ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ರಾಜ್ಯದಲ್ಲಿ ರೇಷ್ಮೆಗೆ ಪ್ರಸಿದ್ದಿ. ಇಂತಿಪ್ಪ ರೇಷ್ಮೆನಾಡಿನಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸಬೇಕು ಎಂದುಬೆಳೆಗಾರರು, ರೀಲರ್‌ಗಳು ಸರ್ಕಾರವನ್ನು ಒತ್ತಾಯಿಸುತ್ತಿದ್ದರು.ಈಗ ಈ ಬೇಡಿಕೆ ಈಡೇರಿಕೆಗೆ ಕಾಲ ಕೂಡಿದೆ.
ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊದಲ ಹೆಜ್ಜೆ ಇಡಲಾಗಿದೆ. ಜಮೀನಿಗೆ ಸಂಬಂಧಿಸಿದ ಪತ್ರ ವ್ಯವಹಾರಗಳು ಅಧಿಕಾರಿಗಳ ನಡುವೆ ನಡೆದಿದೆ. ಇದು ಆಶಾವಾದವಾದರೆ ಮತ್ತೊಂದು ಕಡೆ ಜಮೀನಿನ ವಿಚಾರ ಕಗ್ಗಂಟಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಬಳಿ ಹೈಟೆಕ್ ಮಾರುಕಟ್ಟೆಗೆ ಜಿಲ್ಲಾಡಳಿತವು ಜಮೀನು ಗುರುತಿಸಿದೆ. ಆದರೆ ಈ ಜಮೀನು ಶಿಡ್ಲಘಟ್ಟದಿಂದ 15ರಿಂದ 16 ಕಿ.ಮೀ ದೂರದಲ್ಲಿದೆ. ರೀಲರ್‌ಗಳು ಮತ್ತು ರೈತರು ಇಲ್ಲಿ ಮಾರುಕಟ್ಟೆ ನಿರ್ಮಾಣವನ್ನು ವಿರೋಧಿಸುತ್ತಿದ್ದಾರೆ. ರೇಷ್ಮೆ ಇಲಾಖೆಯ ಉನ್ನತ ಅಧಿಕಾರಿಗಳಿಂದಲೂ ಕೊತ್ತನೂರಿನ ಜಮೀನು ದೂರ ಎನ್ನುವ ಮಾತುಗಳಿವೆ.
ಶಿಡ್ಲಘಟ್ಟಕ್ಕೆ ಮೂರರಿಂದ ನಾಲ್ಕು ಕಿ.ಮೀ ದೂರದಲ್ಲಿ ಮಾರುಕಟ್ಟೆ ನಿರ್ಮಿಸಬೇಕು ಎಂದು ರೈತರು ಮತ್ತು ರೀಲರ್‌ಗಳು ಆಗ್ರಹಿಸುತ್ತಿದ್ದಾರೆ. ಹಿತ್ತಲಹಳ್ಳಿ ಬಳಿ ಸರ್ಕಾರಿ ಜಮೀನಿದ್ದು ಇಲ್ಲಿ ಜಾಗ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ರೇಷ್ಮೆ ಇಲಾಖೆ ಅಧಿಕಾರಿಗಳು ಮನವಿ ಸಹ ಮಾಡಿದ್ದಾರೆ. ಜಿಲ್ಲಾಡಳಿತ ಮನಸ್ಸು ಮಾಡಿ ಶಿಡ್ಲಘಟ್ಟದ ಸುತ್ತಮುತ್ತ ಜಮೀನು ನೀಡಿದರೆ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ಕೆಲವೇ ವರ್ಷಗಳಲ್ಲಿ ನಿರ್ಮಾಣವಾಗಲಿದೆ.
ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ 10ರಿಂದ 15 ಎಕರೆ ಜಮೀನು ಅಗತ್ಯವಿದ್ದು ದೊರಕಿಸಿಕೊಡುವಂತೆ ರೇಷ್ಮೆ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿ ಅವರಿಗೆ ಪತ್ರಬರೆದಿದ್ದರು.
ಶಿಡ್ಲಘಟ್ಟದಲ್ಲಿ 1984ರಲ್ಲಿ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣವಾಯಿತು. ಈ ಮಾರುಕಟ್ಟೆ ರಾಜ್ಯದಲ್ಲಿಯೇ ಪ್ರಸಿದ್ಧವಾಗಿದೆ. ಈ ಮಾರುಕಟ್ಟೆ ನಿರ್ಮಾಣವಾಗಿ 38 ವರ್ಷಗಳ ತರುವಾಯ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆಗಳು ಸಿದ್ಧಗೊಳ್ಳುತ್ತಿವೆ.ಹೈಟೆಕ್ ಮಾರುಕಟ್ಟೆಯಲ್ಲಿ ರೈತರಿಗೆ ವಿಶ್ರಾಂತಿ ಗೃಹ, ಕ್ಯಾಂಟೀನ್, ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಹೀಗೆ ಎಲ್ಲ ಸೌಲಭ್ಯಗಳು ಇರಲಿವೆ ಎನ್ನುತ್ತಾರೆ ರೇಷ್ಮೆ ಇಲಾಖೆ ಅಧಿಕಾರಿಗಳು.
ಜಿಲ್ಲೆಯಲ್ಲಿ 18,744 ಬೆಳೆಗಾರರು:ಜಿಲ್ಲಾ ರೇಷ್ಮೆ ಇಲಾಖೆ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 2022ರ ಮಾ.31ರ ವೇಳೆಗೆ 18,744 ಮಂದಿ ರೇಷ್ಮೆ ಬೆಳೆಗಾರರು ಇದ್ದಾರೆ. ದೊಡ್ಡ ಮತ್ತು ಮಧ್ಯಮ ಬೆಳೆಗಾರರು ಯಾರೂ ಇಲ್ಲ. ಅರೆ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ರೇಷ್ಮೆ ಬೆಳೆಗಾರರು ಇದ್ದಾರೆ. ಚಿಂತಾಮಣಿ ತಾಲ್ಲೂಕಿನಲ್ಲಿ 4,752, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 6,758, ಚಿಕ್ಕಬಳ್ಳಾಪುರ 2,198, ಗೌರಿಬಿದನೂರು 2,953, ಬಾಗೇಪಲ್ಲಿ 1,700, ಗುಡಿಬಂಡೆಯಲ್ಲಿ 387 ಮಂದಿ ರೇಷ್ಮೆ ಬೆಳೆಗಾರರು ಇದ್ದಾರೆ.
ಜಿಲ್ಲೆಯಲ್ಲಿ ಒಟ್ಟು21,322 ಹೆಕ್ಟೇರ್‌ನಲ್ಲಿ ಹಿಪ್ಪು ನೇರಳೆ ಬೆಳೆಯಲಾಗುತ್ತಿದೆ. ಮಿಶ್ರತಳಿ ಮತ್ತು ದ್ವಿತಳಿ ಸಂಕರಣ ಸೇರಿ ಒಟ್ಟು 12,139 ಟನ್ ರೇಷ್ಮೆಗೂಡು ಉತ್ಪಾದನೆ ಆಗುತ್ತಿದೆ. ಹೀಗೆ ರೇಷ್ಮೆ ಉತ್ಪಾದನೆಗೆ ರಾಜ್ಯದಲ್ಲಿಯೇ ಶಿಡ್ಲಘಟ್ಟ ಪ್ರಮುಖವಾಗಿದೆ.
ಮಾರ್ಚ್ 12ರಂದುತಾಲ್ಲೂಕಿನ ಗುಂಗೀರ್ಲಹಳ್ಳಿಯಲ್ಲಿ ‘ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆ’ಗೆ ಚಾಲನೆ ನೀಡಲು ಬಂದಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ’ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.