ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಧಾಮ ಕೆರೆ; ಎತ್ತಿನಹೊಳೆ ನೀರು ಸಂಗ್ರಹಕ್ಕೆ ಚಿಂತನೆ

ಪ್ರಗತಿ ಪರಿಶೀಲನಾ ಸಭೆ; ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿಕೆ
Published 28 ಡಿಸೆಂಬರ್ 2023, 15:13 IST
Last Updated 28 ಡಿಸೆಂಬರ್ 2023, 15:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ರಂಗಧಾಮ ಕೆರೆಯಲ್ಲಿ ಎತ್ತಿನಹೊಳೆ ನೀರು ಸಂಗ್ರಹಿಸಲು ಚಿಂತಿಸಲಾಗುತ್ತಿದೆ. ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. 

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ನಡುವೆಯೇ ಮಾಧ್ಯಮದವರ ಜೊತೆ ಅವರು ಮಾತನಾಡಿದರು. 

ಅಮಾನಿಗೋಪಾಲಕೃಷ್ಣ ಕೆರೆಗೆ ಈಗಾಗಲೇ ಎಚ್‌.ಎನ್.ವ್ಯಾಲಿ ನೀರು ಹರಿಯುತ್ತಿದೆ. ಈ ಕೆರೆಯಲ್ಲಿ ಎತ್ತಿನಹೊಳೆ ನೀರು ಸಂಗ್ರಹ ಸಾಧ್ಯವೇ ಎಂದು ಪರಿಶೀಲಿಸಲಾಯಿತು. ಎಚ್‌.ಎನ್.ವ್ಯಾಲಿ ನೀರನ್ನು ಬೇರೆ ಕಡೆಗೆ ಹರಿಸಬೇಕಾಗುತ್ತದೆ. ಇಷ್ಟು ದಿನ ಕೊಳಚೆ ನೀರು ತುಂಬಿಸಿರುವ ಕಾರಣ ಎತ್ತಿನಹೊಳೆ ನೀರು ತುಂಬಿಸುವುದು ಉಚಿತವಲ್ಲ. ಆದ್ದರಿಂದ ಇದರ ಬದಲು ರಂಗಧಾಮ ಕೆರೆಗೆ ಎತ್ತಿನಹೊಳೆ ನೀರು ಹರಿಸಲು ಆಲೋಚಿಸಲಾಗುತ್ತಿದೆ ಎಂದು ಹೇಳಿದರು.

ರಂಗಧಾಮ ಕೆರೆ 50 ಎಕರೆ ಇದೆ. ಸಂಗ್ರಹಕ್ಕೆ ಯೋಗ್ಯವಾಗಿದೆ. ಈ ಬಗ್ಗೆ ವರದಿ ಕೊಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಚಿಕ್ಕಬಳ್ಳಾಪುರದಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿಗೆ ನಗರಾಭಿವೃದ್ಧಿ ಇಲಾಖೆ ₹ 40 ಕೋಟಿ ನೀಡಿದೆ. ಚಿಂತಾಮಣಿಗೆ ₹ 40 ಕೋಟಿ ಮತ್ತು ಶಿಡ್ಲಘಟ್ಟಕ್ಕೂ ₹ 30 ಕೋಟಿ ದೊರೆತಿದೆ. ಚಿಕ್ಕಬಳ್ಳಾಪುರದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ನಗರದ ಸುತ್ತಲಿನ ಕೆರೆಗಳಿಗೆ ಕೊಳಚೆ ನೀರು ಹರಿಯುತ್ತಿದೆ. ಈ ಕೊಳಚೆ ನೀರನ್ನು ಸರಿಯಾಗಿ ಸಂಸ್ಕರಣೆ ಮಾಡಬೇಕಾಗಿದೆ ಎಂದರು.

ಬರದ ಕಾರಣ ಎಲ್ಲ ರೈತರಿಗೆ ₹ 2 ಸಾವಿರ ನೀಡಲು ಸರ್ಕಾರ ಮುಂದಾಗಿದೆ. ಹಣ ಸಂದಾಯಕ್ಕೆ  ಪ್ರ್ಯೂಟ್ ಗುರುತಿನ ಚೀಟಿ ಮಾಡುವ ಕಾರ್ಯವು ಜಿಲ್ಲೆಯಲ್ಲಿ ನಡೆದಿದೆ. ಶೇ 85ರಷ್ಟು ರೈತರ ಗುರುತಿನ ಚೀಟಿ ನೋಂದಣಿ ಮಾಡಲಾಗಿದೆ. ಉಳಿದ ರೈತರನ್ನು ಶೀಘ್ರ ನೋಂದಾಯಿಸಲಾಗುವುದು ಎಂದರು.

ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಲ್ಲಿ 2,60,744 ಯುಜಮಾನಿಯರನ್ನು ನೋಂದಾಯಿಸಲಾಗಿದೆ. 2,52,276 ಯಜಮಾನಿಯರಿಗೆ ಪ್ರತಿ ತಿಂಗಳು ₹ 5.43 ಕೋಟಿ ಪಾವತಿಸಲಾಗುತ್ತಿದೆ. 8,468 ಮಹಿಳೆಯರ ಬ್ಯಾಂಕ್ ಖಾತೆಗಳ ತಾಂತ್ರಿಕ ಅಡಚಣೆಯಿಂದ ಪಾವತಿಸಲು ಸಾಧ್ಯವಾಗಿಲ್ಲ. ಇದನ್ನು ಸರಿಪಡಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಬಿರಗಳು ನಡೆಯುತ್ತಿವೆ. ಒಂದೆರಡು ದಿನಗಳಲ್ಲಿ ಸರಿಪಡಿಸುವ ಕಾರ್ಯ ಆಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 3,07,412 ಬಿ.ಪಿ.ಎಲ್ ಪಡಿತರ ಕುಟುಂಬಗಳಿವೆ. ತಾಂತ್ರಿಕ ಕಾರಣಗಳಿಂದ 21,174 ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಡಿಬಿಟಿ ಸಾಧ್ಯವಾಗಿಲ್ಲ. ಆದ್ದರಿಂದ ತಾಂತ್ರಿಕ ಸಮಸ್ಯೆಗಳನ್ನು ಮುಂದಿನ ಜ.15 ರ ಒಳಗೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ, ಪ್ರದೀಪ್ ಈಶ್ವರ್, ಕೆ.ಎಚ್.ಪುಟ್ಟಸ್ವಾಮಿ ಗೌಡ, ಬಿ. ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Cut-off box - ‘ಅಪ್ಪಯ್ಯನ ಕುಂಟೆಯಲ್ಲಿ ಕ್ರೀಡಾಂಗಣವಿಲ್ಲ’ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಅಪ್ಪಯ್ಯನಕುಂಟೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಿಲ್ಲ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಅಪ್ಪಯ್ಯನ ಕುಂಟೆ 17 ರಿಂದ 18 ಎಕರೆ ಇದೆ. ಕುಂಟೆಯ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ನಾನು ಕುಂಟೆಯ ನಕ್ಷೆ ಗಮನಿಸಿದೆ. ಇಲ್ಲಿ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿ ಕ್ರಿಕೆಟ್ ಮೈದಾನ ಮಾಡಬೇಕು ಎನ್ನುವ ನಿರ್ಧಾರ ಕೈಬಿಟ್ಟಿದ್ದು ಬೇರೆ ಕಡೆ ಜಾಗ ನೋಡಲಾಗುವುದು ಎಂದು ಹೇಳಿದರು.  ಈ ಹಿಂದೆ ಗುರುತಿಸಿರುವ ಜಾಗದಲ್ಲಿಯೇ ಹೂವಿನ ಮಾರುಕಟ್ಟೆ ನಿರ್ಮಿಸುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದರು.

ಸ್ಥಳೀಯರಿಗೆ ಆದ್ಯತೆ

ಬಹುತೇಕ ಎಲ್ಲ ಹೋಬಳಿ ಮಟ್ಟದಲ್ಲಿಯೂ ವಸತಿ ಶಾಲೆಗಳು ಇವೆ. ಈ ವಸತಿ ಶಾಲೆಗಳಲ್ಲಿ ಶೇ 60 ಸ್ಥಾನಗಳನ್ನು ಸ್ಥಳೀಯರಿಗೆ ಮತ್ತು ಶೇ 40ರಷ್ಟು ಸ್ಥಾನಗಳನ್ನು ಹೊರಗಿನ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ನೀಡಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ಈ ಬಗ್ಗೆ ಆದೇಶ ಸಹ ಮಾಡಿದ್ದಾರೆ. ಆದ್ದರಿಂದ ವಸತಿ ಶಾಲೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ಇದೆ ಎಂದು ಸಚಿವರು ತಿಳಿಸಿದರು. ಶೇ 80ರಷ್ಟು ಸ್ಥಾನಗಳನ್ನು ಆ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು ಎನ್ನುವ ಚರ್ಚೆ ಆಗಿದೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಮತ್ತು ಮುಖ್ಯಮಂತ್ರಿ ಚರ್ಚಿಸಿ ತೀರ್ಮಾನ ಕೈಗೊಳ್ಳುವರು ಎಂದರು. ವಸತಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಭೇಟಿಯಾಗಲು ಪೋಷಕರು ಬಂದಾಗ ಅವರನ್ನು ಶಾಲೆ ಒಳಗೆ ಓಡಾಡಲು ಅವಕಾಶ ಮಾಡಿಕೊಡಬೇಕು. ಆಗ ಅಲ್ಲಿನ ನ್ಯೂನತೆಗಳು ಗಮನಕ್ಕೆ ಬರಲಿವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಆಲೋಚಿಸುತ್ತಿದ್ದೇವೆ ಎಂದು ತಿಳಿಸಿದರು. 

13 ಜನರಿಗೆ ಕೋವಿಡ್

ಜಿಲ್ಲೆಯಲ್ಲಿ 1060 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿ. 13 ಜನರಿಗೆ ಕೋವಿಡ್ ದೃಢಪಟ್ಟಿದೆ. ಅವರೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಎದುರಿಸಲು ಜಿಲ್ಲೆಯಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. 60 ವೆಂಟಿಲೇಟರ್‌ಗಳು 43 ಆಮ್ಲಜನಕ ಸಹಿತ ಹಾಸಿಗೆಗಳು ಲಭ್ಯವಿದೆ ಎಂದು ಡಾ.ಎಂ.ಸಿ.ಸುಧಾಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT