ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಚಿಮುಲ್ ವಿಭಜನೆ: ಬಿಜೆಪಿ ಸರ್ಕಾರದ ಆದೇಶವೇ ಮರುಸ್ಥಾಪನೆ

Published : 30 ಸೆಪ್ಟೆಂಬರ್ 2024, 6:30 IST
Last Updated : 30 ಸೆಪ್ಟೆಂಬರ್ 2024, 6:30 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ಬೆಟ್ಟ ಅಗೆದು ಇಲಿ ಹಿಡಿದರು ಎನ್ನುವ ಗಾದೆ ಮಾತು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ( ಕೋಚಿಮುಲ್) ವಿಭಜನೆ ವಿಚಾರವಾಗಿ ಸರ್ಕಾರಕ್ಕೆ ಅನ್ವರ್ಥ ಎನ್ನುವಂತಿದೆ. ಬಿಜೆಪಿ ಸರ್ಕಾರದಲ್ಲಿ ಡಾ.ಕೆ.ಸುಧಾಕರ್ ಸಚಿವರಾಗಿದ್ದ ವೇಳೆ ಕೋಚಿಮುಲ್ ವಿಭಜಿಸಿ ಆದೇಶ ಹೊರಡಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಿಂಗಳಲ್ಲಿ ಈ ವಿಭಜನೆಯ ಆದೇಶ ರದ್ದುಗೊಳಿಸಿತು.

ಈಗ ಈ ಹಿಂದಿನ ಮೂರು ಆದೇಶಗಳನ್ನೂ ಮತ್ತೆ ಯಥಾವತ್ ಮರುಸ್ಥಾಪಿಸಿ ಆದೇಶಿಸಿದೆ. ಮರುಸ್ಥಾಪಿತವಾದ ಎರಡೂ ಒಕ್ಕೂಟಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಬೆಂಗಳೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕರು ಸೆ.25ರಂದು ಆದೇಶಿಸಿದ್ದಾರೆ.

ರಾಜಕೀಯ ಜಟಾಪಟಿ: ಕೋಚಿಮುಲ್ ವಿಭಜನೆ ವಿಚಾರವು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.

ಕಾಂಗ್ರೆಸ್‌ನ ಎನ್‌.ಎಚ್‌.ಶಿವಶಂಕರ ರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಒಕ್ಕೂಟ ವಿಭಜನೆಗೆ ಸಂಬಂಧಿಸಿದಂತೆ ಸಭೆ ನಡೆಸಿದ್ದರು. ಆ ನಂತರ ಪ್ರಕ್ರಿಯೆಗಳು ಸ್ಥಗಿತವಾದವು. ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಾ.ಕೆ.ಸುಧಾಕರ್ ಒಕ್ಕೂಟ ವಿಭಜಿಸಲು ಮುಂದಾದರು. ಇದಕ್ಕೆ ಕೋಚಿಮುಲ್ ಆಡಳಿತ ಮಂಡಳಿಯಲ್ಲಿನ ಬಹುಸಂಖ್ಯೆಯ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ವಿರೋಧ ವ್ಯಕ್ತಪಡಿಸಿದರು.

ರಾಜಕೀಯ ಕಾವಿನ ನಡುವೆಯೇ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್‌) ರಚನೆಯೂ ಆಯಿತು. ಈ ವೇಳೆ ಚಿಕ್ಕಬಳ್ಳಾಪುರದ ನಿರ್ದೇಶಕರು ಅಧಿಕಾರ ಮೊಟಕಿನ ವಿಚಾರವನ್ನು ಮುಂದಿಟ್ಟುಕೊಂಡು ಹೈಕೋರ್ಟ್ ಮೆಟ್ಟಿಲೇರಿದರು.

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಈ ಹಿಂದಿನ ಬಿಜೆಪಿ ಸರ್ಕಾರವು ಮಾಡಿದ್ದು ಚಿಮುಲ್ ರಚನೆಯ ಆದೇಶ ರದ್ದುಗೊಳಿಸಿತು. ರದ್ದಿನ ಆದೇಶ ಪ್ರಶ್ನಿಸಿ ಬಿಜೆಪಿ ಮುಖಂಡರು ಹೈಕೋರ್ಟ್ ಮೆಟ್ಟಿಲೇರಿದರು.

‘ಇದು ರಾಜಕೀಯ ದುರುದ್ದೇಶದಿಂದ ಮಾಡಿದ ತೀರ್ಮಾನ. ಒಕ್ಕೂಟ ರಚನೆಯ ಕ್ರೆಡಿಟ್ ನನಗೆ ಮತ್ತು ಬಿಜೆಪಿಗೆ ಸಲ್ಲುತ್ತದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ದ್ವೇಷದ ರಾಜಕೀಯ ಮಾಡುತ್ತಿದೆ’ ಎಂದು ಡಾ.ಕೆ.ಸುಧಾಕರ್ ಆರೋಪಿಸಿದರು.

ಅತ್ತ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ,ಸುಧಾಕರ್ ಮತ್ತು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು, ‘ಅವೈಜ್ಞಾನಿಕವಾಗಿ ವಿಭಜನೆ ಮಾಡಲಾಗಿದೆ. ನಾವು ಸೂಕ್ತ ನಿರ್ಣಯಕೈಗೊಂಡು ವಿಭಜಿಸುತ್ತೇವೆ’ ಎಂದಿದ್ದರು. ನಂತರ ಕೋಚಿಮುಲ್, ಚಿಕ್ಕಬಳ್ಳಾಪುರದ ಮೆಗಾ ಡೇರಿ ಆವರಣದಲ್ಲಿ ₹ 130 ಕೋಟಿ ವೆಚ್ಚದ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿತು.

ಈ ನಡುವೆ ಕೋಚಿಮುಲ್ ನಿರ್ದೇಶಕರ ಅಧಿಕಾರದ ಅವಧಿ ಪೂರ್ಣಗೊಂಡಿತು. ಸರ್ಕಾರ ಕೋಚಿಮುಲ್‌ಗೆ ಚುನಾವಣೆ ನಡೆಸಲು ಮುಂದಾಯಿತು. ಇತ್ತ ಕಾಂಗ್ರೆಸ್ ನಿರ್ದೇಶಕರು ಒಕ್ಕೂಟ ವಿಭಜಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

ಬಾಗೇಪಲ್ಲಿಯಲ್ಲಿ ಕೋಚಿಮುಲ್‌ನ ವಿಶೇಷ ಸಾಮಾನ್ಯ ಸಭೆ ನಡೆಸಿ ಒಕ್ಕೂಟ ವಿಭಜನೆಗೆ ನಿರ್ಣಯಕೈಗೊಳ್ಳಲಾಯಿತು. ಈ ವಿಚಾರವನ್ನು ಹೈಕೋರ್ಟ್‌ಗೆ ತಿಳಿಸಲಾಯಿತು. 

ಈಗ ಸರ್ಕಾರ ಈ ಹಿಂದಿನ ಆದೇಶಗಳನ್ನು ಮರುಸ್ಥಾಪಿಸುವ ಮೂಲಕ ಮತ್ತೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಚಾಲನೆ ನೀಡಿದೆ. ಆಡಳಿತಾಧಿಕಾರಿ ನೇಮಕದ ಮೂಲಕ ಮತ್ತೆ ಕಾರ್ಯಾರಂಭ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT