ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮುಂಗಾರು: ಬಿತ್ತನೆಗೆ ಹಿನ್ನಡೆ

ಹಳೆಯ ವರಸೆ ಆರಂಭಿಸಿದ ವರುಣ, ಮಳೆಯ ಜೂಜಾಟಕ್ಕೆ ಮತ್ತೆ ಆವರಿಸಿಕೊಳ್ಳುತ್ತಿರುವ ಬರದ ಛಾಯೆ, ಆತಂಕದಲ್ಲಿ ರೈತಾಪಿ ವರ್ಗ
Last Updated 6 ಜುಲೈ 2019, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಜೂಜಾಟಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಕೈ ಕೊಟ್ಟ ಕಾರಣ ಜಿಲ್ಲೆಯಾದ್ಯಂತ ಬಿತ್ತನೆಗೆ ಹಿನ್ನಡೆಯಾಗಿ ಬರದ ಛಾಯೆ ಆವರಿಸಿಕೊಳ್ಳುತ್ತಿದೆ.

ಜೂನ್ ತಿಂಗಳು ಮುಗಿದು ಜುಲೈ ಮೊದಲ ವಾರ ಗತಿಸುತ್ತ ಬಂದರೂ ಮಳೆರಾಯ ಕೃಪೆ ತೋರದೇ ರೈತರು ಕಂಗಾಲು ಆಗಿದ್ದಾರೆ. ನಿತ್ಯ ಆಷಾಢದ ಗಾಳಿ ಬೀಸುತ್ತಿದೆ. ಮೋಡಗಳು ಆಗಸದಲ್ಲಿ ತೇಲಿ ಹೋಗುತ್ತಲಿವೆ. ಬಿಸಿಲು ಕೂಡ ಹೆಚ್ಚುತ್ತಲಿದೆ. ಆದರೆ ಮಳೆರಾಯ ಈಗಲಾದರೂ ಕೃಪೆ ತೋರುವವನೇ ಎಂದು ರೈತರು ಆಕಾಶದತ್ತ ಮುಖ ಮಾಡಿದ್ದಾರೆ.

ಜೂನ್‌ನಲ್ಲಿ ಸುರಿಯಬೇಕಾದ ಮಳೆಯೂ ಕೈ ಹಿಡಿಯದ ಕಾರಣ ರೈತರು ಕಂಗಾಲಾಗಿದ್ದಾರೆ. ಮುಂಗಾರು ಮಳೆ ಕೊರತೆ ಕೆಲವು ಕಡೆ ಬಿತ್ತನೆಯನ್ನೇ ಸ್ಥಗಿತಗೊಳಿಸಿದ್ದರೆ, ಮತ್ತೆ ಹಲವು ಕಡೆ ಹೊಲಗಳನ್ನು ರೈತರು ಸ್ವಚ್ಛಗೊಳಿಸದ ಕಾರಣ ಪಾಳು ಬಿದ್ದಂತೆ ಗೋಚರಿಸುತ್ತಿವೆ.

ಜೂನ್‌ ತಿಂಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದ್ದರೂ ಬಿತ್ತನೆ ಚಟುವಟಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ಆರಂಭವಾಗಿಲ್ಲ. ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು ತಾಲ್ಲೂಕುಗಳಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಬಿತ್ತನೆ ಪ್ರಮಾಣ ಶೂನ್ಯದ ಆಸುಪಾಸಿನಲ್ಲಿದೆ.

ಕೃಷಿ ಇಲಾಖೆ ಜಿಲ್ಲೆಯಲ್ಲಿ 1.54 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದೆ. ಆ ಪೈಕಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 17,579 ಹೆಕ್ಟೇರ್‌, ಗೌರಿಬಿದನೂರಿನಲ್ಲಿ 39,445 ಹೆಕ್ಟೇರ್‌, ಗುಡಿಬಂಡೆಯಲ್ಲಿ 11,886 ಹೆಕ್ಟೇರ್‌, ಬಾಗೇಪಲ್ಲಿಯಲ್ಲಿ 31,899 ಹೆಕ್ಟೇರ್‌, ಚಿಂತಾಮಣಿಯಲ್ಲಿ 35,918 ಹೆಕ್ಟೇರ್‌ ಹಾಗೂ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 17,273 ಹೆಕ್ಟೇರ್‌ನಷ್ಟು ಬಿತ್ತನೆ ಪ್ರದೇಶವಿದೆ.

ಈ ಪೈಕಿ ಈಗಾಗಲೇ ಶೇ 40 ರಿಂದ 50 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ವರುಣನ ಅವಕೃಪೆಯಿಂದಾಗಿ ಶೇ1ರಷ್ಟೂ ಬಿತ್ತನೆಯಾಗದಿರುವುದು ಕೃಷಿ ಇಲಾಖೆ ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ. ಜುಲೈ 5ರ ವರೆಗೆ ಜಿಲ್ಲೆಯಲ್ಲಿ ಶೇ 44 ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ನಾಲ್ಕೈದು ಬಾರಿ ಉತ್ತಮ ಮಳೆಯಾಗಿ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿತ್ತು. ಅದು ಮುಂಗಾರು ಹಂಗಾಮಿನಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಆದರೆ, ಅದು ಹುಸಿಯಾಗಿದೆ. ಮೋಡ ಕವಿದ ವಾತಾವರಣ ಇದ್ದರೂ ಮಳೆಯಾಗುತ್ತಿಲ್ಲ. ರಾಗಿ, ಮುಸುಕಿನ ಜೋಳ, ನೆಲಗಡಲೆ ಬಿತ್ತನೆಗೆ ಸಿದ್ಥತೆ ನಡೆಸಿರುವ ರೈತರು ಯಾವಾಗ ಮಳೆ ಬೀಳುತ್ತೋ ಎಂದು ಆಕಾಶದ ಕಡೆ ಮುಖ ಮಾಡಿದ್ದಾರೆ.

ಮಳೆಯ ಕೊರತೆಯಿಂದ ಬಿತ್ತನೆ ಬೀಜಗಳನ್ನು ಖರೀದಿಸಲು ರೈತರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಜಿಲ್ಲೆಯಾದ್ಯಂತ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿರುವ ಮುಸುಕಿನಜೋಳ, ತೊಗರಿ, ಶೇಂಗಾ ಸೇರಿದಂತೆ ಪ್ರಮುಖ ಬೆಳೆಗಳ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳನ್ನು ಖರೀದಿಸಲು ರೈತರು ಮುಂದೆ ಬರುತ್ತಿಲ್ಲ.

ಜಿಲ್ಲೆಯ ರೈತರಿಗೆ ಮಳೆ ಇಲ್ಲದ ಕಾರಣ ದಿಕ್ಕು ತೋಚದಂತಾಗಿದೆ. ಈಗಾಗಲೇ ಏಳೆಂಟು ವರ್ಷಗಳಿಂದ ಬರಗಾಲದ ಜತೆಗೆ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಿದ್ದ ರೈತ ಈ ವರ್ಷವಾದರೂ ಉತ್ತಮ ಮಳೆ, ಬೆಳೆಯಾಗುವ ಆಸೆ ಹೊಂದಿದ್ದರು. ಇದೀಗ ಅದೂ ಹುಸಿಯಾಗಿದ್ದು, ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಮತ್ತೊಂದೆಡೆ ಮಳೆಗಾಗಿ ಪ್ರತಿನಿತ್ಯ ಆಕಾಶದ ಕಡೆ ನೋಡುತ್ತಿರುವ ರೈತನ ಸ್ಥಿತಿಯನ್ನು ನೋಡಿ ಮಳೆ ಕರುಣಿಸಬಾರದೇ ಎಂದು ಕೆಲವು ಗ್ರಾಮಗಳಲ್ಲಿ ಧಾರ್ಮಿಕ ಆಚರಣೆಗಳ ಮೊರೆ ಹೋಗಿದ್ದಾರೆ. ಈ ಹಿಂದಿನ ವರ್ಷದಂತೆ ಈ ವರ್ಷವೂ ಕೂಡ ಬರದ ಛಾಯೆ ಜಿಲ್ಲೆಯನ್ನು ಕಾಡುವ ಸಾಧ್ಯತೆ ಇದೆ ಎನ್ನುತ್ತಾರೆ ಅನುಭವಿಗಳು.

‘ಜಿಲ್ಲೆಯಲ್ಲಿ ಈಗಾಗಲೇ ಶೇ 30-ರಿಂದ 40ರಷ್ಟು ಬಿತ್ತನೆಯಾಗಬೇಕಿತ್ತು. ಆದರೆ ಮಳೆ ಕೊರತೆಯಿಂದ ಬಿತ್ತನೆ ಚಟುವಟಿಕೆಗೆ ಹಿನ್ನಡೆಯಾಗಿದೆ. ತೊಗರಿ ಮತ್ತು ನೆಲಗಡಲೆ ಬೆಳೆಯುವ ರೈತರಿಗೆ ಪರ್ಯಾಯವಾಗಿ ರಾಗಿ, ಮೇವಿನ ಜೋಳ ಹಾಗೂ ಸಿರಿಧಾನ್ಯಗಳನ್ನು ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು’ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT