ಗುರುವಾರ , ಜುಲೈ 7, 2022
23 °C

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಗೆಲುವಿನ ನಗೆ ಬೀರಿದ ಕೋಡಿ ರಂಗಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಪ್ರೊ.ಕೋಡಿರಂಗಪ್ಪ ಆಯ್ಕೆ ಆಗಿದ್ದಾರೆ. ಕೈವಾರ ಶ್ರೀನಿವಾಸ್ ಮತ್ತು ಪ್ರೊ.ಕೋಡಿರಂಗಪ್ಪ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಸ್ಪರ್ಧೆ ಇತ್ತು. ಈ ಹಿಂದೆ ಜಿಲ್ಲಾ ಅಧ್ಯಕ್ಷರಾಗಿದ್ದ ಶ್ರೀನಿವಾಸ್ ಮತ್ತೊಮ್ಮೆ ಆಯ್ಕೆ ಬಯಸಿದ್ದರು. ಕೋಡಿ ರಂಗಪ್ಪ ತಮಗೊಂದು ಅವಕಾಶ ನೀಡಿ ಎಂದು ಮತದಾರರನ್ನು ಕೋರಿದ್ದರು. 

ಕೋಡಿ ರಂಗಪ್ಪ ಅವರು 3,420 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಕೈವಾರ ಶ್ರೀನಿವಾಸ್ 1,041 ಮತಗಳನ್ನು ಪಡೆದರು. 2,379 ಅಂತರಗಳಿಂದ ರಂಗಪ್ಪ ಅವರು ವಿಜಯದ ನಗೆ ಬೀರಿದರು. ಜಿಲ್ಲೆಯಲ್ಲಿ ಕನ್ನಡದ ತೇರನ್ನು ಎಳೆಯುವ ಅವಕಾಶವನ್ನು ಪಡೆದರು. 

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಕೈವಾರ ಶ್ರೀನಿವಾಸ್ ಅವರಿಗಿಂತ ಕೋಡಿ ರಂಗಪ್ಪ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಶ್ರೀನಿವಾಸ್ ತಮ್ಮ ಸ್ವಂತ ತಾಲ್ಲೂಕು ಚಿಂತಾಮಣಿಯಲ್ಲಿ ಹೆಚ್ಚು ಮತ ಪಡೆಯುವರು ಎಂದು ನಿರೀಕ್ಷಿಸಲಾಗಿತ್ತು. ಅಲ್ಲಿಯೂ ರಂಗಪ್ಪ ಹೆಚ್ಚಿನ ಮತಗಳನ್ನೇ ಪಡೆದಿದ್ದಾರೆ. 

ವಿವಿಧ ಸಂಘಟನೆಗಳು ಸಹ ಕೋಡಿ ರಂಗಪ್ಪ ಅವರನ್ನು ಬೆಂಬಲಿಸಿದ್ದವು. ಆರಂಭದಿಂದಲೂ ಮೇಲ್ನೋಟಕ್ಕೆ ರಂಗಪ್ಪ ಅವರ ಪರವಾದ ಒಲವು ವ್ಯಕ್ತವಾಗಿತ್ತು. 

‘ಜಿಲ್ಲೆಯ ಸಾಹಿತ್ಯಾಸಕ್ತರು, ನಿಕಟಪೂರ್ವ ಅಧ್ಯಕ್ಷರು, ವಿವಿಧ ಸಂಘಟನೆಗಳ ಮುಖಂಡರು ಒಮ್ಮತದಿಂದ ನನ್ನನ್ನು ಸ್ಪರ್ಧೆಗೆ ಇಳಿಸಿದ್ದರು. ಅತಿ ಹೆಚ್ಚು ಮತಗಳನ್ನು ಸಾಹಿತ್ಯಾಸಕ್ತರು ನೀಡಿ ಗೆಲ್ಲಿಸಿದ್ದಾರೆ. ಸಂತೋಷವಾಗುತ್ತಿದೆ’ ಎಂದು ಪ್ರೊ.ಕೋಡಿ ರಂಗಪ್ಪ ’ಪ್ರಜಾವಾಣಿ’ಗೆ ತಿಳಿಸಿದರು. 

ಸಾಹಿತ್ಯ, ಸಂಸ್ಕೃತಿಯ ಕುರಿತು ಜನರು ಅಧ್ಯಯನ ಮಾಡುವಂತೆ ಮಾಡುವುದು. ಈ ಚಟುವಟಿಕೆಗಳಿಗೆ ಪ‍ರಿಷತ್ ಅನ್ನು ಮುಕ್ತ ಶಾಲೆಯಾಗಿ ಮಾಡುವುದು ನನ್ನ ಆದ್ಯತೆ ಆಗಿದೆ. ನಾಡು, ನುಡಿ ವಿಚಾರವಾಗಿ ರಾಜ್ಯ ಮಟ್ಟದಲ್ಲಿ ನಡೆಯುವ ಹೋರಾಟಗಳಿಗೆ ನಾವು ಸಹ ಬೆಂಬಲವಾಗಿ ನಿಲ್ಲಬೇಕು. ಹೋರಾಟಗಾರರ ಕೈ ಬಲಪಡಿಸಬೇಕು ಎಂದು ಹೇಳಿದರು. 

ಜಿಲ್ಲೆಯಲ್ಲಿ ಪುಸ್ತಕ ಸಂಸ್ಕೃತಿ, ಗ್ರಂಥಾಲಯ ಮತ್ತು ಅಧ್ಯಯನ ಸಂಸ್ಕೃತಿಯನ್ನು ಬೆಳೆಸಬೇಕು. ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಆಲೋಚನೆಯೂ ಇದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಬೇಕು. ಜನರು ಮತ್ತು ಸರ್ಕಾರದ ಹಸಕಾರ ದೊರೆಯಬೇಕು. ಸಾಹಿತ್ಯ ಪರಿಷತ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರವನ್ನಾಗಿ ರೂಪಿಸಬೇಕು. ಈ ದಿಕ್ಕಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ಕೋಡಿ ರಂಗಪ್ಪ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು