ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ತಡೆಗೋಡೆ ಪುನರುಜ್ಜೀವನಗೊಳಿಸುವ ಕೆಲಸವಾಗಲಿ

Last Updated 17 ಆಗಸ್ಟ್ 2020, 16:48 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಒಂದು ಕಾಲದಲ್ಲಿ ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಕೆರೆಗಳಿರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಇಂದು ನೀರಿನದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ನೀರು ಸಂರಕ್ಷಣೆ ವಿಚಾರ ಗಂಭೀರ ಚಿಂತನೆಗೆ ಒಡ್ಡಿದೆ.

ಇದೇ ಹೊತ್ತಿನಲ್ಲಿ, ತಾಲ್ಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಿಕುಂಟೆ ಬೆಟ್ಟದ ಮೇಲೆ ಶತಮಾನಗಳ ಹಿಂದೆಯೇ ಇಟ್ಟಿಗೆ ದುರ್ಗವನ್ನು ಆಳಿದವರು ವೈಜ್ಞಾನಿಕ ರೀತಿಯಲ್ಲಿ ನೀರಿನ ಸಂರಕ್ಷಣೆ, ನೀರು ಇಂಗಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಕಾರ್ಯಗಳು ಇಂದಿನವರಿಗೆ ಮಾದರಿಯಾಗಬೇಕಿದೆ.

ನೂರಾರು ಅಡಿಗಳಷ್ಟು ಬೆಟ್ಟ ಹತ್ತಿ ಮೇಲ್ಭಾಗ ಸುತ್ತಿದರೆ ಕೋಟೆ ಮತ್ತು ಬುರೂಜುಗಳ ಬದಲು ನೀರು ಸಂರಕ್ಷಿಸಲು ನಿರ್ಮಿಸಿರುವ ದೊಣೆ , ಹೊಂಡ ,ಬಾವಿ, ಕಲ್ಯಾಣಿಗಳು ಕಾಣಸಿಗುತ್ತವೆ.

ಇಟ್ಟಿಗೆ ದುರ್ಗದ ಬೆಟ್ಟದ ಮೇಲೆ ಬೀಳುವ ಮಳೆ ನೀರು ಉತ್ತರ ಮುಖವಾಗಿ ಅಕ್ಕಮ್ಮ ದೊಣೆಗೆ ಹಾಗೂ ದಕ್ಷಿಣ ಮುಖವಾಗಿ ಸಂಜೀವಮ್ಮ ಕೆರೆ ಬರುತ್ತದೆ. ನಿರಂತರವಾಗಿ ಮಳೆ ಬಂದಾಗ ಮಾತ್ರ ಬೆಟ್ಟದ ಮೇಲಿನಿಂದ ನೀರು ಕೆಳಗೆ ಹರಿಯುತ್ತದೆ. ಮಳೆ ಸಣ್ಣದಾಗಿ ಸುರಿದರೆ ಬೆಟ್ಟದ ಮೇಲೆ ಕಲ್ಯಾಣಿ ಮಾದರಿಯಲ್ಲಿ ನಿರ್ಮಿಸಲಾಗಿರುವ ತಡೆಗೋಡೆಗಳ ಮೂಲಕ ಇಂಗುತ್ತದೆ.

ಬೆಟ್ಟದ ಮೇಲೆ ಸಂಗ್ರಹವಾಗುವ ನೀರಿನಿಂದಲೇ ಅಕ್ಕಮ್ಮ ದೊಣೆ ನೀರು ಸರ್ವ ಋತುವಿನಲ್ಲಿಯೂ ತುಂಬಿರುತ್ತದೆ. ಈ ನೀರು ದೇವಿಕುಂಟೆ ಗ್ರಾಮದ ಕುಡಿಯುವ ನೀರಿನ ಬಾವಿಗೆ ಸಂಪರ್ಕ ಹೊಂದಿದ್ದು. ಈ ನೀರಿನಿಂದ ಸುಮಾರು 400 ಜನಕ್ಕೂ ಹೆಚ್ಚು ಜನರ ದಾಹ ತಣಿಯುತ್ತದೆ.

ಬೆಟ್ಟದ ಮೇಲೆ ಅಂದಿನ ಕಾಲಕ್ಕೆ ಮಳೆ ನೀರನ್ನೂ ತಡೆದು ನಿಲ್ಲಿಸಲು ಕಲ್ಲಿನಿಂದ ನಿರ್ಮಿಸಲಾಗಿರುವ ತಡೆಗೋಡೆ ಕಲ್ಲುಗಳು ಕಾಲಾನುಕ್ರಮದಲ್ಲಿ ಅಲ್ಲಲ್ಲಿ ಹಾಳಾಗಿವೆ. ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ ವತಿಯಿಂದ ಹಾಳಾಗಿರುವ ತಡೆಗೋಡೆ ಪುನರುಜ್ಜೀವನಗೊಳಿಸುವ ಕೆಲಸ ಆಗಬೇಕಿದೆ.

***

ಆಗ ಮಾತ್ರ ಬೆಟ್ಟದ ಮೇಲೆ ನೀರು ಸಂಗ್ರಹವಾಗಿ ಇಂಗಿ ಬೆಟ್ಟದ ಹಸಿರು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವೂ ಗಮನ ಹರಿಸಬೇಕಿದೆ.

- ಡಿ.ಜಿ.ಪವನ್ ಕಲ್ಯಾಣ್, ಬಾಗೇಪಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT