ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಒಡೆದ ಮನೆಯಾದ ಚಿಕ್ಕಬಳ್ಳಾಪುರ ಕಾಂಗ್ರೆಸ್

ಮುಖಂಡರ ನಡುವೆ ಕದಡಿದ ಮನಸ್ಸು
ಡಿ.ಎಂ.ಕುರ್ಕೆ ಪ್ರಶಾಂತ್
Published 3 ಮಾರ್ಚ್ 2024, 6:09 IST
Last Updated 3 ಮಾರ್ಚ್ 2024, 6:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನಮ್ಮಲ್ಲಿ ಎಲ್ಲವೂ ಸರಿ ಇದೆ. ಯಾವುದೇ ಬಣಗಳು ಇಲ್ಲ. ಒಗ್ಗಟ್ಟಾಗಿದ್ದೇವೆ’–ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಪ್ರಮುಖ ಮುಖಂಡರನ್ನು ‘ನಿಮ್ಮಲ್ಲಿ ಒಡಕಿದೆಯಂತೆ’ ಎಂದು ಪ್ರಶ್ನಿಸಿದರೆ ಬಹಿರಂಗವಾಗಿ ಅವರು ಹೇಳುವ ಉತ್ತರ ಇದು. 

ಆಂತರಿಕವಾಗಿ ಪಕ್ಷದ ವಿದ್ಯಮಾನಗಳ ಬಗ್ಗೆ ಮಾಹಿತಿ ಕೆದಕಿದರೆ, ಸಮಸ್ಯೆಗಳನ್ನೇ ಬಿಚ್ಚಿಡುವರು. ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳಾಗಿದೆ. ಆದರೆ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಮಾತ್ರ ಆಗಾಗ್ಗೆ ಮುಸುಕಿನ ಗುದ್ದಾಟ ಬುಗಿಲೇಳುತ್ತದೆ.

ಪಕ್ಷದ ಬೆಳವಣಿಗೆಗಳ ಇಷ್ಟು ದಿನ ಮುಸುಕಿನ ಗುದ್ದಾಟ ಮತ್ತು ಒಡಕು ಇದ್ದರೂ ಬಹಿರಂಗವಾಗಿದ್ದು ಕಡಿಮೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅವರನ್ನು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸುತ್ತಿದ್ದಂತೆ, ಬೂದಿ ಮುಚ್ಚಿದ್ದ ಕೆಂಡದಂತಿದ್ದ ಆಕ್ರೋಶ ಸ್ಫೋಟವಾಗಿದೆ. 

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜನಪ್ಪ, ‘ಎಲ್ಲವನ್ನೂ ನಾನೇ ಹೇಳಬೇಕಾ? ಸಾರ್ವಜನಿಕವಾಗಿ ಮಾತನಾಡಲು ಪಕ್ಷದ ಮುಖಂಡರು ಹಿಂಜರಿಯುವರು’ ಎಂದು ಖಡಕ್ಕಾಗಿಯೇ ಹೇಳುತ್ತಿದ್ದರೆ. ‘ನಾವು ಹೇಳಿರುವ ವ್ಯವಸ್ಥೆಯ ಪ್ರಕಾರ ಆಯ್ಕೆ ಆಗಿಲ್ಲ ಎನ್ನುವ ಅಸಮಾಧಾನವಿದೆ. ನನ್ನ ಒಬ್ಬನನ್ನು ಮಾತನಾಡಲು ಬಿಟ್ಟು ಮುಗುಮ್ಮಾಗಿದ್ದರೆ ಹೇಗೆ. ನಾನು ಸ್ಪಷ್ಟವಾಗಿರುವ ಮನುಷ್ಯ’ ಎಂದು ವೇದಿಕೆಯಲ್ಲಿದ್ದ ಮುಖಂಡರ ಎದುರೇ ನುಡಿದರು. 

ಈ ಗೋಷ್ಠಿಯ ನಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ‘ಲಾಯರ್’ ನಾರಾಯಣಸ್ವಾಮಿ ನಡೆಸಿದ ಮತ್ತೊಂದು ಸುದ್ದಿಗೋಷ್ಠಿಯೂ ಸಹ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನ ಛಿದ್ರವಾದ ಚಿತ್ರಗಳನ್ನು ಹೇಳುತ್ತಿತ್ತು. ‘ಚಿಕ್ಕಬಳ್ಳಾಪುರ ಕಾಂಗ್ರೆಸ್ ಬೆಳವಣಿಗೆಗಳ ಮೇಲೆ ಸಚಿವರು ಗಮನವಹಿಸಬೇಕು. ಶಾಸಕರಿಗೆ ಆಡಳಿತದ ಅನುಭವವೇ ಇಲ್ಲ. ಪಕ್ಷಕ್ಕೆ ಸುದೀರ್ಘವಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ. ನಿಷ್ಠಾವಂತರನ್ನು ಕಡೆಗಣಿಸಿದರೆ ಕೆಪಿಸಿಸಿ ಕಚೇರಿ ಎದುರು ಆಮರಣಾಂತ ಉಪವಾಸ ನಡೆಸುತ್ತೇವೆ’ ಎಂದು ನಾರಾಯಣಸ್ವಾಮಿ ಆಕ್ರೋಶದಿಂದ ನುಡಿದರು.  

ಚಿಕ್ಕಬಳ್ಳಾಪುರ ಕ್ಷೇತ್ರದ ಬಹುತೇಕ ನಾಯಕರು ಕೇಶವರೆಡ್ಡಿ ನೇಮಕಕ್ಕೆ ಆಕ್ರೋಶಗೊಂಡಿದ್ದರೆ ಮತ್ತೊಂದಿಷ್ಟು ಮುಂದಿ ಕೇಶವ ರೆಡ್ಡಿ ಆಯ್ಕೆಗೆ ಸಹಮತ ವ್ಯಕ್ತಪಡಿಸುತ್ತಿದ್ದಾರೆ. 

ಮುಂದಿನ ದಿನಗಳಲ್ಲಿಯೂ ವಿವಿಧ ನಾಮನಿರ್ದೇಶನಗಳು, ನೇಮಕಗಳ ಸಂದರ್ಭದಲ್ಲಿ ಈ ಬಣಗಳ ನಡುವಿನ ತಿಕ್ಕಾಟ ಏರ್ಪಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

ಲೋಕಸಭೆ ಚುನಾವಣೆಯ ಈ ಸಂದರ್ಭದಲ್ಲಿ ಪಕ್ಷದಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳು ಸಹ ವಿರೋಧಿ ಪಾಳಯಕ್ಕೆ ವರವಾಗಲಿದೆ. ಶಾಸಕರು ತಮ್ಮನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂದು ಅಸಮಾಧಾನಗೊಂಡಿರುವ ಕೆಲವು ಪ್ರಮುಖ ಕಾಂಗ್ರೆಸ್ ಮುಖಂಡರನ್ನು ಮಾಜಿ ಸಚಿವ ಡಾ.ಕೆ.ಸುಧಾಕರ್ ಆಪ್ತರು ಈಗಾಗಲೇ ಸಂಪರ್ಕಿಸಿದ್ದಾರೆ. ಸುಧಾಕರ್‌ಗೆ ಬಿಜೆಪಿ ಟಿಕೆಟ್ ದೊರೆತರೆ ಅವರ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ಸಹ ನೀಡಿದ್ದಾರೆ ಎನ್ನುತ್ತವೆ ಖಚಿತ ಮೂಲಗಳು. 

ಶಾಸಕರಿಗಿಲ್ಲ ಪಕ್ಷದ ಮೇಲೆ ಹಿಡಿತ?
ಚಿಕ್ಕಬಳ್ಳಾಪುರ ಕಾಂಗ್ರೆಸ್‌ನ ಬೆಳವಣಿಗೆಗಳನ್ನು ನೋಡಿದರೆ ಶಾಸಕ ಪ್ರದೀಪ್ ಈಶ್ವರ್‌ ಅವರಿಗೆ ಪಕ್ಷದ ಮೇಲೆ ಇಂದಿಗೂ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ವಿಧಾನಸಭೆ ಚುನಾವಣೆಯ ನಂತರ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಇವೆ. ಮೇಲ್ನೋಟಕ್ಕೆ ಒಗ್ಗಟ್ಟು ಎಂದರೂ ಆಂತರಿಕವಾಗಿ ಬೇರೆಯರದ್ದೇ ರಾಜಕೀಯ ಆಟಗಳಿವೆ. ಶಾಸಕರು ಪಟ್ಟು ಹಿಡಿದ್ದರೆ ಗೌರಿಬಿದನೂರು ತಾಲ್ಲೂಕಿನವರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಅವರನ್ನು ಚಿಕ್ಕಬಳ್ಳಾಪುರ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ಮಾಡಲು ಹೇಗೆ ಸಾಧ್ಯವಿತ್ತು ಎಂದು ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ಆಕ್ರೋಶ ವ್ಯಕ್ತಪಡಿಸುವರು. ಶಾಸಕರು ಮತ್ತು ಸಚಿವರ ನಡುವೆಯೂ ಉತ್ತಮ ಸಂಬಂಧವಿಲ್ಲ. ಕ್ಷೇತ್ರಕ್ಕೆ ನಿಯಮಿತವಾಗಿ ಬರುವುದೂ ಇಲ್ಲ. ಮಾತುಗಾರ ಶಾಸಕರು ಕೆಲಸಗಾರರಲ್ಲ. ಪಕ್ಷಕ್ಕೆ ದುಡಿಯುವ ಕಾರ್ಯಕರ್ತರು ಇದ್ದಾರೆ. ಆದರೆ ಸಂಘಟನೆ ಮತ್ತು ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ ನಾಯಕರು ಚಿಕ್ಕಬಳ್ಳಾಪುರದಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸುವರು.

ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ ಕೇಶವರೆಡ್ಡಿ ವಿರುದ್ಧ ಆಕ್ರೋಶ

‘ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಂದ ಸಾಮಾಜಿಕ ನ್ಯಾಯದ ಕಗ್ಗೊಲೆ; ಕಾಂಗ್ರೆಸ್ ಪಕ್ಷದಲ್ಲಿ ಪ್ರಶ್ನಿಸುವವರು ಯಾರು ಇಲ್ಲವೇ?’ ಎಂದು ಸಂದೇಶವೊಂದು ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ತಾಲ್ಲೂಕು ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಜಿ.ಕೊತ್ತೂರು ಹಾಲು ಉತ್ಪಾದಕರ ಸಂಘದ ಸರ್ಕಾರದ ಅಧಿಕಾರೇತರ ನಾಮ ನಿರ್ದೇಶಕರಾಗಿ ನೇಮಕ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕ ಹಾಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ 3ನೇ ಬಾರಿ ತಮ್ಮ ಸಂಬಂಧಿಕ  ಹನುಮಂತರೆಡ್ಡಿ ಅವರನ್ನ ಜಿ.ಕೊತ್ತೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನೇಮಕ.ಜಿ.ಕೊತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ನಿಮ್ಮ ಹೆಂಡತಿಯನ್ನು ಮಾಡಿದ್ದೀರಿ ಜಿಲ್ಲಾ ಪಂಚಾಯಿತಿಯ ಸದಸ್ಯ ಅಧ್ಯಕ್ಷರಾಗಿದ್ದೀರಿ....ನಿಮ್ಮ ಅಧಿಕಾರದ ಆಸೆಗೆ ಕೊನೆಯೇ ಇಲ್ಲವೆ ದುರಾಸೆಯ ಪರಮಾವಧಿ ಎನ್ನುವ ಸಂದೇಶ ಇದಾಗಿದೆ. ‘ನಾವು ಶಿವಶಂಕರ ರೆಡ್ಡಿ ಅವರಿಂದ ದೂರವಾಗಲು ಕೇಶವರೆಡ್ಡಿ ಅವರೇ ಕಾರಣ. ಜಿಲ್ಲಾ ಅಧ್ಯಕ್ಷರಾಗಿ ಶಿವಶಂಕರ ರೆಡ್ಡಿ ಅವರ ಕೈ ಬಲಪಡಿಸಬೇಕಾಗಿತ್ತು. ಆದರೆ ಜಿಲ್ಲಾ ಅಧ್ಯಕ್ಷರ ಬೂತ್‌ನಲ್ಲಿಯೇ ಪುಟ್ಟಸ್ವಾಮಿ ಗೌಡ ಅವರ ಮುನ್ನಡೆ ಪಡೆದರು’ ಎಂದು ಮುಖಂಡರೊಬ್ಬರು ತಿಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT