ಶನಿವಾರ, ಜುಲೈ 24, 2021
21 °C
ಜಿಲ್ಲೆಯ ವಿವಿಧ ಬ್ಯಾಂಕ್‍ ಶಾಖೆಗಳ ವ್ಯವಸ್ಥಾಪಕರ ಸಭೆ

ಅರ್ಹ ಫಲಾನುಭವಿಗಳಿಗೆ ಸಾಲ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಲಾಕ್‍ಡೌನ್‌ನಿಂದ ಕುಸಿತ ಕಂಡ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆರ್ಥಿಕ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ₹3 ಲಕ್ಷ ಕೋಟಿ ಖಾತರಿಪಡಿಸಿದ ತುರ್ತು ಸಾಲ (ಜಿಇಸಿಎಲ್) ಯೋಜನೆಯ ಪ್ಯಾಕೇಜ್ ಘೋಷಿಸಿದೆ. ಸಂಕಷ್ಟದಲ್ಲಿರುವ ಉದ್ಯಮಿಗಳಿಗೆ ಜಿಇಸಿಎಲ್ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲೆಯ ವಿವಿಧ ಬ್ಯಾಂಕ್‍ ಶಾಖೆಗಳ ವ್ಯವಸ್ಥಾಪಕರ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರ ಕೃಷಿ ಚಟುವಟಿಕೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಎಲ್ಲ ಬ್ಯಾಂಕ್‌ಗಳಿಗೂ ಅನ್ವಯಿಸುವಂತೆ ಪರಿಚಯಿಸಿರುವ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಸಾಲದ ಪ್ರಯೋಜನ ಕೃಷಿಕರು, ಮೀನುಗಾರರು, ಹೈನುಗಾರರಿಗೆ ತಲುಪುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಕೋವಿಡ್-19 ಸೋಂಕಿನ ಕಾರಣಕ್ಕೆ ಕಿಸಾನ್ ಕಾರ್ಡ್‍ಗಳನ್ನು ರೈತರಿಗೆ ತಲುಪಿಸಲು ತಡವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.  ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪಂಚಾಯಿತಿ, ನಾಡಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಬೇಕು’ ಎಂದು ಸೂಚಿಸಿದರು.

‘ಕಿಸಾನ್ ಕ್ರೆಡಿಟ್ ಹೊಂದಿರುವ ರೈತರಿಗೆ ಸುಮಾರು ₹3ಲಕ್ಷದ ವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಹೈನುಗಾರರಿಗೆ ಅವಶ್ಯವಿರುವ ಅಲ್ಪಾವಧಿಯ ಸಾಲ ನೀಡುವ ಮೂಲಕ ಹೈನುಗಾರಿಕೆಗೆ ರೈತರನ್ನು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್, ಜಿಲ್ಲಾ ಕೈಗಾರಿಕಾ ಕೇಂದ್ರ ವ್ಯವಸ್ಥಾಪಕ ಅತಿಕುಲ್ಲಾ ಷರೀಫ್, ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕ ಶಂಕರ್ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು