದೆ ಮಾಜಿ ಸಚಿವ ಎಂ.ಆರ್.ಸೀತಾರಾಂ ಅವರ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಅದಕ್ಕೆ ಪ್ರಮುಖ ಕಾರಣ ಜಿಲ್ಲೆಯ ಬಲಿಜ ಸಮುದಾಯದ ಮೇಲೆ ಈ ಕುಟುಂಬ ಹೊಂದಿರುವ ಪ್ರಭಾವ. ಚಿಕ್ಕಬಳ್ಳಾಪುರವು ಬಲಿಜ ಸಮುದಾಯದ ರಾಜಧಾನಿ ಎನ್ನುವ ಮಾತು ಈ ಸಮಾಜದಲ್ಲಿ ಚಾಲ್ತಿಯಲ್ಲಿದೆ. 

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ರಕ್ಷಾ ರಾಮಯ್ಯ ಕಣಕ್ಕೆ ಇಳಿಯುವರು ಎನ್ನುವ ಮಾತು ಒಂದು ವರ್ಷದಿಂದಲೂ ಚಾಲ್ತಿಯಲ್ಲಿದೆ. ಆದರೆ ರಕ್ಷಾ ರಾಮಯ್ಯ ಇಂದಿಗೂ ಈ ಕ್ಷೇತ್ರದ ನೇರ ರಾಜಕಾರಣಕ್ಕೆ ಬಂದಿಲ್ಲ.

ಜೂನ್‌ 24ರಂದು ಎಂ.ಆರ್.ಸೀತಾರಾಂ ಅವರು ಬೆಂಗಳೂರಿನ ಅರಮನೆ ಮೈದಾನ ಗೇಟ್ ನಂ. 3ರ ‘ವೈಟ್ ಪೆಟಲ್ಸ್ ಗಾರ್ಡೇನಿಯಾ’ ಆವರಣದಲ್ಲಿ ಬೆಂಬಲಿಗರ ಸಭೆ ಸಹ ನಡೆಸಿ ತಮಗೆ ರಾಜಕೀಯವಾಗಿ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಸಭೆ ನಡೆಸಿ ಒಂದು ತಿಂಗಳಲ್ಲಿ ತೀರ್ಮಾನಕೈಗೊಳ್ಳುವೆ ಎಂದಿದ್ದಾರೆ. ಸೀತಾರಾಂ ಅವರ ನಿರ್ಧಾರ ಜಿಲ್ಲಾ ರಾಜಕಾರಣದಲ್ಲಿ ಕುತೂಹಲಕ್ಕೂ ಕಾರಣವಾಗಿದೆ.  

ಸೀತಾರಾಂ ಅವರು ಸಭೆಯ ಕರಪತ್ರವು ಜಿಲ್ಲೆಯ ಬಲಿಜ ಸಮುದಾಯದ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಸಭೆಯಲ್ಲಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ, ಗುಡಿಬಂಡೆ ತಾಲ್ಲೂಕಿನಿಂದಲೂ ಬೆಂಬಲಿಗರು ಭಾಗವಹಿಸಿದ್ದರು. 

ಎಂ.ಆರ್.ಸೀತಾರಾಂ ಅವರ ಕುಟುಂಬ ರಾಜಕೀಯವಾಗಿ ಆಯ್ಕೆ ಮಾಡಿಕೊಳ್ಳುವುದಿದ್ದರೆ ಅದು ಚಿಕ್ಕಬಳ್ಳಾಪುರ ಜಿಲ್ಲೆಯೇ ಆಗಿದೆ ಎಂದು ಅವರ ಬೆಂಬಲಿಗರು ನುಡಿಯುವರು. 2009ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕಾಂಗ್ರೆಸ್ ಸಹ ಎಂ.ಆರ್.ಸೀತಾರಾಂ ಅವರಿಗೆ ಸೂಚಿಸಿತ್ತು. ಕೊನೆಗಳಿಗೆಯಲ್ಲಿ ಅವರಿಗೆ ಟಿಕೆಟ್ ತಪ್ಪಿತ್ತು. ಈಗ ಮತ್ತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೀತಾರಾಂ ಅವರು ಅಭ್ಯರ್ಥಿಯಾಗುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ. 

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರ ಜತೆ ಬಲಿಜ ಸಮುದಾಯ ಕೈ ಜೋಡಿಸಿದರೆ ರಕ್ಷಾ ರಾಮಯ್ಯ ಪ್ರಬಲ ಸ್ಪರ್ಧೆ ನೀಡಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ನ ಕೆಲವು ಮುಖಂಡರಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಮುಖಂಡರು ರಕ್ಷಾ ರಾಮಯ್ಯ ಅವರನ್ನು ಭೇಟಿಯೂ ಆಗಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಎಂ.ಆರ್.ಸೀತಾರಾಂ ಮತ್ತು ರಕ್ಷಾ ರಾಮಯ್ಯ ಬಿಜೆಪಿ ಸೇರುವರು. ಸೀತಾರಾಂ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವರು. ರಕ್ಷಾ ರಾಮಯ್ಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವರು ಎನ್ನುವ ವದಂತಿಗಳು ಸಹ ಬಲಿಜ ಸಮುದಾಯದ ಬಿಜೆಪಿ ಮುಖಂಡರಲ್ಲಿ ಇದೆ. ಈ ಬಗ್ಗೆ ರಕ್ಷಾ ರಾಮಯ್ಯ ಅವರನ್ನು ಕೇಳಿದರೆ, ‘ಹಾಗೇನೂ ಇಲ್ಲ. ತಂದೆಯವರು ಏನು ನಿರ್ಧಾರ ಮಾಡುವರೋ ನೋಡೋಣ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿಕ್ಕಬಳ್ಳಾಪುರ ಮುಖಂಡರು ಭೇಟಿಯಾಗಿದ್ದಾರೆ’
ಚಿಕ್ಕಬಳ್ಳಾಪುರ ಮತ್ತು ನಮ್ಮ ಕುಟುಂಬಕ್ಕೆ ಉತ್ತಮ ಸಂಬಂಧ ಮತ್ತು ಸಂಪರ್ಕವಿದೆ. ಈ ಹಿಂದಿನಿಂದಲೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಅಲ್ಲಿನ ಕಾಂಗ್ರೆಸ್ ಮುಖಂಡರು ನಮ್ಮನ್ನು ಭೇಟಿಯಾಗಿದ್ದಾರೆ ಎಂದು ರಕ್ಷಾ ರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ತಂದೆಯವರ ದೃಷ್ಟಿ ಇದೆ. ಹೆಚ್ಚು ಜನರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಲೋಕಸಭೆಗೆ ಸ್ಪರ್ಧಿಸಬೇಕು ಎನ್ನುವ ವಿಚಾರವಿದೆ. ಆದರೆ ಟಿಕೆಟ್ ವಿಚಾರ ಖಚಿತವಾಗಿಲ್ಲ. ಸದ್ಯ ವಿಧಾನಸಭಾ ಚುನಾವಣೆಯ ವಿಚಾರವಾಗಿ ಚರ್ಚೆಗಳು ನಡೆದಿಲ್ಲ. ತಂದೆಯವರು ಏನು ನಿರ್ಧಾರ ಮಾಡುವರೋ ಆ ಪ್ರಕಾರವಾಗಿ ಮುಂದುವರಿಯುವೆ’ ಎಂದು ತಿಳಿಸಿದರು. 

ಪಕ್ಷದ ಹಂತದಲ್ಲಿ ಯಾವ ಚರ್ಚೆಗಳು ಆಗುತ್ತವೆಯೊ ನೋಡೋಣ. ಸಿದ್ದರಾಮಯ್ಯ ಅವರು ತಂದೆಯವರ ಜತೆ ಮಾತುಕತೆ ನಡೆಸುವರು. ಮುಂದಿನ ಬೆಳವಣಿಗೆಗಳು ಏನು ಆಗುತ್ತದೆಯೊ ಆ ರೀತಿಯಲ್ಲಿ ನಡೆದುಕೊಂಡು ಹೋಗುತ್ತೇವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು